Advertisement

ಸರಕಾರದ ಬೆಂಬಲ ನಿರೀಕ್ಷೆಯಲ್ಲಿ ಕಂಬಳ ಕ್ರೀಡೆ

09:58 AM Mar 03, 2020 | Sriram |

ಮಂಗಳೂರು: ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆ, ಸರಕಾರದಿಂದ ಶಾಸನಬದ್ಧ ಮಾನ್ಯತೆಯನ್ನು ಪಡೆದಿರುವ ಕಂಬಳವು ರಾಜ್ಯ ಸರಕಾರದಿಂದ ಆರ್ಥಿಕ ಬೆಂಬಲ ಮತ್ತು ಕಂಬಳ ಭವನಕ್ಕೆ ಜಾಗದ ನಿರೀಕ್ಷೆಯಲ್ಲಿದೆ.

Advertisement

ಪ್ರಸ್ತುತ ವೇಗದ ಓಟಗಾರರಿಂದಾಗಿಯೂ ಗಮನ ಸೆಳೆದಿರುವ ಕಂಬಳದ ಸಂರಕ್ಷಣೆಗಾಗಿ ಬಜೆಟ್‌ನಲ್ಲಿ 5 ಕೋ.ರೂ. ಅನುದಾನ ಮೀಸಲಿರಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಿದೆ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ ಒಂದು ಕೋ.ರೂ. ಅನುದಾನ ನೀಡಲಾಗಿತ್ತು.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನ ಪೈವಳಿಕೆ ಸೇರಿ ಮೂರು ಜಿಲ್ಲೆಗಳಲ್ಲಿ 19 ಕಂಬಳಗಳು ನಡೆಯುತ್ತಿವೆ. ಈ ಜಾನಪದ ಕ್ರೀಡೆಗೆ ಸರಕಾರದ ಆರ್ಥಿಕ ಬೆಂಬಲ ದೊರಕಿದರೆ ಸಹಾಯವಾಗುತ್ತದೆ. ಹೀಗಾಗಿ ಸರಕಾರದಿಂದ ಕನಿಷ್ಠ 5 ಕೋ.ರೂ. ಅನುದಾನವಾದರೂ ದೊರೆಯಬೇಕು. ಮೂಲ ಸೌಲಭ್ಯಗಳ ಅಭಿವೃದ್ಧಿಯ ಜತೆಗೆ ಪ್ರತಿ ಕಂಬಳ ಆಯೋಜನೆಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಇದರಿಂದ ಸಾಧ್ಯವಾಗುತ್ತದೆ ಎಂಬುದಾಗಿ ಸಮಿತಿ ಪ್ರತಿಪಾದಿಸಿದೆ.

ಕಂಬಳ ಆಯೋಜಕರ ಪ್ರಕಾರ ಪ್ರಸ್ತುತ ಪ್ರತಿಯೊಂದು ಕಂಬಳ ಆಯೋಜನೆಗೆ ಸುಮಾರು 10 ಲಕ್ಷ ರೂ. ವೆಚ್ಚ ತಗಲುತ್ತದೆ. ವಿಜೇತ ಕೋಣಗಳಿಗೆ ಪ್ರಥಮ ಬಹುಮಾನವಾಗಿ 1 ಪವನ್‌ ಚಿನ್ನ, ದ್ವಿತೀಯಕ್ಕೆ ಅರ್ಧ ಪವನ್‌ ಚಿನ್ನ ನೀಡಲಾಗುತ್ತದೆ. ಒಂದು ಕಂಬಳದಲ್ಲಿ ಈ ಬಹುಮಾನ ರೂಪದ ಚಿನ್ನ ಸುಮಾರು 10 ಪವನ್‌ ಆಗುತ್ತದೆ. ಜತೆಗೆ ಕರೆ ಸಿದ್ಧಗೊಳಿಸುವುದು, ವಿದ್ಯುತ್‌ ದೀಪದ ವ್ಯವಸ್ಥೆ ಸೇರಿದಂತೆ ಇತರ ವೆಚ್ಚಗಳಿರುತ್ತವೆ. ಇರುವ ಕರೆಯನ್ನು ಸಿದ್ಧಗೊಳಿಸಲು ಕನಿಷ್ಠ 25 ಸಾವಿರ ರೂ., ಹೊಸತು ನಿರ್ಮಾಣಕ್ಕೆ 8ರಿಂದ 10 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ.

ಕಂಬಳ ಭವನ
ಕಂಬಳಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಂಬಳ ಭವನ ನಿರ್ಮಿಸಲು ಸ್ಥಳ ನೀಡುವಂತೆ ಕಂಬಳ ಸಮಿತಿ ಸರಕಾರಕ್ಕೆ ಮನವಿ ಮಾಡಿದೆ. ಪಿಲಿಕುಳದಲ್ಲಿ ಸರಕಾರಿ ಕಂಬಳ ಆಯೋಜಿಸಲು ನಿರ್ಮಿಸಿರುವ ಕರೆ ಇದೆ. ಪಕ್ಕದಲ್ಲೇ ಸಂಸ್ಕೃತಿ ಗ್ರಾಮವೂ ಇದೆ. ಇಲ್ಲೇ ಕಂಬಳ ಭವನಕ್ಕೆ ನಿವೇಶನ ಲಭಿಸಿದರೆ ಸೂಕ್ತ ಎಂಬ ಅಭಿಪ್ರಾಯವಿದೆ. ತರಬೇತಿಗಳು, ಸುಮಾರು 50 ಮಂದಿಗೆ ತಂಗುವ ವ್ಯವಸ್ಥೆ, ವಸ್ತುಪ್ರದರ್ಶನ ಸೇರಿದಂತೆ ಕಂಬಳವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಂಬಳ ಭವನ ಸಹಕಾರಿ ಎನ್ನುವುದು ಕಂಬಳ ಸಮಿತಿಯ ಅಭಿಮತ.

Advertisement

ಗೌರವ ಮನ್ನಣೆ
ಕಂಬಳದಲ್ಲಿ ಕನೆ ಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡಹಲಗೆ ಸೇರಿದಂತೆ 6 ವಿಭಾಗಗಳಲ್ಲಿ 100ಕ್ಕಿಂತಲೂ ಅಧಿಕ ಜತೆ ಕೋಣಗಳು ಭಾಗವಹಿಸುತ್ತವೆ. ಅನುದಾನ ಲಭ್ಯವಾದರೆ ಭಾಗವಹಿಸುವ ಎಲ್ಲ ಕೋಣಗಳಿಗೆ ನಿರ್ದಿಷ್ಟ ಮೊತ್ತವನ್ನು ಗೌರವ ಸಂಕೇತವಾಗಿ ನೀಡಿ ಗುರುತಿಸುವ ವ್ಯವಸೆœ ರೂಪಿಸಲು ಸಾಧ್ಯ ಎಂದು ಕೋಣಗಳ ಯಜಮಾನ ಮತ್ತು ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಕಂಬಳಕ್ಕೆ ಈ ಬಾರಿಯ ಬಜೆಟ್‌ನಲ್ಲಿ 5 ಕೋ.ರೂ. ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿದ್ದು, ಉತ್ತಮ ಸಹಕಾರ ಮತ್ತು ಸ್ಪಂದನೆ ದೊರಕಿದೆ.
– ಪಿ.ಆರ್‌.ಶೆಟ್ಟಿ,
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು,

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next