Advertisement
ಪ್ರಸ್ತುತ ದಿನಗಳಲ್ಲಿ ಗದ್ದೆ ನಾಶವಾಗುತ್ತಿದ್ದು, ಅನ್ನದ ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬುದು ಇಂದಿನ ಪೀಳಿಗೆಗೆ ಗೊತ್ತಿಲ್ಲ. ಹೀಗಾಗಿ ಕೆಲವೊಂದೆಡೆ ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಕೃಷಿ ಪಾಠವನ್ನು ನೀಡಲಾಗುತ್ತದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಪೂರ್ತಿ ಅರಿವು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಕೆಮ್ಮಟೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಎಸ್‌ಡಿಎಂ ಪದಾಧಿಕಾರಿಗಳು, ಊರವರು ಸೇರಿಕೊಂಡು ಶಾಲೆಯ ಮುಂಭಾಗದಲ್ಲಿ ಸಣ್ಣದಾಗಿ ಗದ್ದೆಯೊಂದನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಭತ್ತದ ಪೈರು ಉತ್ತಮವಾಗಿ ಬೆಳೆದಿದ್ದು, ತಿಂಗಳೊಳಗೆ ತೆನೆ ಬಿಡುವ ಹಂತಕ್ಕೆ ಮುಟ್ಟಿದೆ. ಶಾಲೆಯ ಗೌರವ ಶಿಕ್ಷಕಿ ವಸಂತಿ ಪಿ. ನಿಡ್ಲೆ ಅವರ ಕಲ್ಪನೆಯಲ್ಲಿ ಗದ್ದೆ ರೂಪುಗೊಂಡಿದೆ. ಆರಂಭದಲ್ಲಿ ಹಟ್ಟಿ ಗೊಬ್ಬರ ಬಳಸಲಾಗಿದ್ದು, ಕೆಲವು ದಿನಗಳ ಹಿಂದೆ ರಾಸಾಯನಿಕ ಗೊಬ್ಬರವನ್ನೂ ಬಳಸಲಾಗಿದೆ.
ಈ ವರ್ಷ ಮೊದಲ ಬಾರಿಗೆ ಗದ್ದೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಗದ್ದೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಆಶಯ ಇವರಲ್ಲಿದೆ. ಶಾಲೆಗೆ ಸುಮಾರು 2 ಎಕರೆಯಷ್ಟು ಸ್ಥಳವಿದ್ದು, ಮೈದಾನವೂ ವಿಸ್ತಾರವಾಗಿದೆ. ಈ ಬಾರಿ ಉತ್ತಮ ಬೆಳೆ ಸಿಕ್ಕರೆ ಮುಂದೆ ಮೈದಾನದ ಒಂದು ಬದಿಯಲ್ಲಿ ದೊಡ್ಡ ಗದ್ದೆ ಮಾಡಲಾಗುವುದು. ಈ ಭಾಗದಲ್ಲಿ ಪ್ರಾಣಿ, ಪಕ್ಷಿಗಳ ಹಾವಳಿ ಹೆಚ್ಚಿದ್ದು, ಪೈರನ್ನು ನಾಶ ಮಾಡುವ ಆತಂಕವಿತ್ತು. ಜತೆಗೆ ಶಾಲೆಗೆ ಆವರಣ ಗೋಡೆ ಇಲ್ಲದಿರುವುದರಿಂದ ಜಾನುವಾರುಗಳು ತಿಂದು ಹಾಕುವ ಭೀತಿಯೂ ಇತ್ತು. ಹೀಗಾಗಿ ಸಣ್ಣ ಮಟ್ಟದಲಿ ಬೆಳೆದು, ಮುಂದೆ ವಿಸ್ತರಿಸುವ ಆಲೋಚನೆ ಇದೆ ಎಂದು ಶಿಕ್ಷಕಿ ಹೇಳುತ್ತಾರೆ.
Related Articles
ಪ್ರಸ್ತುತ ಇರುವ ಗದ್ದೆಯಿಂದ ಉತ್ತಮ ಭತ್ತ ಲಭಿಸಿ, ಅಕ್ಕಿ ಸಿಕ್ಕರೆ ಮಕ್ಕಳ ಜತೆಗೆ ಊರವರನ್ನೂ ಕರೆದು ಹೊಸ ಅಕ್ಕಿ ಊಟ ಮಾಡಿಸುವ ಆಲೋಚನೆ ಶಾಲೆಯ ಮುಂದಿದೆ. ಆದರೆ ಭತ್ತದ ತೆನೆಯನ್ನು ನೋಡದೆ ಏನೂ ಹೇಳುವಂತಿಲ್ಲ ಎಂದು ಅಭಿಪ್ರಾಯಿಸುತ್ತಾರೆ.
Advertisement
ಸಮೃದ್ಧ ಫೈರು ಶಾಲೆಯವರ ಜತೆ ಊರವರು ಸೇರಿಕೊಂಡು ಶಾಲೆಯ ಮುಂದಿನ ಒಂದಷ್ಟು ಭಾಗವನ್ನು ಹಾರೆ-ಪಿಕ್ಕಾಸು ಬಳಸಿ ಹದ ಮಾಡಿಕೊಂಡು, ಬಳಿಕ ಸ್ಥಳೀಯ ಕೃಷಿಕರಿಂದ ಭತ್ತದ ಪೈರನ್ನು ಪಡೆದು ನೆಡಲಾಗಿತ್ತು. ಜುಲೈ ಆರಂಭದಲ್ಲಿ ನಾಟಿ ಮಾಡಲಾಗಿದ್ದು, ಧಾರಾಕಾರ ಮಳೆಯಿಂದಾಗಿ ಭತ್ತದ ಪೈರು ನಾಶವಾಗುತ್ತದೆ ಎಂಬ ಆತಂಕದ ನಡುವೆಯೂ ಪ್ರಸ್ತುತ ಪೈರು ಸಮೃದ್ಧವಾಗಿ ಬೆಳೆದಿದೆ. ಕಲಿಕೆಗೆ ಹೆಚ್ಚಿನ ಆಸಕ್ತಿ
ಕೃಷಿ ಕುರಿತು ಮಕ್ಕಳಿಗೆ ಅರಿವು ಮೂಡಬೇಕು ಎಂಬ ಕಲ್ಪನೆಯಿಂದ ಶಿಕ್ಷಕರು, ಹೆತ್ತವರು ಸೇರಿಕೊಂಡು ಈ ಕಾರ್ಯ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಸಾಧ್ಯ. ಸರಕಾರಿ ಶಾಲೆಗಳಲ್ಲಿ ಇಂತಹ ಪ್ರಯೋಗಗಳನ್ನು ಮಾಡಿದಾಗ, ಶಾಲೆಗಳ ಉಳಿವಿಗೆ ಅನುಕೂಲವಾಗುತ್ತದೆ.
- ಅಬೂಬಕ್ಕರ್ ಅಧ್ಯಕ್ಷರು, ಎಸ್‌ಡಿಎಂಸಿ. ಶಿಕ್ಷಕಿಯ ಪ್ರಯತ್ನ
ಶಿಕ್ಷಕಿ ವಸಂತಿ ಅವರ ಪ್ರಯತ್ನದ ಜತೆಗೆ ಊರವರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಭತ್ತವನ್ನು ಹೇಗೆ ಬೆಳೆಯಲಾಗುತ್ತದೆ, ಕಟಾವು ಹೇಗೆ ಎಂಬ ಕ್ರಮಗಳು ಮಕ್ಕಳಿಗೆ ತಿಳಿಯಬೇಕು ಎಂಬ ಆಶಯದೊಂದಿಗೆ ಶ್ರಮ ವಹಿಸಲಾಗಿದೆ.
– ಶಿಲ್ಪಾ ಮುಖ್ಯ ಶಿಕ್ಷಕಿ ಕಿರಣ್ ಸರಪಾಡಿ