Advertisement

‘ತಡೆಯಾಜ್ಞೆಗೆ ನಕಾರ; ಕಂಬಳ ಕ್ರೀಡೆ ಇನ್ನು ನಿರಾತಂಕ’

11:44 AM Feb 16, 2018 | Team Udayavani |

ಉಪ್ಪಿನಂಗಡಿ: ಪೆಟಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಕಂಬಳಕ್ಕೆ
ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಕಂಬಳ ಕೂಟದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿಲ್ಲ ಎಂಬುದು ನ್ಯಾಯಾಲಯಕ್ಕೂ ಮನವರಿಕೆಯಾಗಿದೆ. ಕಂಬಳ ಕ್ರೀಡೆಗೆ ಅವಕಾಶ ನೀಡಲೆಂದು ಪ್ರಾಣಿಗಳ ಮೇಲಿನ ಹಿಂಸೆ (ಕರ್ನಾಟಕ ತಿದ್ದುಪಡಿ) ಮಸೂದೆಯನ್ನು ರಾಜ್ಯ ಸರಕಾರ ಅಂಗೀಕರಿಸಿದ್ದು, ಕೆಲವೇ ದಿನಗಳಲ್ಲಿ ರಾಷ್ಟ್ರಪತಿಗಳ ಅಂಕಿತ ಬೀಳಲಿದೆ. ಕಂಬಳ ಕ್ರೀಡೆ ನಿರಾಂತಕವಾಗಿ ಸಾಗಲಿದೆ ಎಂದು ಕಂಬಳ ಪರ ಕಾನೂನು ಹೋರಾಟಗಾರ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ತಿಳಿಸಿದರು.

Advertisement

ಉಪ್ಪಿನಂಗಡಿ ಪೇಟೆಯಲ್ಲಿ ಕಂಬಳದ ಆಮಂತ್ರಣ ಪತ್ರ ಹಂಚುವ ಕಾರ್ಯಕ್ರಮಕ್ಕೆ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಅಧಿಕೃತ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತುಳುನಾಡಿನ ಪ್ರಾಚೀನ ಜನಪದ ಕ್ರೀಡೆಯೂ ಧಾರ್ಮಿಕ ಆರಾಧನೆಯೂ ಆಗಿರುವ ಕಂಬಳವನ್ನು ಉಳಿಸಿ ಬೆಳೆಸಲು
ಯಾವ ರೀತಿಯ ಹೋರಾಟಕ್ಕೂ ಸಿದ್ಧರಿದ್ದು, ಸುಪ್ರೀಂಕೋರ್ಟ್‌ ಕಂಬಳಕ್ಕೆ ಅವಕಾಶ ಕಲ್ಪಿಸಿರುವುದು ನಮ್ಮ ಹೋರಾಟಕ್ಕೆ ಸಂದ ಜಯ. ಉಪ್ಪಿನಂಗಡಿಯಲ್ಲಿ ಈ ಬಾರಿಯ ವಿಜಯ- ವಿಕ್ರಮ ಕಂಬಳವು ಫೆ. 24 ಮತ್ತು
25ರಂದು ಅದ್ದೂರಿಯಾಗಿ ನಡೆಯಲಿದ್ದು, ಇದು ಕಂಬಳದ ಅಂತಿಮ ವಿಜಯಕ್ಕೆ ನಾಂದಿಯಾಗಲಿ. ಆಮೇಲೂ ಪೆಟಾದವರು ಅಡ್ಡಿ ಪಡಿಸಿದರೆ ಕಾನೂನು ಸಮರ ಮುಂದುವರಿಸುತ್ತೇವೆ. ಜಾತಿ, ಧರ್ಮ, ರಾಜಕೀಯ ಭೇದ ಮರೆತು ಮರೆತು ಹೋರಾಟ ನಡೆಸುತ್ತೇವೆ ಎಂದರು.

ಆಮಂತ್ರಣ ಪತ್ರಿಕೆ ವಿತರಣೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಕಾಶ್‌ ರೈ ಬೆಳ್ಳಿಪ್ಪಾಡಿ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಾಲಯದ ವಠಾರದಿಂದ ಕೊಂಬು, ವಾಲಗದೊಂದಿಗೆ ಮೆರವ ಣಿಗೆಯಲ್ಲಿ ಬಸ್‌ ನಿಲ್ದಾಣ, ಬ್ಯಾಂಕ್‌ ರಸ್ತೆ ಮೂಲಕ ಗಾಂಧಿ ಪಾರ್ಕ್‌ ಆಗಿ ಬೈಪಾಸ್‌ ರಸ್ತೆಯಾಗಿ ಬಂದು ಪೇಟೆಯಿಡೀ ಕಂಬಳದ ಆಮಂತ್ರಣ ಪತ್ರಿಕೆ ನೀಡಲಾಯಿತು.

ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್‌. ಉಮೇಶ್‌ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ,
ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾ ಧ್ಯಕ್ಷ ರಾಮಚಂದ್ರ ಮಣಿಯಾಣಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಕೃಷ್ಣಪ್ರಸಾದ್‌ ಬೊಳ್ಳಾವು, ಸುರೇಶ್‌ ಅತ್ರಮಜಲು, ಯೋಗೀಶ್‌ ಸಾಮಾನಿ ಸಂಪಿಗೆದಡಿ, ನ್ಯಾಯವಾದಿ ಅನಿಲ್‌ ಕುಮಾರ್‌ ಉಪ್ಪಿನಂಗಡಿ, ದಿಲೀಪ್‌ ಶೆಟ್ಟಿ ಕರಾಯ, ಹರಿಪ್ರಸಾದ್‌ ಶೆಟ್ಟಿ ಬೊಳ್ಳಾವು, ಆದರ್ಶ ಶೆಟ್ಟಿ ಕಜೆಕ್ಕಾರ್‌, ರಮೇಶ್‌ ಭಂಡಾರಿ, ಹರಿಶ್ಚಂದ್ರ ಆಚಾರ್ಯ, ರಾಜಗೋಪಾಲ್‌ ಹೆಗ್ಡೆ, ರವಿ ಮರಿಕೆ, ಲೋಕಾನಂದ ಉಪಸ್ಥಿತರಿದ್ದರು.

Advertisement

ಎಲ್ಲರಿಗೂ ಊಟದ ವ್ಯವಸ್ಥೆ
ಉಪ್ಪಿನಂಗಡಿಯ ಕಂಬಳವು ವಿಜೃಂಭಣೆಯಿಂದ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸಹಕಾರ ಮಹಾ ಮಂಡಲದ ರಾಜ್ಯಾಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರಕುಮಾರ್‌, ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಭಾಗವಹಿಸಲಿದ್ದಾರೆ. ಈ ಬಾರಿ ವಿಜಯ- ವಿಕ್ರಮ ಕಂಬಳದ ಸಂದರ್ಭ ಎಲ್ಲ ಕಂಬಳಾಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next