Advertisement

ಕಮಲಾ ಮೂಲದ ಬಗ್ಗೆ ಚರ್ಚೆ; ಶ್ವೇತ ಭವನದಲ್ಲಿ ಸೇವೆ ಸಲ್ಲಿಸಲು ಅರ್ಹತೆ ಇಲ್ಲ: ಟ್ರಂಪ್‌

12:15 AM Aug 15, 2020 | mahesh |

ವಾಷಿಂಗ್ಟನ್‌: ಕಮಲಾ ಹ್ಯಾರಿಸ್‌ ಅವರನ್ನು ಡೆಮಾಕ್ರಟಿಕ್‌ ಪಕ್ಷದಿಂದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಮರುಕ್ಷಣದಿಂದಲೇ ಅವರ ಮೂಲವನ್ನು ಕೆದಕಲಾಗುತ್ತಿದೆ. ಕಮಲಾರ ತಂದೆ ಜಮೈಕಾ ಮೂಲದವರು, ತಾಯಿ ಭಾರತ ಮೂಲದವರು. ಹಾಗಾಗಿ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕೇ ಇದೆಯೇ ಇಲ್ಲವೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.

Advertisement

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಕೂಡ ಇಂಥದ್ದೇ ಸಂದರ್ಭ ಎದುರಿಸಿದ್ದರು. ಈಗ ಅದೇ ಸಂದರ್ಭ ಕಮಲಾ ಅವರ ಪಾಲಿಗೂ ಬಂದಿದೆ. ಇತ್ತೀಚೆಗೆ, ವೈಟ್‌ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವೈಟ್‌ಹೌಸ್‌ನಲ್ಲಿ ಸೇವೆ ಸಲ್ಲಿಸಲು ಬೇಕಾಗಿರುವ ಅರ್ಹತೆ ಕಮಲಾ ಹ್ಯಾರಿಸ್‌ ಅವರಿಗಿಲ್ಲ. ಅವರ ತಂದೆ-ತಾಯಿಯ ಮೂಲವೇ ಬೇರೆಯಾಗಿರುವುದರಿಂದ ಅರ್ಹತೆ ಅವರಿಗೆ ಇರಲಾರದು ಎಂದಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ವಿಶ್ಲೇಷಕರು ಏನಂತಾರೆ?: ಅಸಲು ವಿಷಯವೇನೆಂದರೆ, ಕಮಲಾ ವಿರೋಧಿಗಳು ಎತ್ತಿರುವ ಆಕ್ಷೇಪ ವಾಸ್ತವಕ್ಕೆ ದೂರವಾದದ್ದು ಎಂದು ಹಲವಾರು ವಿಶ್ಲೇಷಕರು ತಿಳಿಸಿದ್ದಾರೆ. ಕಮಲಾ ಹ್ಯಾರಿಸ್‌ ತಂದೆ ಜಮೈಕಾದವರು ಹಾಗೂ ತಾಯಿ ಭಾರತೀಯರಾಗಿದ್ದರೂ ಕಮಲಾ ಅವರು ಹುಟ್ಟಿ ಬೆಳೆದದ್ದು ಅಮೆರಿಕದಲ್ಲೇ. ಆಕ್ಲೆಂಡ್‌ನ‌ಲ್ಲಿ ಹುಟ್ಟಿದ ಅವರು ಕ್ಯಾಲಿಫೋರ್ನಿಯಾದಲ್ಲಿ ಬೆಳೆದು ಅಲ್ಲೇ ಪ್ರವರ್ಧಮಾನಕ್ಕೆ ಬಂದವರು. ಹಾಗಾಗಿ ಅವರು ಅಮೆರಿಕ ಪ್ರಜೆಯೇ ಆಗಿದ್ದಾರೆ. ಆದ್ದರಿಂದ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಎಲ್ಲ ರೀತಿಯ ಅರ್ಹತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಭಾರತ ವ್ಯಾಪಿ ಹವಾ!
ಅಮೆರಿಕದ 2ನೇ ಮಹೋನ್ನತ ಹುದ್ದೆಗೆ ಲಗ್ಗೆಯಿಡಲು ಅವಕಾಶ ಪಡೆದ ಕಮಲಾ ಹ್ಯಾರಿಸ್‌ ಅವರ ಬಗ್ಗೆ ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ, ಸಂತಸ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಕೆಲವರು ಕಮಲಾ ಹ್ಯಾರಿಸ್‌ ಹಾಗೂ ಅವರ ಸಹೋದರಿ ಮಾಯಾ ಹ್ಯಾರಿಸ್‌ ಅವರು ಚೆನ್ನೈ ಬೇಸಂಟ್‌ ನಗರ್‌ನಲ್ಲಿರುವ ತಮ್ಮ ಅಜ್ಜಿ-ತಾತನ ಮನೆಗೆ ಹಲವಾರು ವರ್ಷಗಳ ಹಿಂದೆ ಭೇಟಿ ನೀಡಿದ್ದಾಗ ತಗೆಸಿಕೊಂಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next