ಕಂಪ್ಲಿ: ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ…ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡುವ ಹಾಡುಗಳನ್ನು ಕೇಳುವುದೇ ಚಂದ.
Advertisement
ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ. ಮಡಿವಾಳರ ಕೇರಿ ಹೊಕ್ಯಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ. ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುಗಳನ್ನು ಹಾಡುವ ಬಾರಿಕೇರ ಸಮುದಾಯದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆಯನ್ನು ಇಟ್ಟು ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆ ಕಂಪ್ಲಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸದ್ಯ ಕಂಡು ಬರುತ್ತಿದೆ.
Related Articles
Advertisement
ಜೋಕುಮಾರಸ್ವಾಮಿಯ ಜನಪದ ಕಥೆ: ಗಣೇಶ ಹಬ್ಬದ ಮರುದಿನ ಆರಂಭವಾಗುವ ಜೋಕುಮಾರಸ್ವಾಮಿ ಆಚರಣೆ ಹಿಂದೆಯೂ ಒಂದು ಜಾನಪದ ಕಥೆಯಿದೆ. ಈ ಕುರಿತಂತೆ ಈ ಭಾಗದ ಮಹಿಳೆಯರು ಹೇಳುವುದು ಹೀಗೆ.
‘ಜೋಕ ಮತ್ತು ಎಳೆಗೌರಿ’ ದಂಪತಿಗೆ ಬಹುಕಾಲ ಮಕ್ಕಳಾಗದ ಕಾರಣ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಕರುಣಿಸುತ್ತಾನೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳೆ ದಿನಗಳ ಆಯಸ್ಸು ಇರುತ್ತದೆ. ಹೀಗಿರಬೇಕಾದರೆ, ಒಮ್ಮೆ ನಾಡಿನಲ್ಲಿ ಮಳೆ ಹೋಗಿ ಬೆಳೆಗಳೆಲ್ಲಾ ಒಣಗಿ ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಹೊಲಗದ್ದೆಗಳಲ್ಲಿ ಸಂಚರಿಸತೊಡಗುತ್ತಾನೆ. ಅವನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ. ಯಥೇಚ್ಛವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆ ಕುಂಟೆಗಳು ತುಂಬಿತುಳುಕುತ್ತವೆ.
ಇದರಿಂದ ಸಂತಸಗೊಂಡು ಜೋಕುಮಾರನು ಹಾಗೆ ಹೊಲ ಗದ್ದೆಗಳಲ್ಲಿ ಸಂಚರಿಸುತ್ತಿರುವಾಗ ಸುಂದರಿಯಾದ ಅಗಸರ ಸಮುದಾಯದ ಯುವತಿಯನ್ನು ನೋಡಿ ಇಷ್ಟಪಡುತ್ತಾನೆ. ಇದನ್ನು ಸಹಿಸದ ಆ ಯುವತಿಯ ತಂದೆ ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆಯುತ್ತಾನೆ. ಆ ತಲೆಯು ಒಬ್ಬ ಬೆಸ್ತರನಿಗೆ ದೊರಕುತ್ತದೆ. ಆತನು ಇದು ಜೋಕುಮಾರನ ತಲೆ ಎಂದು ಗುರುತಿಸುತ್ತಾನೆ.
ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಿದ್ದಂತೆ ಊರವರೆಲ್ಲಾ ಸೇರಿ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಜೋಕುಮಾರನ ಪೂಜೆ ಆಚರಣೆಗೆ ಬಂದಿದೆ ಎಂದು ಮಹಿಳೆಯರು ಜೋಕುಮಾರನ ಕಥೆಯನ್ನು ವಿವರಿಸುತ್ತಾರೆ.