Advertisement
ಕೊಪ್ಪಳ ಜಿಲ್ಲೆಯಿಂದ 15 ಕಿ.ಮೀ. ದೂರದಲ್ಲಿ ಕಾಮನೂರು ಎಂಬ ಗ್ರಾಮವಿದೆ. ಸುಮಾರು 2200 ಜನಸಂಖ್ಯೆ ಇರುವ ಈ ಊರಲ್ಲಿ ಎಲ್ಲಾ ಸಮುದಾಯದ ಜನರೂ ಇದ್ದಾರೆ. ಇಂಥ ಗ್ರಾಮಗಳು ನಾಡಿನ ತುಂಬಾ ಇವೆಯಲ್ಲ; ಇದರಲ್ಲೇನು ವಿಶೇಷ ಅಂದಿರಾ? ಕೇಳಿ: ಇಲ್ಲೊಂದು ವಿಶೇಷವಿದೆ. ಕಾಮನೂರಿನಲ್ಲಿ ಪೆಟ್ಟಿಗೆ ಅಂಗಡಿಗಳಿವೆ, ಪ್ರಾವಿಶನ್ ಸ್ಟೋರ್‌ಗಳಿವೆ. ಆದರೆ ಇಲ್ಲಿ ಬೀಡಿ- ಸಿಗರೇಟ್, ಗುಟ್ಕಾ ಸಿಗುವುದಿಲ್ಲ. ಹೋಟೆಲುಗಳೂ ಇಲ್ಲ. ಮದ್ಯದಂಗಡಿಯನ್ನು ತೆರೆಯಲು ಈ ಊರಿನ ಜನ ಅವಕಾಶವನ್ನೇ ಕೊಟ್ಟಿಲ್ಲ! ಪರಿಣಾಮ, ಕಾಮನೂರು “ಕ್ರಾಂತಿಯ ಊರು’ ಎಂದೇ ಹೆಸರಾಗಿದೆ. ಗಾಂಧೀಜಿಯ ಬದುಕಿನ ಆದರ್ಶವನ್ನು ಅಳವಡಿಸಿಕೊಂಡಿರುವ ಕಾಮನೂರಿನ ಗ್ರಾಮಸ್ಥರು ಕೃಷಿ ಮಾಡುತ್ತಲೇ ಸಂಭ್ರಮದ ಬದುಕು ಕಟ್ಟಿಕೊಂಡಿದ್ದಾರೆ. “ಶ್ರಮ ಜೀವನ ಸುಂದರ ಬದುಕಿಗೆ ದಾರಿ’ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ.
Related Articles
Advertisement
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ಅಂದಿನಿಂದ ಈ ಊರಿನಲ್ಲಿ ಬೀಡಿ-ಸಿಗರೇಟ್, ಗುಟ್ಕಾ ಮಾರುತ್ತಿಲ್ಲ. ಹೋಟೆಲುಗಳು ಶುರುವಾಗಿಲ್ಲ. ಸಾರಾಯಿ ಸಾಗಣೆ ಮಾಡಲು ಬಂದ ಅಬಕಾರಿ ಇಲಾಖೆಯ ಜೀಪನ್ನು ಊರಿನ ಜನ ವಾಪಸ್ ಕಳಿಸಿದ್ದಾರೆ. ಬೀಡಿ-ಸಿಗರೇಟ್, ಗುಟ್ಕಾ, ಮದ್ಯ ಬೇಕೆನ್ನುವವರು ಪಕ್ಕದ ಊರುಗಳಿಗೆ ಹೋಗಿ ಬರಬೇಕು. ಹಾಗೆ ಹೋಗಿ ಬಂದವರನ್ನು ಊರ ಜನ ನಿಕೃಷ್ಟವಾಗಿ ನೋಡುವುದರಿಂದ, ದುಶ್ಚಟಗಳ ಹಿಂದೆ ಬಿದ್ದವರ ಸಂಖ್ಯೆ ಬಹಳ ಕಡಿಮೆ ಎಂಬುದು ಕಾಮನೂರಿನ ಹಿರಿಯರ ಮಾತು. ಊರಿನ ಹಿರಿಯರು ಮತ್ತು ಯುವಕರ ಗಟ್ಟಿ ನಿರ್ಧಾರದಿಂದ ಕಾಮನೂರು ದುಶ್ಚಟ ಮುಕ್ತ ಗ್ರಾಮವಾಗಿ ಉಳಿದಿದೆ. ಇದು ಮಹಿಳೆಯರಾದ ನಮಗೆÇÉಾ ಖುಷಿ ಕೊಡುವ ವಿಚಾರ. ಕುಟುಂಬದ ಸದಸ್ಯರೆÇÉಾ ನೆಮ್ಮದಿಯಿಂದ ಬದುಕುವ ವಾತಾವರಣ ಈ ಊರಲ್ಲಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ಸಿದ್ದಮ್ಮ ಈಶಪ್ಪ ಬಂಗಾರಿ ಸಂಭ್ರಮಿಸುತ್ತಾರೆ.
ದುಶ್ಚಟದ ದುಡ್ಡು ಬೇಡ..!
2200 ಜನಸಂಖ್ಯೆಯ ಊರಿನಲ್ಲಿ ಮದ್ಯ ಮಾರಾಟದ ಶಾಪ್ ಆರಂಭಿಸಲು ಯಾರೂ ಬರಲಿಲ್ಲವೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಅಂಥ ಸಂದರ್ಭವೂ ಬಂದಿತ್ತು. “ಮದ್ಯ ಮಾರಾಟದ ಶಾಪ್ ಆರಂಭಿಸಲು ಅನುಮತಿ ಕೊಟ್ಟರೆ, ಅದಕ್ಕೆ ಪ್ರತಿಯಾಗಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಊರಿನ ದೇವಾಲಯದ ಕಟ್ಟಡದ ಜೀರ್ಣೋದ್ಧಾರ ಮಾಡಿಸುವುದಾಗಿ ವೈನ್ ಶಾಪ್ ಆರಂಭಿಸಲು ಆಸಕ್ತಿ ಹೊಂದಿದ್ದ ವ್ಯಕ್ತಿ ಹೇಳಿದರಂತೆ. ಆಗ ಈ ಊರಿನ ಜನ, “ದುಶ್ಚಟದ ಹಣ ಬಳಸಿ ದೇವಾಲಯದ ಜೀರ್ಣೋದ್ಧಾರ ಬೇಡ. ನಾವು ದುಡಿಮೆಯ ಹಣದಿಂದಲೇ ನಿಧಾನವಾಗಿ ದೇವಸ್ಥಾನದ ಕೆಲಸ ಮಾಡಿಸುತ್ತೇವೆ’ ಎಂದು ಅವರ ಬಾಯಿ ಮುಚ್ಚಿಸಿದ್ದಾರೆ.
ಕೃಷಿಯಲ್ಲಿ ಖುಷಿ ಇದೆ…
ಮತ್ತೂಂದು ವಿಶೇಷವೆಂದರೆ, ಕಾಮನೂರಿನ ಜನ ಕೃಷಿಯಲ್ಲಿ “ಖುಷಿ’ ಕಾಣುತ್ತಿದ್ದಾರೆ. ಸೂರ್ಯೋದಯ ಕ್ಕೂ ಮೊದಲು ಮನೆಯಿಂದ ಹೊರಟು ದಿನಪೂರ್ತಿ ಹೊಲಗಳಲ್ಲಿ ದುಡಿದು ಸೂರ್ಯಾಸ್ತದ ಬಳಿಕವೇ ಮರಳುತ್ತಾರೆ. ಗ್ರಾಮದಲ್ಲಿ ಕೆರೆ ನಿರ್ಮಿಸಿಕೊಂಡು ನೀರಿನ ಕೊರತೆ ಉಂಟಾಗದಂತೆ ನೋಡಿಕೊಂಡಿದ್ದಾರೆ. ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ಹಲವು ಬಗೆಯ ಉಪಜೀವನ ಕ್ರಮ ಅನುಸರಿಸುತ್ತಾರೆ.
“ದಾರಿ ತೋರುವ ಮಾದರಿ ಗ್ರಾಮ’ವಾಗಿ ಉಳಿದಿರುವ ಕಾಮನೂರಿನ ಜನರನ್ನು ಅಭಿನಂದಿಸಲು ಮೊನ್ನೆ ಗಾಂಧಿ ಜಯಂತಿಯಂದು ಕೊಪ್ಪಳದ “ಗಾಂಧಿ ಬಳಗ’ ಪಾದಯಾತ್ರೆ ಏರ್ಪಡಿಸಿತ್ತು. ಮಾಜಿ ಸಂಸದ ಕರಡಿ ಸಂಗಣ್ಣ ಪಾದಯಾತ್ರೆಗೆ ಚಾಲನೆ ನೀಡಿದರು. ತಹಸೀಲ್ದಾರ್ ವಿಠ್ಠಲ ಚೌಗಲಾ, ನಗರಸಭೆ ಅಧ್ಯಕ್ಷರು ಸೇರಿ ಒಟ್ಟು 127 ಜನ ಪಾಲ್ಗೊಂಡಿದ್ದರು. “ಬೀಡಿ-ಸಿಗರೇಟ್, ಗುಟ್ಕಾ, ಹೋಟೆಲ್, ಮದ್ಯದಂಗಡಿ ಬೇಡ ಎಂಬ ನಿರ್ಬಂಧ ಇನ್ನೆರಡು ವರ್ಷಗಳಲ್ಲಿ ಮುರಿಯುತ್ತಿತ್ತೇನೋ? ಆಗಲೇ ಆ ಬಗ್ಗೆ ಗೊಣಗಾಟ ಶುರುವಾಗಿತ್ತು. ನೀವೆಲ್ಲ ಬಂದು, ನಮ್ಮ ನಿಯಮಗಳಿಗೆ ಅಂಗೀಕಾರ ಕೊಟ್ಟಿರಿ’ ಎನ್ನುತ್ತ ಕಾಮನೂರಿನ ದ್ಯಾಮಣ್ಣ ಹೊನ್ನತ್ತಿ ಭಾವುಕರಾದರು. ಸಂಸದ ರಾಜಶೇಖರ ಹಿಟ್ನಾಳ, ದೂರವಾಣಿ ಮೂಲಕ ಜನರೊಂದಿಗೆ ಮಾತ ನಾಡಿ, ಸಂಸದರ ಆದರ್ಶ ಗ್ರಾಮವಾಗಿ ಕಾಮನೂರನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ಇದರಿಂದ ಸುಮಾರು 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆ ಗಳು ಕಾಮನೂರಿಗೆ ಬರಲಿವೆ. ಇಂಥ ಗ್ರಾಮಗಳು ಪ್ರತಿ ಜಿಲ್ಲೆಯಲ್ಲೂ ಇರಬಾರದೆ?
ಗೋರಕ್ಷಕ ಕುಟುಂಬ:
ಕಾಮನೂರಿನಲ್ಲಿ ಕಾಣುವ ದೇಸಿ ಗೋಸಾಕಣೆಯೇ ಒಂದು ವಿಶೇಷ. ಆಕಳುಗಳ ಜತೆಗೆ ವರ್ಷವಿಡೀ ಸಂಚರಿಸುತ್ತ, ಅವುಗಳನ್ನು ಜತನದಿಂದ ಪಾಲಿಸುವ ಕುಟುಂಬಗಳು ಇಲ್ಲಿವೆ. ಸುಮಾರು 75 ವರ್ಷದಿಂದ ಗೋಪಾಲನೆ ಮಾಡುತ್ತಿರುವ ಫಕೀರಪ್ಪ ಜಂತ್ಲಿ ಅವರ ಬಳಿ 300 ಹಸು ಇವೆ. ನೂರಾರು ಆಕಳಿದ್ದರೂ ಹಾಲಿನ ಮಾರಾಟ ಅವರಲ್ಲಿ ಇಲ್ಲ. ಮನೆಗೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ಉಳಿದಿದ್ದನ್ನು ಕರುಗಳಿಗೆ ಬಿಡುತ್ತೇವೆ. ಆ ಕರುಗಳು ದಷ್ಟಪುಷ್ಟವಾಗಿ ಬೆಳೆಯಬೇಕು ಎಂಬುದು ನಮ್ಮಿಚ್ಛೆ ಎನ್ನುತ್ತಾರೆ, ಮೈಲಾರೆಪ್ಪ ಐರಾಣಿ.
ಬೇಸಿಗೆಯಲ್ಲಿ ಮೇವು ಸಿಗದೇ ಹೋದಾಗ, ಕರ್ನಾಟಕದ ಬೇರೆ ಭಾಗಕ್ಕೆ ಈ ಕುಟುಂಬದ ಹಿರಿಯರು ಆಕಳು ಹಿಂಡಿನ ಜತೆ ವಲಸೆ ಹೊರಡುತ್ತಾರೆ. ಮುಂಗಾರು ಶುರುವಾಗುತ್ತಲೇ, ಮತ್ತೆ ಕಾಮನೂರಿನ ಕಡೆ ಮುಖ ಮಾಡುತ್ತಾರೆ. ಅಪರೂಪಕ್ಕೆ ಮಧ್ಯೆ ಮಳೆ- ಗಾಳಿ ಹೊಡೆತಕ್ಕೆ ಗೋವು ಹಿಂಡು ಸಿಲುಕುವ ಸಾಧ್ಯತೆಯೂ ಇರುತ್ತದೆ. ಏನೂ ಮಾಡುವ ಹಾಗಿಲ್ಲ. ನಾವು ಚಿಕ್ಕ ಗುಡಿಸಲಿನಲ್ಲಿ ಆಶ್ರಯ ಪಡೆಯುತ್ತೇವೆ. ಗಿಡಮರಗಳ ಕೆಳಗೆ ಹಸುಗಳು ಕಾಲ ಕಳೆಯುತ್ತವೆ ಎಂದು ಗೋಪಾಲಕರು ಹೇಳುತ್ತಾರೆ.
ಕೃಷಿ ವೈವಿಧ್ಯದ ತವರು…
ಕಾಮನೂರಿನಲ್ಲಿ ಕಾಣುವ ಕೃಷಿ ವೈವಿಧ್ಯ ಬೆರಗು ಮೂಡಿಸುತ್ತದೆ. ಅಲ್ಪಾವಧಿ ಬೆಳೆಗಳಾದ ಸೊಪ್ಪು, ತರಕಾರಿಗಳಿಂದ ಹಿಡಿದು ದೀರ್ಘಾವಧಿ ಕಾಲದಲ್ಲಿ ಆದಾಯ ತಂದುಕೊಡುವ ತೋಟಗಾರಿಕೆ ಬೆಳೆಗಳನ್ನು ಸಹ ಇಲ್ಲಿನ ಕೃಷಿಕರು ಬೆಳೆಯುತ್ತಿದ್ದಾರೆ.
ಕಾಮನೂರು ಸಿರಿಧಾನ್ಯದ ತವರು. ಹಳ್ಳದ ನೀರಿನಲ್ಲಿ ಸಹಜವಾಗಿ ಬೆಳೆಯುವ “ಡುಗ್ಗ’ ಹಾಗೂ “ಬಿಳಿಚಿಗ’ ಎಂಬ ಎರಡು ದೇಸಿ ಭತ್ತದ ತಳಿಗಳಿವೆ. ಜತೆಗೆ ಪೇರಲ, ನಿಂಬೆ, ಮಾವು, ಡ್ರಾಗನ್, ಬಾಳೆ, ಸೀತಾಫಲದಂಥ ಹಣ್ಣುಗಳ ಕೃಷಿ ನಡೆಯುತ್ತಿದೆ. ಇತ್ತೀಚೆಗೆ ಈ ಸಾಲಿಗೆ ಸೇರ್ಪಡೆಯಾಗಿದ್ದು ಗರ್ಕಿನ್ (ಮಿಡಿ ಸೌತೆ). ಕೆಲವು ಕಂಪನಿಗಳು, ಇಲ್ಲಿ ಬೆಳೆಯುವ ಗರ್ಕಿನ್ ಅನ್ನು ವಿದೇಶಕ್ಕೂ ಕಳಿಸುತ್ತಿವೆ. ಸುಲಭವಾಗಿ ಲಭ್ಯವಾಗುವ ಅಂತರ್ಜಲ ರೈತರ ಬದುಕಿಗೆ ಚೈತನ್ಯ ತುಂಬಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆಯೂ ಇಲ್ಲಿನ ಕೃಷಿಕರ ಸಾಧನೆ ಅನುಪಮ.
ನಾಗರಾಜನಾಯಕ.
ಡಿ. ಡೊಳ್ಳಿನ
ಚಿತ್ರಗಳು: ಭರತ್ ಕಂದಕೂರ