ಭೋಪಾಲ್: ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಅವರು ಹನುಮಂತ ಸಹಿತವಾಗಿರುವ ದೇಗುಲ ಆಕೃತಿಯ ಕೇಕ್ ಕತ್ತರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಅವರ ರಾಜಕೀಯ ಕ್ಷೇತ್ರದ ಶಕ್ತಿಕೇಂದ್ರವಾಗಿರುವ ಚಿಂದ್ವಾರಾದಿಂದ ಆಗಮಿಸಿದ್ದ ಬೆಂಬಲಿಗರು ಹಿರಿಯ ನಾಯಕನನ್ನು ಸನ್ಮಾನಿಸುವ ಸಂದರ್ಭದಲ್ಲಿ ಈ ಎಡವಟ್ಟು ಉಂಟಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೆಳವಣಿಗೆಯನ್ನು ನಿಂದಿಸಿದ್ದು, ಕಾಂಗ್ರೆಸ್‌ಗೆ ದೇವರ ಮೇಲೆ ಗೌರವ ಇಲ್ಲ. ಹನುಮಂತನನ್ನು ಕೇಕ್ ಆಕೃತಿಯಲ್ಲಿ ರಚಿಸಿ ಕತ್ತರಿಸುವುದು ಹಿಂದೂ ಧರ್ಮಕ್ಕೆ ಮತ್ತು ಸನಾತನ ಧರ್ಮಕ್ಕೆ ಮಾಡಿದ ಅಗೌರವ ಎಂದು ದೂರಿದ್ದಾರೆ.
ಆದರೆ, ಕಾಂಗ್ರೆಸ್‌ನ ಮುಖಂಡ ಅಜಯ ಯಾದವ್ ಈ ಆರೋಪ ತಿರಸ್ಕರಿಸಿದ್ದು, ಕಮಲ್‌ನಾಥ್ ಧಾರ್ಮಿಕ ಮನೋಭಾವನೆ ಇರುವ ಮುಖಂಡ. ಬೆಂಬಲಿಗರು ತರುವ ವಿವಿಧ ಆಕೃತಿಯ ಕೇಕ್, ಹೂವಿನ ಹಾರಗಳನ್ನು ಪ್ರತ್ಯೇಕಿಸುವುದು ಕಷ್ಟ. ಪಕ್ಷದ ಕಾರ್ಯಕರ್ತ ತಂದಿರುವ ವಿಶೇಷ ರೀತಿಯ ಕಲಾಶೈಲಿಯ ಕೇಕ್ ಅನ್ನು ನಿರಾಕರಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.