Advertisement

ಕಮಲಾ ಸೊಸೆ ಮೀನಾಕ್ಷಿ ಬೈಡೆನ್‌ಗೆ ತಲೆನೋವಾಗುತ್ತಿದ್ದಾರಾ?

01:07 AM Feb 08, 2021 | Team Udayavani |

ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ ಪಾಪ್‌ ತಾರೆ ರಿಹನ್ನಾ, ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್‌ ಹಾಗೂ ಕಮಲಾ ಹ್ಯಾರಿಸ್‌ ಸೊಸೆ ಮೀನಾಕ್ಷಿ ಹ್ಯಾರಿಸ್‌ ಟ್ವೀಟ್‌ಗಳನ್ನು ಮಾಡಿದ್ದು ಬಹುವಾಗಿ ಚರ್ಚೆಯಾಗುತ್ತಿದೆ. ಗಮನಾರ್ಹ ಸಂಗತಿಯೆಂದರೆ, ರೈತ ಹೋರಾಟಗಳ ವಿರುದ್ಧ ಇವರಲ್ಲಿ ನಿರಂತರ ಟ್ವೀಟ್‌ ಮಾಡಿ ಸುದ್ದಿಯಾಗುತ್ತಿರುವವರು ಮೀನಾಕ್ಷಿ ಹ್ಯಾರಿಸ್‌(36). ಒಂದೆಡೆ ಖುದ್ದು ಬೈಡೆನ್‌, ಕಮಲಾ ನೇತೃತ್ವದ ಅಮೆರಿಕನ್‌ ಸರಕಾರ ಕೇಂದ್ರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಹೇಳಿಕೆ ನೀಡಿದರೆ, ಇನ್ನೊಂದೆಡೆ ಕಮಲಾರ ಸೊಸೆ ಮೀನಾಕ್ಷಿ ಮಾತ್ರ ಭಾರತ ಸರಕಾರದ ವಿರುದ್ಧ ಟ್ವೀಟ್‌ ದಾಳಿ ಮುಂದು ವರಿಸಿದ್ದಾರೆ. ತಮ್ಮ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಅವರು ರೈತರ ಪ್ರತಿಭಟನೆಗಳಿಗೆ ಧಾರ್ಮಿಕ ಆಯಾಮವನ್ನೂ ನೀಡುತ್ತಿದ್ದು, ಈ ವಿಚಾರವೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. “”ಭಾರತದ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ. ಇದು ಕೇವಲ ಕೃಷಿ ನೀತಿಯ ವಿಚಾರ ವಲ್ಲ, ಇದು ಧಾರ್ಮಿಕ ಅಲ್ಪಸಂಖ್ಯಾಕರ ವಿರುದ್ಧದ ಕಿರುಕುಳ. ಪೊಲೀಸ್‌ ಹಿಂಸೆ,” ಎಂದಿದ್ದಾರೆ.

Advertisement

ಮೀನಾಕ್ಷಿ ಬೈಡೆನ್‌ ಸರಕಾರಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಏಳುತ್ತಿದೆ. ಚುನಾವಣೆ ಸಮಯದಲ್ಲಿ ಮೀನಾಕ್ಷಿ ಡೆಮಾಕ್ರಟಿಕ್‌ ಪಕ್ಷದ ಪರ ಟೀಶರ್ಟ್‌ಗಳನ್ನು ಮಾರಾಟ ಮಾಡಿ ಹಣ ಮಾಡಿಕೊಂಡಿದ್ದರಿಂದ ಅನಂತರ ಅವರನ್ನು ಪ್ರಚಾರದಿಂದ ದೂರ ಇಡಲಾಯಿತು! ಆದರೆ ಅನಂತರ ಬೈಡೆನ್‌, ಕಮಲಾ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲು ಮೀನಾಕ್ಷಿ ಹ್ಯಾರಿಸ್‌ ತಮ್ಮೊಬ್ಬರಿಗಾಗಿ ಕಳಿಸಲಾದ ಖಾಸಗಿ ವಿಮಾನದಲ್ಲಿ ಬಂದಿಳಿದರು! ಆ ವಿಮಾನ ಬೈಡೆನ್‌ ಪರ ಉದ್ಯಮಿಯದ್ದು ಎಂದು ಬಹಿರಂಗವಾಗಿ ಟೀಕೆಗೆ ಗುರಿಯಾಯಿತು. ಈ ಬಗ್ಗೆ ಪೊಲಿಟಿಕೋ ಪತ್ರಿಕೆಯಲ್ಲಿ ಪ್ರಕಟವಾಗಿರುವ “ದ ಮೀನಾ ಪ್ರಾಬ್ಲಿಂ’ ಎನ್ನುವ ಲೇಖನ ಚರ್ಚೆಯಾಗುತ್ತಿದೆ. ಮೀನಾಕ್ಷಿ ಆನ್‌ಲೈನ್‌ನಲ್ಲಿ ಬಟ್ಟೆಗಳನ್ನು ಮಾರುವ ವೆಬ್‌ಸೈಟ್‌ ಅನ್ನೂ ಹೊಂದಿದ್ದಾರೆ. ಅಲ್ಲದೇ ನವೆಂಬರ್‌ ಚುನಾವಣೆಯ ಅನಂತರ ಒಂದು ಪ್ರೊಡಕ್ಷನ್‌ ಕಂಪೆನಿಯನ್ನೂ ಸ್ಥಾಪಿಸಿದ್ದಾರೆ. ಚುನಾವಣ ಸಮಯದಲ್ಲಿ ಕಮಲಾ ಹ್ಯಾರಿಸ್‌ ಹೆಸರಿನಲ್ಲಿ “ಕಮಲಾ ಹ್ಯಾರಿಸ್‌ ಈಜುಡುಗೆ,’ “ಕಮಲಾ ಟೀಶರ್ಟ್‌’ಗಳನ್ನು ಮಾರುಕಟ್ಟೆಗೆ ತಂದಿದ್ದರು, ಕೊನೆಗೆ ಬೈಡೆನ್‌ ತಂಡದ ವಕೀಲರು, ಒಮ್ಮೆ ಸರಕು ಖಾಲಿಯಾದ ಮೇಲೆ ಮತ್ತೆ ಮಾರಬೇಡಿ ಎಂದು ಎಚ್ಚರಿಸಿದ್ದರಿಂದ ಅವುಗಳ ಮಾರಾಟ ನಿಂತಿದೆೆ. ಇನ್ನು ಮೀನಾ ಕಳೆದ ವರ್ಷ ಪ್ರಕಟಿಸಿದ್ದ “ಕಮಲಾ ಆ್ಯಂಡ್‌ ಮಾಯಾಸ್‌ ಬಿಗ್‌ ಐಡಿಯಾ’ ಎನ್ನುವ ಪುಸ್ತಕಕ್ಕೂ ಇದೆ ಸ್ಥಿತಿ ಎದುರಾಗಿದೆ. ಆ ಪುಸ್ತಕದಲ್ಲಿ ಕಮಲಾ ಮತ್ತು ಬೈಡೆನ್‌ ಕುರಿತ ಕಥೆಗಳೂ ಇವೆ. ಕೆಲವು ಸಮಯದ ಹಿಂದೆ ಬೈಡೆನ್‌ ಆಡಳಿತ “”ಅಧ್ಯಕ್ಷರ ಹೆಸರನ್ನು ವಾಣಿಜ್ಯಿಕ ಕಾರಣಗಳಿಗೆ ಬಳಸಿಕೊಳ್ಳಬಾರದು” ಎಂದಿದ್ದು, ಈಗ ಈ ನಿಯಮ ಉಪಾಧ್ಯಕ್ಷೆ ಕಮಲಾರಿಗೂ ಅನ್ವಯವಾಗುತ್ತಿದೆ. ಹೀಗಾಗಿ ಈ ಪುಸ್ತಕ ಮರುಮುದ್ರಣವಾಗುವ ಸಾಧ್ಯತೆ ಇಲ್ಲ. ಒಟ್ಟಲ್ಲಿ ಮಹತ್ವಾಕಾಂಕ್ಷಿ ಮೀನಾಕ್ಷಿಯನ್ನು ಕಮಲಾ ಬೆಳೆಯಲು ಬಿಡುತ್ತಾರೋ ಅಥವಾ ದೂರ ಇಡುತ್ತಾರೋ ಎನ್ನುವುದೇ ಈಗಿನ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next