Advertisement

Bengaluru: ಕಂಬಳ ಆಯೋಜನೆ; ನ. 5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

08:19 AM Oct 24, 2024 | Team Udayavani |

ಬೆಂಗಳೂರು: ಬೆಂಗಳೂರು ಕಂಬಳ ಸಮಿತಿಗೆ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ ಅನಿಮಲ್‌ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ನಡೆಸಿತು.

Advertisement

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅ. 26ಕ್ಕೆ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗುತ್ತಿಲ್ಲ ಎಂದು ಕಂಬಳ ಸಮಿತಿ ಪರ ವಕೀಲರು ಹೇಳಿದ್ದಾರೆ. ಹಾಗಾಗಿ ಅರ್ಜಿಯ ವಿಚಾರಣೆಯನ್ನು ನವೆಂಬರ್‌ 5ಕ್ಕೆ ಮುಂದೂಡಲಾಗುವುದು. ಸರಕಾರದ ವಾದ ಮತ್ತು ಅರ್ಜಿದಾರರ ಉಳಿದ ಆಕ್ಷೇಪಗಳನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ಹೇಳಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವುದರಿಂದ ಕೋಣಗಳನ್ನು ಮಂಗಳೂರು – ಉಡುಪಿಯಿಂದ ಬೆಂಗಳೂರಿಗೆ ತರಬೇಕಾಗುತ್ತದೆ. ಇದರಿಂದ ಕೋಣಗಳಿಗೆ ಹಿಂಸೆ ಯಾಗಲಿದೆ ಎನ್ನುವುದು ಅರ್ಜಿ ದಾರರ ಆಕ್ಷೇಪವಾಗಿದೆ. ಆದರೆ ಕುದುರೆ ರೇಸ್‌ಗೆ ಬೇರೆ ರಾಜ್ಯಗಳಿಂದ ಕುದುರೆಗಳನ್ನು ತರಲಾಗುತ್ತದೆ.

ಈಗ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ನಡೆಸಬೇಕೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಕಂಬಳ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ಕರ್ನಾಟಕದ ಸಂಸ್ಕೃತಿ. ಅದನ್ನು ಈಗ ಇಡೀ ದೇಶಕ್ಕೆ ಪರಿಚಯಿಸುವ ಸಂದರ್ಭ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಕಾನೂನು ಪ್ರಕಾರ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಈ ವಿಚಾರದಲ್ಲಿ ಸರಕಾರ ಯಾವುದೇ ತೀರ್ಮಾನ ಕೈಗೊಂಡರೂ, ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ಅವರು ನ್ಯಾಯಪೀಠಕ್ಕೆ ಭರವಸೆ ನೀಡಿದರು.

Advertisement

ಅನುಮತಿ ಕೊಡುವ ವಿಚಾರ ನಮಗೆ ತಿಳಿಸಿ: ಅರ್ಜಿದಾರರು
ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ವಾದ ಮಂಡಿಸಿ, ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡುವ ವಿಚಾರವನ್ನು ನಮಗೆ ಸರಕಾರ ತಿಳಿಸಬೇಕು. ಆಗ ನಾವು ನ್ಯಾಯಾಲಯದ ಮುಂದೆ ಬರಲು ಸಾಧ್ಯವಾಗುತ್ತದೆ. ಬೆಂಗಳೂರು ಬಳಿಕ ಶಿವಮೊಗ್ಗದಲ್ಲೂ ಕಂಬಳ ಆಯೋಜಿಸುವ ಬಗ್ಗೆ ಹೇಳಲಾಗುತ್ತಿದೆ. ನವೆಂಬರ್‌ 9ರಂದು ದಕ್ಷಿಣ ಕನ್ನಡದ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾ ಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ವೇಳೆ ಉಂಟಾಗುವ ಕೂಗಾಟದಿಂದ ಬೇರೆ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಅಕ್ಟೋಬರ್‌ 26ಕ್ಕೆ ಬೆಂಗಳೂರು ಕಂಬಳ ಇಲ್ಲ
ವಿಚಾರಣೆ ಆರಂಭವಾಗುತ್ತಿದ್ದಂತೆ ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಎಂ. ವಿನೋದ್‌ ಕುಮಾರ್‌ ಹಾಜರಾಗಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್‌ 26ರಂದು ಕಂಬಳ ಸ್ಪರ್ಧೆ ಆಯೋಜಿಸುತ್ತಿಲ್ಲ ಮತ್ತು ಬೇರೆಲ್ಲೂ ಕಂಬಳ ನಡೆಸುವ ಸಂಬಂಧ ಸರಕಾರದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ. ಮಾಧ್ಯಮಗಳ ವರದಿ ಆಧರಿಸಿ ಅರ್ಜಿದಾರರು ಹೈಕೋರ್ಟ್‌ಗೆ ಬಂದಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next