ಮೂಡುಬಿದಿರೆ: ಬೆಂಗಳೂರಿನಲ್ಲಿ ಅ.26ರಂದು ಕಂಬಳ ನಡೆಯುವ ಮೂಲಕ ಈ ಬಾರಿಯ ಕಂಬಳ ಋತು ಆರಂಭವಾಗಲಿದೆ. ಬಳಿಕ ಕರಾವಳಿಯಾದ್ಯಂತ ಕಂಬಳಗಳು ನಡೆಯಲಿವೆ. ಎ.19ರಂದು ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುವ ಮೂಲಕ ಕಂಬಳ ಋತು ಮುಕ್ತಾಯವಾಗಲಿದೆ. ಜಿಲ್ಲಾ ಕಂಬಳ ಸಮಿತಿ ನೇತೃತ್ವದಲ್ಲಿ ಒಟ್ಟು 26 ಕಂಬಳಗಳು ಈ ಸಲ ನಡೆಯಲಿವೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ| ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಂಬಳವನ್ನು ಶಿಸ್ತುಬದ್ಧವಾಗಿ ಕಂಬಳ ನಡೆಯುತ್ತಿರುವುದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಕಂಬಳ ಸಮಿತಿಗಳು ಪಾಲಿಸಬೇಕಾದ ಕೆಲವು ಉಪನಿಬಂಧನೆಗಳನ್ನು ರಚಿಸಲಾಗುವುದು. ಕಂಬಳ ವಿಳಂಬವಾಗುತ್ತಿರುವುದನ್ನು ನಿಯಂತ್ರಿಸಲೂ ನಿಯಮಗಳನ್ನು ರೂಪಿಸಲಾಗುವುದು. ಓಟಗಾರರು ಎಷ್ಟು ಜತೆ ಕೋಣಗಳನ್ನು ಓಡಿಸಬಹುದು ಮುಂತಾದ ನಿಯಮ ರೂಪಿಸಲಾಗುತ್ತಿದೆ ಎಂದರು.
ಮತ್ತೆ ಪಿಲಿಕುಳ ಕಂಬಳ
ಪಿಲಿಕುಳ ಕಂಬಳವನ್ನು ಈ ವರ್ಷದಿಂದ ಪುನರಾರಂಭಿಸಲಾಗು ವುದು. ಕಂಬಳ ವನ್ನು ಪ್ರವಾಸೋದ್ಯಮದ ಭಾಗವಾಗಿಸುವ ನಿಟ್ಟಿನಲ್ಲಿ ಕಂಬಳ ಕುರಿತ ವಸ್ತು ಪ್ರದರ್ಶನ ಸಹಿತ 4 ದಿನಗಳ “ತುಳುನಾಡ ವೈಭವ’ ಕಾರ್ಯಕ್ರಮ ಏರ್ಪಡಿಸಲಾಗುವುದು. ಬಹಳ ಮುಖ್ಯವಾಗಿ, ವಸ್ತು ಪ್ರದರ್ಶನಾಲಯ ಸಹಿತ ಕಂಬಳ ಭವನ ನಿರ್ಮಿಸಲಾಗುವುದು. ಈ ಜಿಲ್ಲೆಯಲ್ಲಿ ನಡೆಯುವ 24 ಕಂಬಳಗಳಿಗೂ ತಲಾ 5 ಲಕ್ಷ ರೂ.ಯಂತೆ ಸರಕಾರ ಅನುದಾನ ಬಿಡುಗಡೆ ಮಾಡಬೇಕೆಂಬ ಮನವಿಯನ್ನು ಕಂಬಳ ನಿಯೋಗವು ಸಿಎಂಗೆ ಸಲ್ಲಿಸಿದ್ದು, ಅವರೂ ಸಕಾರಾತ್ಮ ಕವಾಗಿ ಸ್ಪಂದಿಸಿದ್ದಾರೆ ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಸಹಿತ ಪ್ರಮುಖರು ಉಪಸ್ಥಿತರಿದ್ದರು