Advertisement
ಒಂದು ಕಾಲು ಕೆಸರಿನಲ್ಲಿ ಹೂತುಕೊಂಡರೆ ಮತ್ತೂಂದು ಕಾಲನ್ನು ಪ್ರಯಾಸಪಟ್ಟು ಮುಂದಕ್ಕಿಟ್ಟು ಹಿಂದಿನ ಕಾಲನ್ನು ಮೇಲಕ್ಕೆತ್ತಬೇಕು. ಇಂಥ ಕೆಸರಿನ ಗದ್ದೆಯಲ್ಲಿ ಕೋಣಗಳು ಓಡುತ್ತವೆ, ಅವುಗಳ ಹಿಂದೆ ಕೋಣ ಓಡಿಸುವವನೂ ಓಡುತ್ತಾನೆ. ಕೋಣಗಳು ಕೆಸರು ಚಿಮ್ಮಿಸುತ್ತಾ ಓಡುವ ನಾಗಾಲೋಟದ ಕ್ಷಣವೇ ರೋಚಕ. ಕೂಡಿದ ಸಹಸ್ರಾರು ಮಂದಿ ಓಡುವ ಕೋಣ-ಓಡಿಸುವವನನ್ನು ಹುರಿದುಂಬಿಸುವ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು. ಆ ಸ್ಪರ್ಧೆ ಕೊಡುವ ಅನನ್ಯತೆಯನ್ನು ಅನುಭವಿಸಬೇಕು. ನವೆಂಬರ್ ತಿಂಗಳಿನಿಂದ ಮಾರ್ಚ್‌ವರೆಗೆ ಕರಾವಳಿಯ ಉದ್ದಗಲಕ್ಕೆ ಇಂಥ ಕಂಬಳಗಳ ಭರಾಟೆ ವರ್ಣನಾತೀತ. ಗದ್ದೆಯನ್ನು ಉಳಲು ಬಳಸುತ್ತಿದ್ದ ಕೋಣಗಳೇ ಕಂಬಳದ ಗದ್ದೆಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಂಜಿಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಕಂಬಳಕ್ಕೆಂದೇ ಕೋಣಗಳನ್ನು ಸಾಕಲಾಗುತ್ತದೆ. ಕಂಬಳದ ಕೋಣಗಳನ್ನು ಓಡಿಸಲೆಂದೇ ಅನುಭವಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಕರಾವಳಿಯ ಜಾನಪದ ಕ್ರೀಡೆ ಈಗ ವಿವಾದದ ಕೇಂದ್ರಬಿಂದುವಾಗಿರುವುದು ದುರಂತವೇ ಸರಿ. ಕೃಷಿ ಕೆಲಸಗಳಿಗೆ ಬಳಸುವ ಕೋಣಗಳು ಅನಾದಿ ಕಾಲದ ಕಂಬಳ ಕ್ರೀಡೆಯ ಕೇಂದ್ರ ಬಿಂದುಗಳೂ ಹೌದು. ಅರಸೊತ್ತಿಗೆ ಕಾಲದಿಂದಲೂ ಈ ಕ್ರೀಡೆಗೆ ರಾಜಮನ್ನಣೆಯಿತ್ತು. ಇದನ್ನು ವಿಜಯನಗರ ಕಾಲದ ಶಾಸನಗಳೂ ಸಮರ್ಥಿಸುತ್ತವೆ. ಅರಸೊತ್ತಿಗೆ ಅಳಿದ ಮೇಲೆ ಕಂಬಳಗಳು ಜನಾಶ್ರಯದಲ್ಲಿ ನಡೆಯುತ್ತಾ ಬಂದವು. ಇದು ಕಾಲ ಕಾಲದ ಬದಲಾವಣೆಯೂ ನಿಜ. ಕಂಬಳದಲ್ಲಿ ಕೋಣಗಳು ಓಡುವ ಓಟವೇ ಅಂತಿಮ ಮತ್ತು ಗೆಲುವು ಸೋಲು ನಿರ್ಧಾರವಾಗುವುದೂ ಕೂಡ ಅದೇ ಮಾನದಂಡದಿಂದ. ಈ ಕಾರಣಕ್ಕಾಗಿ ಕಂಬಳದ ಕರೆಯಲ್ಲಿ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವುದು ಅನಿವಾರ್ಯ. ಈ ಕೋಣಗಳನ್ನು ಓಡಿಸುವಾತನ ಕೌಶಲವೂ ಮುಖ್ಯ. ಇದು ಅವನ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕ್ಷಣವೂ ಹೌದು. ಈ ಕಾರಣಕ್ಕಾಗಿ ಕಂಬಳದ ಕೋಣಗಳು ವೇಗವಾಗಿ ಓಡಲು ಬಾರುಕೋಲು ಮೂಲಕ ಕೋಣಗಳ ಬೆನ್ನಿಗೆ ಬಾರಿಸುತ್ತಾನೆ. ಆ ಏಟು ನಿಜಕ್ಕೂ ಯಾರನ್ನೇ ಆದರೂ ಒಂದು ಕ್ಷಣಕ್ಕೆ ಬೆಚ್ಚಿಬೀಳಿಸುತ್ತದೆ. ಬಾರುಕೋಲಿನ ಏಟಿಗೆ ಕೋಣಗಳು ತಮ್ಮೆಲ್ಲ ಸಾಮರ್ಥ್ಯವನ್ನು ಓಟದ ಮೂಲಕ ಪ್ರದರ್ಶಿಸುತ್ತವೆ. ಕೋಣಗಳನ್ನು ಕಂಬಳದ ಕರೆಗೆ ತರುವುದರಿಂದ ಹಿಡಿದು ಮಂಜೊಟ್ಟಿಯಲ್ಲಿ ಓಟಕ್ಕೆ ಅಣಿಗೊಳಿಸುವ ತನಕ ಕೋಣಗಳಿಗೆ ಸಹಜವಾಗಿಯೇ ಬಾರುಕೋಲಿನ ಏಟುಗಳು ಸಂದರ್ಭಕ್ಕೆ ತಕ್ಕಂತೆ ಬೀಳುತ್ತವೆ. ಕೋಣಗಳಿಗೆ ಕಂಬಳ ಓಡಿಸುವವನು ಹೊಡೆಯುವುದೇ ಕಂಬಳದಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎನ್ನುವುದಕ್ಕೆ ಕಾರಣ.
Related Articles
Advertisement
ಹಾಗೆ ನೋಡಿದರೆ ಕಂಬಳದ ಕೋಣಗಳನ್ನು ಸಾಕುವ ಬಗೆಯನ್ನು ಗಮನಿಸಿದರೆ ಕೋಣಗಳ ಯಜಮಾನನಿಗೆ ಇರುವ ಪ್ರಾಣಿ ದಯೆ ಮತ್ತು ಅವುಗಳಿಗೆ ಕೊಡುವ ಆದರ ಆತಿಥ್ಯ ಬೆಚ್ಚಿ ಬೀಳಿಸುತ್ತದೆ. ಕಂಬಳದಲ್ಲಿ ಓಡುವ ಕೋಣಗಳನ್ನು ಲಕ್ಷಾಂತರ ರೂ. ಕೊಟ್ಟು ಖರೀದಿಸುತ್ತಾರೆ. ಅವುಗಳನ್ನು ಸಾಕಲು ಆಳುಗಳನ್ನು ನಿಯೋಜಿಸಿರುತ್ತಾರೆ. ನಿತ್ಯವೂ ಮನುಷ್ಯರು ಸ್ನಾನಕ್ಕಿಂತಲೂ ಹೆಚ್ಚು ಆತ್ಮೀಯವಾಗಿ ಮೈತೊಳೆದು ಎಣ್ಣೆ ಉಜ್ಜಿ ಸ್ನಾನ ಮಾಡಿಸುತ್ತಾರೆ. ಆ ಕೋಣಗಳಿಗೆ ದುಬಾರಿ ಆಹಾರ ಪದಾರ್ಥಗಳನ್ನು ತಿನ್ನಿಸುತ್ತಾರೆ. ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಸಾಕುತ್ತಾರೆ. ಕಂಬಳ ಓಡಿಸುವವನಿಗೆ ವರ್ಷಪೂರ್ತಿ ವೇತನ ಕೊಟ್ಟು ಒಬ್ಬ ಕ್ರೀಡಾಳುವನ್ನು ಪೋಷಣೆ ಮಾಡುವುದಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ಸಾಕುತ್ತಾನೆ.
ಕಂಬಳ ಸ್ಪರ್ಧೆಯಲ್ಲಿ ತನ್ನ ಕೋಣಗಳು ಗೆಲ್ಲಬೇಕು ಎನ್ನುವುದನ್ನು ಬಿಟ್ಟರೆ ತಾವು ಮಾಡುವ ಖರ್ಚು ನಗಣ್ಯವೆನ್ನುತ್ತಾರೆ. ಕೋಣಗಳ ಯಜಮಾನರು. ಕಂಬಳದಲ್ಲಿ ಗೆದ್ದ ಕೋಣಗಳ ಮೆರವಣಿಗೆ, ಅದರ ಮೈಮೇಲೆ ಹೊದಿಸುವ ಬಟ್ಟೆ, ಕಂಬಳ ಓಡಿಸಿದವನಿಗೆ ಮಾಡುವ ಸಮ್ಮಾನ, ಕೊಡುವ ಮನ್ನಣೆಗೆ ಲೆಕ್ಕದ ಮಿತಿಯಿಲ್ಲ, ಅದರ ಚಿಂತೆಯೂ ಯಜಮಾನನಿಗಿರುವುದಿಲ್ಲ. ಕಂಬಳದಲ್ಲಿ ಗೆಲ್ಲುವುದು ಎಂದರೆ ಅದು ಕೋಣಗಳ ಯಜಮಾನನಿಗೆ ಪ್ರತಿಷ್ಠೆ, ಮನೆತನದ ಗೌರವದ ಪ್ರಶ್ನೆ. ಕೋಣಗಳ ಯಜಮಾನರು ಲಕ್ಷಾಂತರ ರೂ. ವೆಚ್ಚ ಮಾಡಿದರೆ ಲಕ್ಷಾಂತರ ಜನರು ಹಗಲೂ ರಾತ್ರಿ ನೂರಾರು ಕೋಣಗಳು ಓಡುವುದನ್ನು; ಅವು ಗೆಲ್ಲುವುದು, ಸೋಲುವುದನ್ನು ಕಣ್ತುಂಬಿಕೊಳ್ಳುತ್ತಾರೆ. ದೇವರುಗಳಿಗೆ ಹರಕೆ ರೂಪದಲ್ಲಿ ಕಂಬಳ ಸೇವೆ ಮಾಡುವುದು ಕೂಡ ಪರಂಪರಾಗತವಾಗಿ ನಡೆದು ಬಂದಿದೆ. ದೇವರು, ದೈವಗಳಿಗೆ ಕಂಬಳದ ಹರಕೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು.
ಯಾವುದು ಹಿಂಸೆ – ಯಾವುದು ಅಲ್ಲ?ಪ್ರಾಣಿ ಹಿಂಸೆಯನ್ನು ಯಾರೂ ಪ್ರೋತ್ಸಾಹಿಸಬಾರದು ಎನ್ನುವುದನ್ನು ಮಾನವೀಯತೆಯಿರುವವರು ಒಪ್ಪಿಕೊಳ್ಳುತ್ತಾರೆ. ಒಂದು ಕಾಲವಿತ್ತು, ಶಾಲೆಗಳಲ್ಲಿ ಮಕ್ಕಳಿಗೆ ಮೇಸ್ಟ್ರೆ ಥಳಿಸಿದರೆ ಹೆತ್ತವರು ‘ತಪ್ಪು ಮಾಡಿದರೆ ಮುಲಾಜಿಲ್ಲದೆ ಥಳಿಸಿ’ ಎನ್ನುತ್ತಿದ್ದರು. ಮಕ್ಕಳು ಚೆನ್ನಾಗಿ ವಿದ್ಯೆ ಕಲಿಯಬೇಕು, ಅದಕ್ಕಾಗಿ ಥಳಿಸುವುದು ಅನಿವಾರ್ಯವಾದರೆ ಅಪರಾಧವಲ್ಲ ಎನ್ನುತ್ತಿದ್ದರು. ಈಗ ಮಗುವಿನ ಕಿವಿ ಹಿಂಡಿದರೂ, ಕೆನ್ನೆ ಚಿವುಟಿದರೂ ಹಿಂಸೆ ಅನ್ನಿಸಿಕೊಳ್ಳುತ್ತದೆ. ಇಂಥ ಹಿಂಸೆ ಕೊಡಲು ಶಿಕ್ಷಕರಿಗೆ ಏನು ಅಧಿಕಾರವೆಂದು ಹೆತ್ತವರು ಪ್ರಶ್ನೆ ಮಾಡುತ್ತಾರೆ. ಇದನ್ನು ಬದಲಾವಣೆಯ ಪ್ರಭಾವ ಎನ್ನಬೇಕೋ ಅಥವಾ ಹೆತ್ತವರಿಗಿರುವ ಮಕ್ಕಳ ಮೇಲಿನ ವ್ಯಾಮೋಹವೆನ್ನಬೇಕೋ? ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಗಳನ್ನು ಪಳಗಿಸಲು ಆನೆಗಳಿಗೆ ಕೊಡುವ ಅಂಕುಶದ ಪೆಟ್ಟು, ತಿವಿತಕ್ಕೆ ಏನೆನ್ನಬೇಕು? ಆನೆಯ ಬೆನ್ನ ಮೇಲೆ ಹೊರಿಸುವ ಅಂಬಾರಿಯ ತೂಕವೂ ಅದಕ್ಕೆ ಕೊಡುವ ಹಿಂಸೆಯಲ್ಲವೇ? ಮಣ ಭಾರದ ಅಂಬಾರಿ ಹೊರಲಾಗದೆ ಆನೆ ಸುಸ್ತಾಗಿ ನಿಂತಿತು ಎನ್ನುವುದನ್ನು ಸುದ್ದಿ ಮಾಡುವ ಮಾಧ್ಯಮಗಳು, ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಲಕ್ಷಾಂತರ ಜನರು ಇದಕ್ಕೆ ಯಾಕೆ ಪ್ರತಿಕ್ರಿಯಿಸುವುದಿಲ್ಲ? ಮಾವುತ ಅಂಕುಶ ಹಿಡಿಯದಿದ್ದರೆ ಆನೆ ಪಳಗಲು ಸಾಧ್ಯವೇ? ಕಂಬಳದಲ್ಲಿ ಓಟದ ಕೋಣಗಳಿಗೆ ಕೋಣ ಓಡಿಸುವವನು ಕೊಡುವ ಏಟು ಹಿಂಸೆ ಎನಿಸಿದರೆ ಗದ್ದೆ, ಹೊಲ ಉಳುವಾಗ ಎತ್ತುಗಳಿಗೆ ಬಾರುಕೋಲಿನಿಂದ ಥಳಿಸುವುದು ಹಿಂಸೆಯಾಗುವುದಿಲ್ಲವೇ? ಎತ್ತಿನ ಗಾಡಿ ಓಡಿಸುವವರು ಎತ್ತುಗಳಿಗೆ ಥಳಿಸುವುದು ಭಯಾನಕ ಹಿಂಸೆಯೆನಿಸದೇ? ಗಾಣ ತಿರುಗುವ ಎತ್ತುಗಳಿಗೆ ಥಳಿಸುವುದು, ಕತ್ತೆಗಳ ಮೇಲೆ ಅಗಸ ಬಟ್ಟೆ ಸಾಗಿಸುವುದು, ಕುದುರೆಗಾಡಿಗಳಿಗೆ ಕುದುರೆ ಕಟ್ಟುವುದು ಕೂಡ ಪ್ರಾಣಿ ಹಿಂಸೆಯಾಗುವುದಿಲ್ಲವೇ? – ಚಿದಂಬರ ಬೈಕಂಪಾಡಿ