ಬೆಂಗಳೂರು: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳ ಹಾಗೂ ರಾಜ್ಯದ ಇತರೆಡೆ ಆಯೋಜಿಸುವ ಎತ್ತಿನ ಗಾಡಿ ಓಟವನ್ನು ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ತಮಿಳುನಾಡಿನಲ್ಲಿ ಜಲ್ಲಿಕಟ್ಟುವಿಗೆ ಕಾನೂನಿನ ಮನ್ನಣೆ ನೀಡಲು ಕೈಗೊಂಡ ಕ್ರಮದ ಮಾದರಿಯಲ್ಲೇ ರಾಜ್ಯದಲ್ಲೂ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನ ಕೈಗೊಳ್ಳಲಾಗಿದೆ. ಫೆಬ್ರವರಿ 6ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಕಂಬಳ ಹಾಗೂ ಎತ್ತಿನಗಾಡಿ ಓಟವನ್ನು ಕಾನೂನುಬದ್ಧಗೊಳಿಸುವ ಸಂಬಂಧದ ಮಸೂದೆ ಮಂಡನೆಯಾಗಲಿದೆ. ಆದರೆ, ಅದಕ್ಕೂ ರಾಷ್ಟ್ರಪತಿಯವರ ಅಂಕಿತ ಅಗತ್ಯ.
ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಈ ಬಗ್ಗೆ ಮಾಹಿತಿ ನೀಡಿದರು. ಸಂಪುಟ ಸಭೆಯಲ್ಲಿ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅಧಿಕೃತ ಮಾನ್ಯತೆ ನೀಡಲು ನಿರ್ಧರಿಸಲಾಯಿತು. ಈ ಸಂಬಂಧ ಪ್ರತ್ಯೇಕ ಕಾನೂನು ರೂಪಿಸಿ, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು. ಕಂಬಳಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಪ್ರಾಣಿಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಕರಡು ಸಿದ್ಧಪಡಿಸಲು ಪಶುಸಂಗೋಪನೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಂಬಳ ಮತ್ತು ಎತ್ತಿನಗಾಡಿ ಓಟ ಗ್ರಾಮೀಣ ಕ್ರೀಡೆಯಾಗಿದ್ದು, ಜನಸಮುದಾಯ ಅದರೊಂದಿಗೆ ಭಾವನಾತ್ಮಕ ನಂಟು ಹೊಂದಿದೆ. ಇದರಲ್ಲಿ ಪ್ರಾಣಿ ಹಿಂಸೆಯ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ, ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು ಪ್ರತ್ಯೇಕ ಕಾನೂನು ರೂಪಿಸಿ ಎರಡೂ ಕ್ರೀಡೆಗಳಿಗೆ ಕಾನೂನಿನ ಮಾನ್ಯತೆ ನೀಡಲಾಗುವುದು ಎಂದರು.