ಕಮಲನಗರ: ಪಟ್ಟಣದ ಗಡಿಭಾಗದಲ್ಲಿರುವ ಚೆಕ್‌ಪೋಸ್ಟ್‌ಗೆ ಬೀದರ ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿದ್ದ ತಾಲೂಕಿನ ವಿವಿಧ ಗ್ರಾಮಗಳ ಕಾರ್ಮಿಕರನ್ನು ಸರಕಾರ ಬಸ್‌ಗಳ ಮೂಲಕ ಕರೆತರಲಾಗುತ್ತಿದೆ. ಇಲ್ಲಿಯ ಚನ್ನಬಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೀವರ್ ಕ್ಲಿನಿಕ್‌ನಲ್ಲಿ ಆರೋಗ್ಯ ತಪಾಸಣೆ ಮಾಡಿ ಕಳುಹಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರದ ಮುಂಬೈ, ಪುಣೆ, ಲಾತೂರ, ಪರಬಣಿ, ಸೊಲಾಪುರ, ನಾಂದೇಡ, ಔರಂಗಾಬಾದ, ಉದಗೀರ, ಪರಳಿ ಮತ್ತಿತರ ಕಡೆಯಿಂದ ಅಲ್ಲಿನ ಜಿಲ್ಲಾಧಿ ಕಾರಿ ಪರವಾನಗಿ ಪತ್ರ ಪಡೆದ ಹತ್ತಾರು ಬಸ್‌ಗಳು ಬರಲಿವೆ. ಪ್ರತಿ ಬಸ್‌ನಲ್ಲಿ 35 ಜನರು ಬರಲಿದ್ದಾರೆ ಎಂದು ಹೇಳಿದರು.
ಕೊರೊನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಬಂದ್ ವಾಹನದಲ್ಲಿಯೇ ಅವರ ತವರಿಗೆ ಕಳುಹಿಸಿಕೊಡಲಾಗುವುದು. ಅಲ್ಲದೇ ಅವರು ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಲಾಕ್‌ಡೌನ್ ನಿಯಮ ಪಾಲನೆ ಮಾಡಬೇಕು. 14 ದಿನಗಳ ಕಾಲ ಹೋಮ್‌ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗುವುದು. ಒಂದು ವೇಳೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಡಿಎಚ್‌ಒ ಡಾ| ವ್ಹಿ.ಜಿ. ರೆಡ್ಡಿ, ಡಾ| ಸಂತೋಷ ಕಾಳೆ, ಅಶ್ವಿನ ಪಾಟೀಲ, ಸಿಪಿಐ ಪಾಲಕ್ಷಯ್ಯ ಹಿರೇಮಠ, ತಹಶೀಲ್ದಾರ್ ರಮೇಶ ಪೇದ್ದೆ, ಉಪತಹಶೀಲ್ದಾರ್ ಗೋಪಾಲಕೃಷ್ಣ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಕಳಸೆ, ರಾಜಕುಮಾರ ಚಿಕ್ಲಿ, ಮಹಾದೇವ, ವಿಶ್ವನಾಥ ಪವಾರ ಇದ್ದರು.