ಬೆಂಗಳೂರು: ಕಂಬಳ ಸಂಘಟಕರಿಗೆ ಕಳೆದ ವರ್ಷದ ಬಾಕಿ ಅನುದಾನ ಶೀಘ್ರ ಬಿಡುಗಡೆ ಮಾಡುವುದರ ಜತೆಗೆ ಈ ವರ್ಷ ಕನಿಷ್ಠ 5 ಕಂಬಳಗಳಿಗೆ ರಾಜ್ಯ ಸರಕಾರವೇ ಅನುದಾನ ನೀಡಲಿದೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕಳೆದ ಬಾರಿಯ ಪೂರ್ಣ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳು ಸಕಾಲಕ್ಕೆ ಬಿಲ್ಲುಗಳನ್ನು ಸಲ್ಲಿಸದ ಕಾರಣ ಕಳೆದ ಬಾರಿಯ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಬಾಕಿ ಇರುವ 15 ಲಕ್ಷ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಾಗುವುದು. 2023-24ನೇ ಸಾಲಿನಲ್ಲಿ ಪುತ್ತೂರು ಕೋಟಿ-ಚಿನ್ನಯ ಜೋಡುಕೆರೆ ಕಂಬಳಕ್ಕೆ 5 ಲಕ್ಷ ಹಾಗೂ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕೆರೆ ಕಂಬಳಕ್ಕೆ 10 ಲಕ್ಷ ರೂ.ಗಳ ಪ್ರಾಯೋಜಕತ್ವವನ್ನು ಸರ್ಕಾರ ಕೊಟ್ಟಿದೆ. ಇದರ ಜೊತೆಗೆ 2024-24ನೇ ಸಾಲಿನಲ್ಲಿ ಕನಿಷ್ಠ 5 ಕಂಬಳಗಳಿಗೆ ರಾಜ್ಯ ಸರ್ಕಾರವೇ ಅನುದಾನ ನೀಡಲಿದೆ ಎಂದರು.
ತುಳುನಾಡಿನ ಪ್ರಸಿದ್ದ ಜಾನಪದ ಕ್ರೀಡೆ ಕಂಬಳ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 20 ಕಡೆ ಆಯೋಜಿಸಲಾಗುತ್ತಿದೆ. ಡಿ.ವಿ. ಸದಾನಂದಗೌಡರು ಸಿಎಂ ಆಗಿದ್ದಾಗ ತಲಾ 1 ಕೋಟಿಯಂತೆ 20 ಕೋಟಿ ರೂ. ಅನುದಾನ ನೀಡಿದ್ದರು. ನಂತರ ಸಿ.ಪಿ. ಯೋಗೇಶ್ವರ್ ಪ್ರವಾಸೋದ್ಯಮ ಸಚಿವರಾಗಿದ್ದಾಗ 1 ಕೋಟಿ ರೂ. ಕೊಟ್ಟರು. ಕರಾವಳಿ ಭಾಗದ ಈ ಜನಪ್ರಿಯ ಕ್ರೀಡೆಯಲ್ಲಿ ಸ್ವತಃ ಡಿಸಿಎಂ ಭಾಗಿಯಾಗಿ, ಅನುದಾನ ಮತ್ತು ಇತರ ನೆರವಿನ ಭರವಸೆ ಕೊಟ್ಟಿದ್ದರು. ಆದರೆ, ಬಜೆಟ್‌ನಲ್ಲಿ ಹಣ ಇಟ್ಟಿಲ್ಲ, ಕಳೆದ ಬಾರಿಯ ಪೂರ್ಣ ಬಾಕಿ ಕೊಟ್ಟಿಲ್ಲ ಎಂದರು.
ತಾರತಮ್ಯ ಮಾಡಬೇಡಿ:
ಈಗ ಎರಡು ಕಂಬಳಗಳಿಗೆ ಅನುದಾನ ಕೊಟ್ಟಿದ್ದು, ಅದು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಸೇರಲಿವೆ. 20 ಕಡೆ ಕಂಬಳ ನಡೆಯುತ್ತಿದ್ದು, 5 ಕಡೆ ಹಣ ಕೊಡುವುದಾಗಿ ಹೇಳಿದರೆ ಇದು ರಾಜಕೀಯ ಮಾಡಿದಂತೆ ಮತ್ತು ತಾರತಮ್ಯ ಮಾಡಿದಂತೆ ಆಗುತ್ತದೆ ಎಂದು ಪ್ರತಾಪಸಿಂಹ ನಾಯಕ್ ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕ್ರೀಡೆಯಲ್ಲಿ ರಾಜಕಾರಣ ಮಾಡುವುದಿಲ್ಲ. ಕಂಬಳ ಆಯೋಜನೆ ಆಧರಿಸಿಯೇ ಅನುದಾನ ನೀಡಲಾಗಿದೆ. ಈ ವರ್ಷ ಕನಿಷ್ಠ 5 ಕಂಬಳಗಳಿಗೆ ಸರ್ಕಾರ ಅನುದಾನ ನೀಡಲಾಗಿದೆ. ಹೆಚ್ಚಿನ ಕಂಬಳಗಳಿಗೆ ಅನುದಾನ ನೀಡುವ ವಿಚಾರವಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.