Advertisement

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

03:02 AM Dec 22, 2024 | Team Udayavani |

ಮಂಗಳೂರು: ಕರಾವಳಿ ಜಿಲ್ಲೆಯ ಕಂಬಳಗಳಲ್ಲಿಯೇ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇರುವ ಕಂಬಳ ಎಂದು ಜನಜನಿತವಾಗಿರುವುದು ಮೂಲ್ಕಿ ಒಂಬತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳ. ಅರಸು ಮನೆತನದ ಹಿನ್ನೆಲೆಯಿರುವ ಕಾರಣ ಇದಕ್ಕೆ “ಅರಸು ಕಂಬಳ’ ಎಂಬ ಹೆಸರಿದೆ. ಈ ಬಾರಿ ಮೂಲ್ಕಿ ಸೀಮೆಯ ಈಗಿನ ಅರಸ ಎಂ.ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಡಿ. 22ರಂದು ಪಡು ಪಣಂಬೂರಿನಲ್ಲಿ ನಡೆಯಲಿದೆ.

Advertisement

ತುಳುನಾಡನ್ನು ಆಳಿದ ಮೊದಲ ರಾಜಮನೆತನವಾದ ಆಲೂಪರ ಕಾಲದಿಂದಲೇ ಮೂಲ್ಕಿ ಸೀಮೆಯನ್ನು ಆಳುತ್ತಾ ಬಂದಿರುವ ಮೂಲ್ಕಿ ಅರಸು ಮನೆತನವು 400 ವರ್ಷಗಳಿಂದ ಕಂಬಳ ನಡೆಸುತ್ತಾ ಬಂದಿದೆ.

ಹಿನ್ನೆಲೆ ಏನು?
ಶಿಮಂತೂರು ಮೂಲದ ಒಂಬತ್ತು ಮಾಗಣೆಯ ಅರಸರಾದ ಸಾವಂತರು ಪಡುಪಣಂಬೂರಿನಲ್ಲಿ ಅರಮನೆ ನಿರ್ಮಿಸಿದಾಗ ಪಣಂಬೂರಿನಲ್ಲಿ ನಡೆಯುತ್ತಿದ್ದ ಕಂಬಳದ ಮಾದರಿಯಲ್ಲಿ ಈ ಕ್ರೀಡೆಯನ್ನು ತಮ್ಮ ಸೀಮೆಯಲ್ಲೂ ಪ್ರಾರಂಭಿಸಬೇಕು ಎಂಬ ನಿರ್ಧರಿಸಿದರು. ಪಣಂಬೂರಿನ ಕಂಬಳ ಗದ್ದೆಯ ಹಿಡಿಮಣ್ಣನ್ನು ಪಡು ಪಣಂಬೂರಿನ ಬಾಕಿಮಾರು ಗದ್ದೆಯಲ್ಲಿ ಬೆರೆಸಿ 400 ವರ್ಷಗಳ ಹಿಂದೆ ಪ್ರಥಮ ಕಂಬಳಕ್ಕೆ ಅಂದಿನ ಅರಸರು ಚಾಲನೆ ನೀಡಿದ್ದರು.

9 ಮಾಗಣೆಯ ಗ್ರಾಮಸ್ಥರ ಸಂಭ್ರಮ
1974ರಲ್ಲಿ ಅರಮನೆಯ ಅಭಿಮಾನಿಗಳಾಗಿದ್ದ ಕಾಸಪ್ಪಯ್ಯರ ಮನೆ ವೆಂಕಟರಮಣಯ್ಯ, ಪಂಜದಗುತ್ತು ಶಂಭು ಮಲ್ಲಿ, ಮೂಲ್ಕಿಯ ಎಂ.ಆರ್‌. ಪೂಂಜ, ಕೊಲಾ°ಡುಗುತ್ತು ವಾಮನ ಶೆಟ್ಟಿ, ಕೊಲಾ°ಡು ತಿಮ್ಮಯ್ಯ ಶೆಟ್ಟಿ, ಮಂಟ್ರಾಡಿ ಸುಬ್ಬಣ್ಣಯ್ಯ ಮುಂತಾದ ಹಲವರು ಕಂಬಳವನ್ನು ಮತ್ತಷ್ಟು ಆಕರ್ಷಕಗೊಳಿಸಲು ಶ್ರಮಿಸಿದರು.

ಕಂಬಳದಲ್ಲಿ ಎಲ್ಲ ವರ್ಗದ ಜನರ ಪಾಲ್ಗೊಳ್ಳುವಿಕೆಗಾಗಿ ತಂಡ ಕಟ್ಟಿಕೊಂಡು ಅರಸರ ಜತೆ ನಿಂತರು. ಅನಂತರದ ಅವಧಿಯಲ್ಲಿ ಕೆಲಸ ಮಾಡಿದ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌, ಎಡ್ಮೆಮಾರ್‌ ಶ್ರೀಧರ ಶೆಟ್ಟಿ, ಉತ್ರುಂಜೆ ಭುಜಂಗ ಶೆಟ್ಟಿ, ಪಂಜದಗುತ್ತು ಶಾಂತಾರಾಮ ಶೆಟ್ಟಿ, ಕೊಲಾಡು ಗುತ್ತು ರಾಮಚಂದ್ರ ನಾಯಕ್‌ ಮೊದಲಾದವರು ಶ್ರಮಿಸಿದ್ದಾರೆ. ಈ ಸಾಲಿನ ಕಂಬಳದಲ್ಲಿ ಕೊಲಾ°ಡು ಗುತ್ತು ಕಿರಣ್‌ ಶೆಟ್ಟಿ ಈ ತಂಡದ ನೇತೃತ್ವ ವಹಿಸಿದ್ದಾರೆ.

Advertisement

ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿ ರಚನೆ
ಸ್ವಾತಂತ್ರ್ಯದ ಬಳಿಕ ಭೂಮಸೂದೆ ಕಾಯ್ದೆ ಜಾರಿಯಾಗಿ ಒಂದಷ್ಟು ಬದಲಾವಣೆಯಾಗಿದ್ದು, ಕಂಬಳವನ್ನು ಮತ್ತಷ್ಟು ವೈಭವದಿಂದ ನಡೆಸಬೇಕು ಎಂದು ಕಂಬಳಾಭಿಮಾನಿಗಳು ತೀರ್ಮಾನಿಸಿದರು. ಅದರ ಫ‌ಲವಾಗಿ 1973ರಲ್ಲಿ “ಮೂಲ್ಕಿ ಸೀಮೆಯ ಅರಸು ಕಂಬಳ’ ಸಮಿತಿ ಅಸ್ತಿತ್ವಕ್ಕೆ ಬಂತು.


ಆಜ್ರಿ ಯಡೂರು ದೊಡ್ಮನೆ ಶ್ರೀ ನಂದಿಕೇಶ್ವರ ಸಾಂಪ್ರದಾಯಿಕ ಕಂಬಳ

ಸಿದ್ದಾಪುರ: ಉಡುಪಿ ಜಿಲ್ಲೆಯ ಪ್ರಸಿದ್ಧ ಸಾಂಪ್ರದಾಯಿಕ ಕಂಬಳಗಳಲ್ಲಿ ಒಂದಾಗಿರುವ ಆಜ್ರಿ ಗ್ರಾಮದ ಯಡೂರು ದೊಡ್ಮನೆ ಶ್ರೀ ನಂದಿಕೇಶ್ವರ ಸಾಂಪ್ರದಾಯಿಕ ಕಂಬಳವು ಡಿ. 22ರಂದು ಜರಗಲಿದೆ.

ಶ್ರೀ ಚಿತ್ತಾರಿ ಮಹಾಗಣಪತಿ ದೇವರ ಪೂಜೆಗೆ ಉಂಬಳಿ ಬಿಟ್ಟ 5 ಎಕ್ರೆ ಜಾಗದಲ್ಲಿ 3 ಎಕ್ರೆ ಜಾಗ ಕಂಬಳಗದ್ದೆಯಾಗಿದೆ. ಈ ಗದ್ದೆಗೆ ಸಂಬಂಧಿಸಿ ಹಲವು ದೈವ ಸನ್ನಿಧಿಗಳಿವೆ. ಮಲಯಾಳಿ ಬೊಬ್ಬರ್ಯ, ಯಡಗುಡ್ಡೆ ಬೊಬ್ಬರ್ಯ ದೈವಸ್ಥಾನವು ಗದ್ದೆಯ ಹಿಂಭಾಗದಲ್ಲಿದೆ. ಗದ್ದೆಯ ಎಡಭಾಗದಲ್ಲಿ ಶ್ರೀ ನಂದಿಕೇಶ್ವರ ಚಿಕ್ಕಮ್ಮ ಸಪರಿವಾರ ದೈವಸ್ಥಾನ ಮತ್ತು ಎರಡು ದೈವ ಸನ್ನಿಧಿ ಇದೆ.

ಬಲ ಭಾಗದಲ್ಲಿ ಸ್ವಾಮಿ ಸನ್ನಿಧಿ ಇದೆ. ಪೂರ್ವ ದಿಕ್ಕಿನಲ್ಲಿ ಸ್ವಾಮಿ, ಕ್ಷೇತ್ರಪಾಲ, ಚೌಡೇಶ್ವರಿ ಪರಿವಾರ ಗಣಗಳ ಸನ್ನಿಧಿಗಳಿವೆ. ಎಲ್ಲ ದೈವಗಳಿಗೆ ತಾಯಿ ಸ್ವರ್ಣಬೆಟ್ಟಿನಲ್ಲಿ ನೆಲೆಯಾಗಿದ್ದಾಳೆ. ಗದ್ದೆಯ ಸುತ್ತಲೂ 12 ನಾಗ ಬನಗಳಿವೆ. ಕಂಬಳ ಗದ್ದೆಗೆ ಸಂಬಂಧಿಸಿ ಶಿರಭಾಗದಲ್ಲಿ ಹಸ್ರ ಮಲಗದ್ದೆ, ಎಡ ಬದಿಯಲ್ಲಿ ಗೋರಿ ಮಲಗದ್ದೆ, ಬುಡ ಭಾಗದಲ್ಲಿ ಕೊರನಾಳೆ ಗದ್ದೆ, ಹಣಬಿನ ಮಲಗದ್ದೆಗಳಿವೆ.

ಹಿಂದೆ ಯಡೂರು ದೊಡ್ಮನೆ ಕುಟುಂಬದ ಹಿರಿಯರಾದ ವೀರಣ್ಣ ಭಂಡಾರಿ ಅವರು ಮಹಾಗಣಪತಿ ಹಾಗೂ ಎಲ್ಲ ದೈವಗಳಿಗೆ ಪೂಜೆ ನೆರವೇರಿಸಿ, ಸಾಂಪ್ರದಾಯಿಕವಾಗಿ ಕಂಬಳ ನಡೆಸುತ್ತಿದ್ದರು. ಅವರ ಬಳಿಕ 1980ರಿಂದ ಎ. ಮಂಜುನಾಥ ಶೆಟ್ಟಿ ಕಂಬಳ ನಡೆಸುತ್ತಿದ್ದಾರೆ. ಶ್ರೀ ಚಿತ್ತಾರಿ ಮಹಾಗಣಪತಿ ಮತ್ತು ಶ್ರೀ ನಂದಿಕೇಶ್ವರ ಚಿಕ್ಕಮ್ಮ ಸಪರಿವಾರ ದೈವಗಳಿಗೆ ಪೂಜೆ ನೆರವೇರಿಸಿ, ಕಂಬಳ ಆರಂಭಿಸುತ್ತಾರೆ. ಮುಹೂರ್ತ ಕೋಣವಾಗಿ ದಿ| ಗರಡಿಮನೆ ಕುಷ್ಠ ಕೊಠಾರಿ ಅವರ ಕೋಣವನ್ನು ಓಡಿಸುತ್ತಾರೆ. ಕಂಬಳ ಗದ್ದೆಯ ಸುತ್ತಲೂ ಸುತ್ತಕ್ಕಿ ಹಾಕುವ ಸಂಪ್ರದಾಯ ಇದೆ. ಶ್ರೀ ನಂದಿಕೇಶ್ವರ ಚಿಕ್ಕಮ್ಮ ಸಪರಿವಾರ ದೈವಗಳು ಗ್ರಾಮ ದೈವಗಳಾದುದರಿಂದ ಇಲ್ಲಿ ಗೆಂಡೋತ್ಸವ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next