ವಾಷಿಂಗ್ಟನ್:ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಅಮೆರಿಕ ನಿವಾಸಿ ಕಮಲಾ ಹ್ಯಾರಿಸ್ ಅವರು ಮಂಗಳವಾರ(ಡಿಸೆಂಬರ್ 29, 2020) ಟೆಲಿವಿಷನ್ ನೇರಪ್ರಸಾರದಲ್ಲಿ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.
ಯುನೈಟೆಡ್ ಮೆಡಿಕಲ್ ಸೆಂಟರ್ ನಲ್ಲಿ ಮಾಸ್ಕ್ ಧರಿಸಿದ್ದ ಕಮಲಾ ಹ್ಯಾರಿಸ್ ಮೊದಲ ಎರಡು ಹನಿ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದು, ಈ ಮೂಲಕ ವಾಷಿಂಗ್ಟನ್ ಡಿಸಿಯಲ್ಲಿ ಬೃಹತ್ ಸಂಖ್ಯೆಯನಲ್ಲಿ ವಾಸವಾಗಿರುವ ಆಫ್ರಿಕನ್-ಅಮೆರಿಕನ್ ಜನರಲ್ಲಿ ವಿಶ್ವಾಸ ಮೂಡಿಸಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದಾದ್ಯಂತ ಕೋವಿಡ್ 19 ಸೋಂಕು ಸಂಬಂಧಿ ಅನಾರೋಗ್ಯ ಮತ್ತು ಸಾವಿನ ಪ್ರಕರಣದಲ್ಲಿ ಆಫ್ರಿಕನ್-ಅಮೆರಿಕನ್ ಜನಸಂಖ್ಯೆಯೇ ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸಿದೆ. ಅಲ್ಲದೇ ಈ ಸಮುದಾಯಕ್ಕೆ ತುರ್ತು ಲಸಿಕೆ ನೀಡಬೇಕಾದ ಅಗತ್ಯವಿದೆ ಎಂದು ಸಮೀಕ್ಷೆ ಕೂಡಾ ತಿಳಿಸಿತ್ತು.
ಇದನ್ನೂ ಓದಿ:ಬ್ರಿಟನ್ ನಿಂದ ಆಗಮಿಸಿದ 20 ಜನರಲ್ಲಿ ರೂಪಾಂತರಿತ ವೈರಸ್! ರಾಜ್ಯದಲ್ಲಿ ಮತ್ತೆ 4 ಪ್ರಕರಣ
ಈ ನಿಟ್ಟಿನಲ್ಲಿ ನಿಮ್ಮ ಸಮುದಾಯದಲ್ಲಿಯೇ ಲಸಿಕೆ ತೆಗೆದುಕೊಳ್ಳಬಹುದು ಎಂದು ನೆನಪಿಸುತ್ತಿದ್ದೇನೆ. ನಿಮಗೆ ತಿಳಿದಿರುವ ಜನರಿಂದಲೇ ಲಸಿಕೆ ಸ್ವೀಕರಿಸಿ ಎಂದು ಹ್ಯಾರಿಸ್ ಅಮೆರಿಕದ ಮೊಡರ್ನಾ ಸಂಸ್ಥೆ ತಯಾರಿಸಿದ ಲಸಿಕೆಯನ್ನು ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಜನವರಿ 20ರಂದು ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸುವ ಮೂಲಕ ಅಮೆರಿಕದ ಪ್ರಥಮ ಇಂಡೋ ಅಮೆರಿಕನ್ ಮೂಲದ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.