Advertisement

CM Siddaramaiah ವಿರುದ್ಧ ಮುಗಿಬಿದ್ದ ಕಮಲ ಪಡೆ

11:14 PM Oct 30, 2023 | Shreeram Nayak |

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ತಿರುಗಿಬಿದ್ದಿದ್ದು, ಅಭಿಯಾನದ ಹೆಸರಿನಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದೀರಿ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ತಿರುಗೇಟು ಕೊಟ್ಟಿದ್ದಾರೆ.

Advertisement

ಕೇಂದ್ರ ಸಚಿವರು ಸಿಎಂ ವಿರುದ್ಧ ಟ್ವೀಟ್‌ ಮಾಡಿದ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸೇರಿ ರಾಜ್ಯ ಬಿಜೆಪಿ ನಾಯಕರು ಆಂಗ್ಲಭಾಷೆಯಲ್ಲಿ ಟ್ವೀಟ್‌ ಮಾಡುವ ಮೂಲಕ ಧ್ವನಿಗೂಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.

ಕನ್ನಡದಲ್ಲೇ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಶೆಖಾವತ್‌, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ. ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ನಿಮ್ಮ ತಂಡ ನೀಡಿದ ಅರೆಬರೆ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ ಎಂದು ಸ್ಪಷ್ಟನೆಗಳನ್ನು ನೀಡಿದ್ದಾರೆ.

ಸಿಎಂಗೆ ಕೇಂದ್ರ ಸಚಿವರು ಕೊಟ್ಟ ಉತ್ತರದಲ್ಲಿ ಏನಿದೆ?
*ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್‌ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ, ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ.
* ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂ ಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ?
* 2017ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ?
* ಅಟಲ್‌ ಭೂ ಜಲ ಯೋಜನೆ ಅಡಿಯಲ್ಲಿ, ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 28.10.2023ರ ವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ.

ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು ತೋರಬಹುದು.
-ಗಜೇಂದ್ರಸಿಂಗ್‌ ಶೆಖಾವತ್‌, ಕೇಂದ್ರ ಜಲಶಕ್ತಿ ಸಚಿವ

Advertisement

ಅಧಿಕಾರದಲ್ಲಿದ್ದಾಗ ಜವಾಬ್ದಾರಿ ಹಾಗೂ ಕರ್ತವ್ಯಗಳಿಂದ ನುಣುಚಿಕೊಳ್ಳುವುದು ಕಾಂಗ್ರೆಸ್‌ನ ಡಿಎನ್‌ಎ ಅಲ್ಲೇ ಇದೆ. ಕಾಂಗ್ರೆಸ್‌ ನೇತೃತ್ವದ ಯುಪಿಎಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಉದ್ಯಮ, ಆರೋಗ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ಹಸಿ ಸುಳ್ಳುಗಳ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯನವರೇ, ಬಿಟ್ಟಿ ಭಾಗ್ಯಗಳನ್ನೂ ಸರಿಯಾಗಿ ಕೊಡಲಾಗದ, ಅಭಿವೃದ್ಧಿ ಕಡೆ ಒಂದೇ ಒಂದು ಹೆಜ್ಜೆಯನ್ನೂ ಇಡಲಾಗದ ನಿಮ್ಮದು ನುಡಿದಂತೆ ನಡೆಯುವ ಸರ್ಕಾರ ಹೇಗಾಗುತ್ತದೆ? ನಮ್ಮ ಪ್ರಶ್ನೆಗೆ ಉತ್ತರಿಸಿ, ಲೆಕ್ಕ ಕೊಡಿ. ಮೋದಿ ಅವರು ಕೊಡುತ್ತಿರುವ 5 ಕೆ.ಜಿ. ಅಕ್ಕಿ ಹಾಗೂ ನೀವೇ ಘೋಷಿಸಿದ ಅನ್ನಭಾಗ್ಯದ 10 ಕೆ.ಜಿ ಸೇರಿಸಿ ಒಟ್ಟು 15 ಕೆ.ಜಿ. ನೀಡಬೇಕಾಗುತ್ತದಲ್ಲವೇ? 10 ಕೆ.ಜಿ. ಬದಲು 5 ಕೆ.ಜಿ. ಅಕ್ಕಿಯನ್ನಾದರೂ ನೀಡುತ್ತಿದ್ದೀರಾ? ಅಕ್ಕಿ ಬದಲು ಹಣ ಎಂದಿರಿ! ಈಗ ಹಣವೂ ಇಲ್ಲ, ಅಕ್ಕಿಯೂ ಇಲ್ಲ ಎಂಬಂತಾಗಿದೆ ಏಕೆ? ಕೇಂದ್ರ ಕೊಡುವ 5 ಕೆ.ಜಿಯಲ್ಲೂ 2 ಕೆ.ಜಿಗೆ ಕತ್ತರಿ ಹಾಕಿದ್ದೀರಲ್ಲ ಏಕೆ?
-ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ಓರ್ವ ಸುಳ್ಳುಗಾರ. ಭೇದವು ಸ್ಫಟಿಕದಷ್ಟು ಸ್ಪಷ್ಟವಾಗಿದೆ. 2004-2014 ರಲ್ಲಿ ಯುಪಿಎ ಸರ್ಕಾರವು ಕರ್ನಾಟಕಕ್ಕೆ 81,795 ಕೋಟಿ ರೂ. ತೆರಿಗೆ ಪಾಲು ನೀಡಿದ್ದರೆ, 2014 ರಿಂದ 2024ರ ಅ.23 ರವರೆಗೆ ಎನ್‌ಡಿಎ ಸರ್ಕಾರವು 2.74 ಲಕ್ಷ ಕೋಟಿ ರೂ. ಕೊಟ್ಟಿದೆ. ಯುಪಿಎ ಸರ್ಕಾರ 60,779 ಕೋಟಿ ರೂ. ನಿಧಿ ನೀಡಿದ್ದರೆ, ಎನ್‌ಡಿಎ ಸರ್ಕಾರವು 2.08 ಲಕ್ಷ ಕೋಟಿ ರೂ. ನೀಡಿದೆ. ಇದು ಮೂರ್‍ನಾಲ್ಕು ಪಟ್ಟು ಹೆಚ್ಚಲ್ಲವೇ?
-ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಡಿಸಿಎಂ

ಶೆಖಾವತ್‌ಗೆ ಸಿದ್ದು ತಿರುಗೇಟು
– ಮೇಕೆದಾಟು ಯೋಜನೆಯ ವಿಚಾರವನ್ನು ಕಾರ್ಯಸೂಚಿಯಲ್ಲಿ ಸೇರಿಸುವುದು ಪ್ರಧಾನಿಯ ಕರ್ತವ್ಯವೋ? ಅಂತಾರಾಜ್ಯ ಜಲವಿವಾದ ಕಾಯ್ದೆ ಪ್ರಕಾರ ಮಧ್ಯಸ್ಥಿಕೆ ವಹಿಸುವುದು ಪ್ರಧಾನಿಯ ಕರ್ತವ್ಯವೋ?
– ಕಳಸಾ-ಬಂಡೂರಿ ನಾಲಾ ಯೋಜನೆ ಸಂಬಂಧ ಪರಿಸರ ಅನುಮೋದನೆ ನೀಡಲು ಮನವಿ ಮಾಡಲಾಗಿದೆ. ಕಳಸಾ ಯೋಜನೆ ಸಂಬಂಧ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಕೊಡಬೇಕಿದೆ. ಭೀಮಗಡ ವನ್ಯಜೀವಿ ಧಾಮವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದು ಬಾಕಿ ಇದೆ.
– 29.90 ಟಿಎಂಸಿ ನೀರನ್ನು ಬಳಸಿಕೊಂಡು 2.25 ಲಕ್ಷ ಹೆಕ್ಟೇರ್‌ಗೆ ಸೂಕ್ಷ್ಮ ನೀರಾವರಿ ಒದಗಿಸುವ ಮಧ್ಯಕರ್ನಾಟಕ ಭಾಗದ ಪ್ರಮುಖ ಏತ ನೀರಾವರಿಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸುವ ಪ್ರಸ್ತಾವನೆಯೂ ಕೇಂದ್ರದ ಮುಂದೆ ಬಾಕಿ ಇದೆ. ಸಕ್ಷಮ ಪ್ರಾಧಿಕಾರದ ಮುಂದೆ ಎಲ್ಲ ಅನುಮೋದನೆ ದೊರೆತರೂ 2023-24 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದ 5300 ಕೋಟಿ ರೂ. ಇದುವರೆಗೆ ಬಿಡುಗಡೆಯಾಗಿಲ್ಲ.
– ಬರಪೀಡಿತ ಉತ್ತರ ಕರ್ನಾಟಕದ 5.94 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಲು ಅನುಕೂಲವಾಗಲು 173 ಟಿಎಂಸಿ ನೀರನ್ನು ಕೃಷ್ಣಾ ಜಲ ನ್ಯಾಯಾಧಿಕರಣ-2 ಹಂಚಿಕೆ ಮಾಡಿದೆ.ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಸಹಕಾರಿಯಾಗಲಿದೆ. ಆಲಮಟ್ಟಿ ಜಲಾಶಯವನ್ನು 519.60 ಮೀ.ನಿಂದ 524.256 ಮೀಟರ್‌ಗೆ ವಿಸ್ತರಿಸಬೇಕಿದೆ. ನ್ಯಾಯಾಧಿಕರಣದ ಆದೇಶ ಬಂದು 10 ವರ್ಷವಾದರೂ ಕೇಂದ್ರ ಅಧಿಸೂಚಿಸಿಲ್ಲ.

ಸರಕಾರಕ್ಕಾಗುವ ಮುಜುಗರದಿಂದ ರಕ್ಷಿಸಿಕೊಳ್ಳಲು ಸುಳ್ಳು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿರುವುದು ದುರದೃಷ್ಟಕರ. ಸುಳ್ಳು ಹೇಳಿಕೊಂಡು ಜನರಿಗೆ ನೀರು ನಿರಾಕರಿಸುವ ಮೂಲಕ ಬಿಜೆಪಿ ನಾಯಕರು ತಮ್ಮ ದಾಹ ನೀಗಿಸಿಕೊಳ್ಳುತ್ತಿರುವುದು ಖೇದಕರ.
 - ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next