Advertisement

ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಿಂದ ಕೋಟ್ಯಂತರ ರೂ. ವಂಚನೆ ಆರೋಪ: ಪ್ರತಿಭಟನೆ

01:14 AM Dec 20, 2022 | Team Udayavani |

ಉಡುಪಿ : ಠೇವಣಿ ಇಟ್ಟ ಹಣ ಮರಳಿಸದೆ ವಂಚನೆ ಮಾಡಿದೆ ಎಂದು ಆರೋಪಿಸಿ ನಗರದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ಗ್ರಾಹಕರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಸಂಘವು ಠೇವಣಿಗೆ ಶೇ. 12ರ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಆಮಿಷವೊಡ್ಡಿ ಹಣ ಸಂಗ್ರಹಿಸಿತ್ತು. ಸಂಘದ ಅಧ್ಯಕ್ಷ ಇಂದ್ರಾಳಿಯ ಬಿ.ವಿ. ಲಕ್ಷ್ಮೀನಾರಾಯಣ, ರವಿ ಉಪಾಧ್ಯ, ಬಿ.ವಿ. ಬಾಲಕೃಷ್ಣ, ಭಾಸ್ಕರ ಉಪಾಧ್ಯ, ಉದಯ ಉಪಾಧ್ಯ, ರಾಧಿಕಾ, ಸುಜಾತಾ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿ.ವಿ. ಲಕ್ಷ್ಮೀನಾರಾಯಣ ಸಹಕಾರ ಸಂಘ ನಿರ್ಮಿಸಿ ಗ್ರಾಹಕರಿಂದ ಅಧಿಕ ಬಡ್ಡಿ ಆಸೆ ತೋರಿಸಿ ಹಣವನ್ನು ಠೇವಣಿ ಇರಿಸಿದ್ದರು. ಆದರೆ ಈಗ ಹಣ ಕೇಳಿದರೂ ನೀಡುತ್ತಿಲ್ಲ. ಅಲ್ಲದೆ ಸಿಬಂದಿಗೂ ವೇತನ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಆಕ್ರೋಶಿತರಾಗಿದ್ದ ಗ್ರಾಹಕರು ಸೋಮವಾರ ಕಚೇರಿಗೆ ಮುತ್ತಿಗೆ ಹಾಕಿದರು.

ಆತ್ಮಹತ್ಯೆಗೆ ಮುಂದಾದ ಸಿಬಂದಿ
ಬೆಳಗ್ಗೆ 11ರ ವರೆಗೆ ಬಂದ್‌ ಇದ್ದ ಸೊಸೈಟಿಯನ್ನು ಬಳಿಕ ತೆರೆದಾಗ ಗ್ರಾಹಕರು ಒಳಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಹಿಳಾ ಸಿಬಂದಿ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಬಳಿಕ ಅವರನ್ನು ಸಮಾಧಾನಪಡಿಸಲಾಯಿತು. ಲಕ್ಷ್ಮೀನಾರಾಯಣ್‌ ಅವರು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಲಾಯಿತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದರು. ಪ್ರಸ್ತುತ ಸೊಸೈಟಿಗೆ ಬೀಗ ಜಡಿಯಲಾಗಿದೆ.

ಕೋಟ್ಯಂತರ ರೂ. ವಂಚನೆ
ಈ ಸೊಸೈಟಿಯಲ್ಲಿ ಸುಮಾರು 700ಕ್ಕೂ ಅಧಿಕ ಮಂದಿ ಸದಸ್ಯರಿದ್ದರು. ಸಾವಿರದಿಂದ ಕೋಟಿ ರೂ.ಗಳವರೆಗೆ ಠೇವಣಿ ಇರಿಸಿದ್ದಾರೆ. ಆಡಿಟ್‌ ಕೂಡ ಮಾಡಿಲ್ಲ. ಕರೆ ಮಾಡುವಾಗ ಸೊಸೈಟಿಯ ಸಿಬಂದಿ ಸ್ವೀಕರಿಸುತ್ತಿಲ್ಲ ಎಂದು ವಂಚನೆಗೊಳಗಾದವರು ಆಕ್ರೋಶಿತ ರಾಗಿ ಘೋಷಣೆ ಕೂಗಿದರು.

Advertisement

ಗ್ರಾಹಕ ನ್ಯಾಯಾಲಯ, ಠಾಣೆಗೆ ದೂರು
ಸೊಸೈಟಿಯಿಂದಾದ ವಂಚನೆಯ ಬಗ್ಗೆ ಸಂತ್ರಸ್ತರು ಉಡುಪಿ ನಗರ ಠಾಣೆ ಹಾಗೂ ಗ್ರಾಹಕ ನ್ಯಾಯಾಲಯಕ್ಕೆ ಎಲ್ಲರ ಸಹಿ ಸಂಗ್ರಹಿಸಿ ದೂರು ನೀಡಿದ್ದಾರೆ. ದೂರು ಬಂದಿದೆ. ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಠೇವಣಿ ಇರಿಸಿದ 18 ಲ.ರೂ.ಗಳನ್ನು ಮನೆ ನಿರ್ಮಾಣಕ್ಕೆಂದು ತೆಗೆಯಲು ಉದ್ದೇಶಿಸಿದ್ದೆ. ಆದರೆ ಈಗ ಅವರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಮಗೆ ಸೂಕ್ತ ನ್ಯಾಯ ಒದಗಿಸಬೇಕು.
– ಪುಷ್ಪಾ, ವಂಚನೆಗೊಳಗಾದವರು

ಕೊರೊನಾ ಅವಧಿಯಲ್ಲಿ ನಾನು ಕೆಲಸ ಕಳೆದು ಕೊಂಡಿದ್ದೆ. ಈ ವೇಳೆ ಲಭಿಸಿದ ಹಣವನ್ನು ಇಲ್ಲಿ ಠೇವಣಿ ಇರಿಸಿದ್ದೆ. ಪ್ರಸ್ತುತ ತೆಗೆಯಲು ಕೇಳಿದಾಗ ಇವತ್ತು, ನಾಳೆ ಎಂದು ದಿನದೂಡುತ್ತಿದ್ದಾರೆ.
– ಶ್ರೀನಿವಾಸ ಪ್ರಭು ವಂಚನೆಗೊಳಗಾದವರು

Advertisement

Udayavani is now on Telegram. Click here to join our channel and stay updated with the latest news.

Next