Advertisement

ಯಾವುದೇ ಅಧಿಕಾರದ ಆಸೆ ಇಲ್ಲ, ರಾಜಕೀಯ ನಿವೃತ್ತಿ ಇಚ್ಛೆ ವ್ಯಕ್ತಪಡಿಸಿದ ಕಮಲ್ ನಾಥ್!

06:10 PM Dec 14, 2020 | Nagendra Trasi |

ಭೋಪಾಲ್: ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ಕುರಿತು ಸುಳಿವು ನೀಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್, ನಾನು ವಿಶ್ರಾಂತಿ ತೆಗೆದುಕೊಳ್ಳಲು ಸಿದ್ದನಾಗಿದ್ದೇನೆ. ನನಗೆ ಇನ್ನು ಯಾವುದೇ ಹುದ್ದೆ ಬೇಕೆಂಬ ಆಸೆ ಇಲ್ಲ. ಈಗಾಗಲೇ ನಾನು ಬೇಕಾದ ಹುದ್ದೆಗಳನ್ನು ಅಲಂಕರಿಸಿದ್ದು, ಇನ್ನು ಮುಂದೆ ಮನೆಯಲ್ಲಿರಲು ಸಿದ್ಧ ಎಂದು ತಿಳಿಸಿದ್ದಾರೆ.

Advertisement

ಮಧ್ಯಪ್ರದೇಶದ ಚಿನ್ ದ್ವಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕಮಲ್ ನಾಥ್ ಮಾತನಾಡಿದ ವೇಳೆ ಈ ಅಭಿಪ್ರಾಯವನ್ನು ಹೊರಹಾಕಿರುವುದಾಗಿ ವರದಿ ತಿಳಿಸಿದೆ.

ಕಮಲ್ ನಾಥ್, ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮಾತ್ರವಲ್ಲ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಕೂಡಾ ಆಗಿದ್ದಾರೆ. ಮಧ್ಯಪ್ರದೇಶದ ರಾಜರಾಜಕಾರಣದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲು ಹಾದಿಯನ್ನು ಸುಗಮಗೊಳಿಸಬೇಕು ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಕಮಲ್ ನಾಥ್ ಮೇಲೆ ಒತ್ತಡ ಹೇರುತ್ತಲೇ ಇದೆ.

ಇದನ್ನೂ ಓದಿ:ಕಾನ್ಪುರ್: ರಷ್ಯಾ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸೇನಾ ಅಧಿಕಾರಿ, ದೂರು ದಾಖಲು

ಇತ್ತೀಚೆಗೆ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿತ್ತು. ಭಾರತೀಯ ಜನತಾ ಪಕ್ಷ 19 ಸ್ಥಾನಗಳಲ್ಲಿ, ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Advertisement

ಮಧ್ಯಪ್ರದೇಶ ಉಪಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ಸೇರಿದಂತೆ ಎರಡು ಹುದ್ದೆಯನ್ನು ಅಲಂಕರಿಸಿರುವ ಕಮಲ್ ನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಎಐಸಿಸಿ (ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ) ಸದಸ್ಯ ಹರ್ಪಾಲ್ ಸಿಂಗ್ ಠಾಕೂರ್ ಒತ್ತಾಯಿಸಿದ್ದರು.

2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ಅದರ ಹೊಣೆ ಹೊತ್ತು ರಾಹುಲ್ ಗಾಂಧಿ ತಮ್ಮ ಹುದ್ದೆ ತೊರೆದಂತೆ ಕಮಲ್ ನಾಥ್ ಕೂಡಾ ಮಧ್ಯಪ್ರದೇಶದಲ್ಲಿ ಸೋಲಿನ ಹೊಣೆ ಹೊತ್ತು ಎರಡೂ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಉದಾಹರಣೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next