“ಕಂಬ್ಳಿಹುಳ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿಒದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿನಿಮಾ ಮಾಯಾಜಗತ್ತು. ಸಿಹಿ ಕಹಿ ಎಲ್ಲವೂ ಇದರಲ್ಲಿರುತ್ತೆ. ಒಂದು ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ ಈ ಚಿತ್ರದ ನಿರ್ಮಾಪಕರಲ್ಲಿಯೂ ಅಂತಹದ್ದೊಂದು ಹೋರಾಟದ ಮನೋಭಾವ ಇದ್ದಿದ್ದರಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಲೆನಾಡಿನ ಯುವಕರು ತಾವು ಬೆಳೆದಂತ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ “ಕಂಬ್ಳಿಹುಳ’ ಸಿನಿಮಾ ಟ್ರೇಲರ್ ನೋಡಿದಾಗ ನನಗೂ ಅದೇ ಅನಿಸಿದ್ದು, ಖಂಡಿತಾ ಸಿನಿಮಾ ಯಶಸ್ಸು ಆಗುತ್ತದೆ’ ಎನ್ನುತ್ತಾ ಶುಭಕೋರಿದರು.
ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ “ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು, ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ನಿರ್ದೇಶಕ ನವನ್ ಶ್ರೀನಿವಾಸ್ ಮಾತನಾಡಿ, ಇಡೀ ಸಿನಿಮಾ ತಂಡ ಹೊಸಬರಿಂದ ಕೂಡಿದ್ದರಿಂದ 90 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಇದೀಗ ಅಷ್ಟು ದಿನಗಳ ಶ್ರಮ ನವೆಂಬರ್ 4ರಂದು ತೆರೆ ಮೇಲೆ ಅನಾವರಣಗೊಳ್ಳುತ್ತಿದೆ. ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ನಾನು ಕೂಡ ಮಲೆನಾಡಿನವನಾದ್ದರಿಂದ ಸುಲಭವಾಗಿ ಹೇಳಬಹುದೆಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ’ ಎಂದರು.
ನಾಯಕ ಅಂಜನ್ ನಾಗೇಂದ್ರ, ನಾಯಕಿ ಅಶ್ವಿತಾ ಸಿನಿಮಾದ ಅನುಭವ ಹಂಚಿಕೊಂಡರು. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಾಣಾಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ.