ಬೆಂಗಳೂರು: ಕರ್ನಾಟಕದಲ್ಲಿನ ಕೈಗಾರಿಕೆಗಳಿಗೆ ಉತ್ತೇಜನಕಾರಿ ವಾತಾವರಣ ಹಾಗೂ ಬಂಡವಾಳ ಆಕರ್ಷಣೆಗೆ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಧ್ಯ ಪ್ರದೇಶ ಸಿಎಂ ಕಮಲ್‌ನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂ ದಿಗೆ ಬೆಳಗಿನ ಉಪಾಹಾರ ಸೇವಿಸಿ, ಉಭಯ ರಾಜ್ಯಗಳ ಆರ್ಥಿಕ ಸ್ಥಿತಿಗತಿ ಕುರಿತ ಚರ್ಚೆ ವೇಳೆ ಕಮಲ್‌ನಾಥ್ ಅವರು ರಾಜ್ಯ ಸರ್ಕಾರದ ಪ್ರಯತ್ನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರತಿ ಹೂಡಿಕೆದಾರರು ಬೆಂಗಳೂರಿನ ಬಗ್ಗೆ ಹಾಗೂ ಪೂರ್ವ ರಾಷ್ಟ್ರಗಳಲ್ಲಿ ಬೆಂಗಳೂರು ಜ್ಞಾನಾಧಾರಿತ ಕೇಂದ್ರವಾಗಿ ಬೆಳೆದಿರುವ ಬಗ್ಗೆ ಉಲ್ಲೇಖೀಸುತ್ತಾರೆ. ಈ ವಿಷಯದಲ್ಲಿ ಕರ್ನಾಟಕದವರನ್ನು ಮೀರಿಸಲು ಸಾಧ್ಯವಿಲ್ಲ ಎಂದು ಕಮಲ್‌ನಾಥ್ ಅವರು ಯಡಿಯೂರಪ್ಪ ಅವರನ್ನು ಅಭಿನಂದಿಸಿದರು.
ಇದೇ ವೇಳೆ ಯಡಿಯೂರಪ್ಪ ಅವರು, ಕೃಷಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನೂತನ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ನೀಡುವ 6,000 ರೂ. ಜತೆಗೆ ರಾಜ್ಯ ಸರ್ಕಾರದ ವತಿಯಿಂದ 4,000 ರೂ.ನೀಡಲಾಗುತ್ತಿದ್ದು, ಸುಮಾರು 40 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.
ಕಮಲ್‌ನಾಥ್ ಅವರು ಬೆಂಗಳೂರನ್ನು ಕೃತಕ ಬುದ್ದಿಮತ್ತೆ ಹಾಗೂ ಆತಿಥ್ಯ ವಲಯದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ತೋರಿದರು. ಜತೆಗೆ, ಕರ್ನಾಟಕ ಪೆವಿಲಿಯನ್ ಹಾಗೂ ಹೂಡಿಕೆ ಆಕರ್ಷಣೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದರು.