ಹಚ್ಚ ಹಸಿರು ತುಂಬಿದ ಮಲೆನಾಡು, ಅಲ್ಲಿ ಕನಸುಗಳನ್ನು ಹೊತ್ತ ಚಿಗುರು ಮೀಸೆಯ ಹುಡುಗ. ಸಿವಿಲ್ ಇಂಜಿನಿಯರ್ ಆದರೂ ಕೂಡ ಸಿನಿಮಾ ಮಾಡಬೇಕು, ನಿರ್ದೇಶಕನಾಗಬೇಕು ಎಂಬ ಹಂಬಲ. ಈ ನಡುವೆ ಚಿಗುರೊಡೆಯುವ ಪ್ರೇಮ. ಸ್ನೇಹ, ಪ್ರೀತಿ, ನಿರ್ದೇಶನದ ಕನಸು. ಇವುಗಳ ಉಳಿವಿಗಾಗಿ ಸತತ ಪ್ರಯತ್ನ. ಇದು ಈ ವಾರ ತೆರೆ ಕಂಡ “ಕಂಬ್ಳಿಹುಳ’ ಚಿತ್ರದ ಸಾರಾಂಶ.
ಒಂದು ಪ್ರೇಮ ಕಥೆಯ ಜೊತೆ ಸಾಕಷ್ಟು ಭಾವನೆಗಳ ಕಥೆಯನ್ನು ಹೇಳುವ ಚಿತ್ರ ಕಂಬ್ಳಿಹುಳ. ಚಿತ್ರದಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಸ್ನೇಹಕ್ಕೂ ಒಂದು ಅರ್ಥ ನೀಡಲಾಗಿದೆ. ಜೊತೆಗೆ ಇಲ್ಲಿ ಸೆಂಟಿ ಮೆಂಟ್ ಕೂಡಾ ಇದೆ. ಕೇವಲ ಹೀರೋ -ಹೀರೋಯಿನ್ ಇಬ್ಬರ ನಡುವೇ ಸಾಗುವ ಕಥೆಯಾಗದೇ, ಭಿನ್ನ ಪಾತ್ರಗಳು ಸಹ ಒಂದೇ ತೆರನಾಗಿ ಸಾಗುವುದರ ಜೊತೆ ಆಯಾ ಪಾತ್ರಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ.
ನಿರ್ದೇಶಕ ನವನ್ ಶ್ರೀನಿವಾಸ್ ಅವರ ಚೊಚ್ಚಲ ಪ್ರಯತ್ನ ಮೆಚ್ಚುವಂತದ್ದಾಗಿದೆ. ಒಂದು ನವೀರಾದ ಪ್ರೇಮ ಕಥೆ ಇದಾಗಿದ್ದು, ಇಲ್ಲೂ ಸಹ ಒಂದು ಪ್ರೀತಿ, ಅದರ ವಿರೋಧ, ಸ್ನೇಹಿತರ ಸಹಾಯ ಎಲ್ಲವೂ ಇದೆ. ಆದರೆ ಸಾಮಾನ್ಯ ಲವ್ ಸ್ಟೋರಿಗಳಂತೆ ಬಿಂಬಿಸದೆ, ಕೊಂಚ ಭಿನ್ನವಾಗಿ ತೋರಿಸುವ ಪ್ರಯತ್ನ ನಿರ್ದೇಶಕರದ್ದಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗೆ ಥಳಿಸಿ, ಐರನ್ ಬಾಕ್ಸ್ ನಿಂದ ಸುಟ್ಟು ಹಾಕಿದ ಸಹಪಾಠಿಗಳು: ವಿಡಿಯೋ ವೈರಲ್
ಚಿತ್ರದ ಕೆಲ ಅಂಶ ಒಂದು ಸಲ ಗೊಂದಲವನ್ನು ಉಂಟು ಮಾಡುವುದೂ ಉಂಟು. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲದಕ್ಕೂ ಉತ್ತರ ನೀಡಲಾಗಿದೆ. ಮೊದಲಾರ್ಧ ಕೊಂಚ ನಿಧಾನ ಅನ್ನಿಸದರೂ, ಚಿತ್ರದಲ್ಲಿನ ತಿಳಿ ಹಾಸ್ಯ ನೋಡುಗರನ್ನು ನಗೆಯಲ್ಲಿ ತೇಲಿಸುತ್ತದೆ. ಹೊಸಬರ ತಂಡವಾದರೂ ಚಿತ್ರವನ್ನು ಅಚ್ಚುಕಟ್ಟಾಗಿ ನೀಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದ್ದು, ತಾಂತ್ರಿಕವಾಗಿ ಇನ್ನಷ್ಟು ಗಟ್ಟಿಯಾಗಿದ್ದರೆ ಚಿತ್ರ ಇನ್ನೂ ಉತ್ತಮವಾಗಿರುತ್ತಿತ್ತು. ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರಿಸಲಾದ ಕಂಬ್ಳಿಹುಳ ಚಿತ್ರ ಅಲ್ಲಿನ ಪ್ರಕೃತಿ, ಸಂಸ್ಕೃತಿಯನ್ನು ಸುಂದರವಾಗಿ ತೋರ್ಪಡಿಸಿದೆ.
ಚಿತ್ರದ ನಾಯಕ ಅಂಜನ್ ನಾಗೇಂದ್ರ ಹಾಗೂ ನಾಯಕಿ ಅಶ್ವಿತಾ ತಮ್ಮ ಚೊಚ್ಚಲ ಚಿತ್ರದಲ್ಲೇ ತುಂಬಾ ನೈಜ ವಾಗಿ ಅಭಿನಯಿಸಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಬರುವ ಅನೇಕ ಪ್ರಮುಖ ಪಾತ್ರಗಳು ಚಿತ್ರದ ಕಥೆಗೆ ಆಧಾರವಾಗಿದ್ದು, ಕಲಾವಿದರೂ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಚಿತ್ರದ ಕೆಲ ಹಾಡುಗಳು ಸುಂದರವಾಗಿ ಮೂಡಿ ಬಂದಿದ್ದು, ಚಿತ್ರಮಂದಿರದ ಆಚೆಗೂ ಗುನುಗುವಂತಿದೆ.
ವಾಣಿ ಭಟ್ಟ