ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮೊದಲ ಕಪ್ಪು ಮಹಿಳೆ ಹಾಗೂ ಮೊದಲ ಏಷ್ಯನ್ ಅಮೆರಿಕ ಮಹಿಳೆಯನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಂತಾಗಿದೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ “ಕಮಲಾ ಹ್ಯಾರಿಸ್” ಅವರನ್ನು ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಈ ಮೊದಲು ಜೋ ಬಿಡೆನ್ ವಿರೋಧಿಯಾಗಿದ್ದ ಕಮಲಾ, ಅಧ್ಯಕ್ಷೀಯ ಚುನಾವಣಾ ಪ್ರಚಾರ ಶುರುವಾದ ಮೇಲೆ ಕಮಲಾ ಅವರು ಬಿಡನ್ ಗೆ ನಿಕಟವರ್ತಿಯಾಗಿದ್ದರು.
ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಉಪಾಧ್ಯಕ್ಷೆ ಅಭ್ಯರ್ಥಿ ಆಯ್ಕೆಯ ನಿರ್ಧಾರ ತುಂಬಾ ಮಹತ್ವದ್ದಾಗಿತ್ತು. ಕಮಲಾ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಲ್ಲಿ ಬಿಡೆನ್ ಅವರು ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯನ್ನು ಮಾತ್ರ ದೃಷ್ಟಿಕೋನದಲ್ಲಿಟ್ಟುಕೊಂಡಿಲ್ಲ, ಬದಲಿಗೆ ಡೆಮಾಕ್ರಟಿಕ್ ಪಕ್ಷದ ಭವಿಷ್ಯದ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ವಿಶ್ಲೇಷಿಸಿದೆ.
ಕಮಲಾ ಹ್ಯಾರಿಸ್ (55ವರ್ಷ) ಅವರ ತಂದೆ ಜಮೈಕಾ ವಲಸಿಗ, ತಾಯಿ ಭಾರತೀಯ ಮೂಲದವರು. ಕಮಲಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ಅಟಾರ್ನಿ ಆಗಿ ಹಾಗೂ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.