Advertisement

ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಕಮಲ್‌ ಹಾಸನ್‌

06:40 AM Jun 05, 2018 | Team Udayavani |

ಬೆಂಗಳೂರು: ತಮಿಳುನಾಡು ಖ್ಯಾತ ನಟ ಕಮಲಾ ಹಾಸನ್‌ ಸೋಮವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕುರುವೈ ಬೆಳೆಗೆ ಕಾವೇರಿ ನೀರು ಬಿಡುವಂತೆ ಮನವಿ ಮಾಡಿದರು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದ ಅವರು, ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಕುರುವೈ ಬೆಳೆಗೆ ನೀರಿನ ಅವಶ್ಯಕತೆಯಿದೆ. ಅಲ್ಲಿನ ರೈತರ ಹಿತದೃಷ್ಟಿಯಿಂದ ಮಾನವೀಯತೆ ನೆಲೆಗಟ್ಟಿನಲ್ಲಿ ನೀರು ಬಿಡುಗಡೆ ಸಾಧ್ಯವೇ ಪರಿಶೀಲಿಸಿ ಎಂದು ಕೋರಿದರು.

ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಕಾವೇರಿ ವಿಚಾರದಲ್ಲಿ ನಮ್ಮ ರಾಜ್ಯದ ರೈತರು ಹಾಗೂ ತಮಿಳುನಾಡಿನ ರೈತರು ಇಬ್ಬರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಚರ್ಚಿಸಿದ್ದೇವೆ. ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಹಾಗೂ ಎರಡೂ ರಾಜ್ಯಗಳ ನಡುವೆ ಸೌಹಾರ್ದ ಸಂಬಂಧ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ  ನೆರೆ ರಾಜ್ಯಗಳು ಉತ್ತಮ ಸಂಬಂಧ ಹೊಂದಬೇಕು ಎಂಬುದು ನಮ್ಮಿಬ್ಬರ ಆಶಯವೂ ಆಗಿದೆ ಎಂದು ಹೇಳಿದರು.

ಕಾವೇರಿ ಸಮಸ್ಯೆ ಇಂದು ಮೊನ್ನೆಯದಲ್ಲ. ಆದರೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ತಮಿಳುನಾಡು ಮುಕ್ತ ಮನಸ್ಸು ಹೊಂದಿದರೆ ಅದಕ್ಕೆ ನಾವೂ ಸಿದ್ಧ. ನಮಗೆ ನಮ್ಮ ರೈತರ ಹಿತಾಸಕ್ತಿಯೂ ಮುಖ್ಯವೇ ಎಂದು ತಿಳಿಸಿದರು.

ಕಮಲಾ ಹಾಸನ್‌ ಮಾತನಾಡಿ, ನಾನು ರೈತರ ಪರವಾಗಿ ಬಂದಿದ್ದೇನೆ. ದೇಶದ ಎಲ್ಲ ರೈತರೂ ಅನ್ನದಾತರೇ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಕಾವೇರಿ ವಿಚಾರದಲ್ಲಿ ನೀರು ಹಂಚಿಕೆ ಪ್ರಾಧಿಕಾರ ರಚನೆಯಾಗಿರಬಹುದು. ಆದರೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯಬೇಕು ಎಂಬುದು ನನ್ನ ಆಶಯ. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳ ರೈತರೂ ನಮಗೆ ಮುಖ್ಯವೇ ಎಂದು ತಿಳಿಸಿದರು.

Advertisement

ಕಾವೇರಿ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ನೀವು ಸಂಪರ್ಕ ಸೇತುವೆಯಾ ಎಂದಾಗ, ನಾನು ಸಂಪರ್ಕ ಸೇತುವೆಯಾದರೂ ಸರಿ, ಅಳಿಲಾದರೂ ಸರಿ ಕೊನೆಗೆ ಚಪ್ಪಲಿಯಾದರೂ ಸರಿ ಜನಸೇವಕ ಅಷ್ಟೆ ಎಂದರು.

ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹ ಕುರಿತು ಪ್ರಶ್ನಿಸಿದಾಗ, ನಾನು ಅಲ್ಲಿನ ಅಧಿಕಾರಿಗಳ ಜತೆಯೂ ಮಾತನಾಡುತ್ತೇನೆ. ವಾಸ್ತವ ಸ್ಥಿತಿ ತಿಳಿದುಕೊಳ್ಳುತ್ತೇನೆ.  ಈ ವಿಚಾರದಲ್ಲಿ ಖಂಡಿತ ರಾಜಕೀಯ ಮಾಡುವುದಿಲ್ಲ. ಆನಗತ್ಯವಾಗಿ ಎರಡೂ ರಾಜ್ಯದ ರೈತರು ಸಂಘರ್ಷಕ್ಕೆ ಇಳಿಯಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದು ಹೇಳಿದರು.

“ಕಾಲಾ’ ಬಗ್ಗೆ ಮಾತನಾಡಿಲ್ಲ
ರಜನೀಕಾಂತ್‌ ಅಭಿನಯದ “ಕಾಲಾ’ ಸಿನಿಮಾ ಬಿಡುಗಡೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜತೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ಒಂದೇ ಒಂದು ಮಾತು ನಾವು ಚರ್ಚಿಸಿಲ್ಲ. ಅದು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮಕ್ಕೆ ಬಿಟ್ಟ ವಿಚಾರ. ನಾವು ರೈತರ ಹಿತಾಸಕ್ತಿ ಕಾಪಾಡುವ ವಿಚಾರವಷ್ಟೇ ಮಾತನಾಡಿದ್ದೇವೆ ಎಂದು ಕಮಲಾ ಹಾಸನ್‌  ಹೇಳಿದರು.

ರಾಜಕೀಯವಾಗಿಯೂ ಒಂದಾಗ್ತಾರಾ?
ಕಮಲಾ ಹಾಸನ್‌ ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದರೂ ರಾಜಕೀಯ ವಿಚಾರಗಳೂ ಸಹ ಮಾತುಕತೆ ವೇಳೆ ಪ್ರಸ್ತಾಪವಾಗಿವೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ, ಜನಸೇನಾ ಪಕ್ಷದ ಆಂಧ್ರದ ಪವನ್‌ ಕಲ್ಯಾಣ್‌ ಹಾಗೂ ಮಕ್ಕಳ್‌ ನೀಧಿ ಮೈಯಂ ಪಕ್ಷ ಸ್ಥಾಪಿಸಿರುವ ಕಮಲಾಹಾಸನ್‌ ರಾಜಕೀಯವಾಗಿ ಒಂದಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.  ಕಮಲಾಹಾಸನ್‌ ಹಾಗೂ ಪವನ್‌ ಕಲ್ಯಾಣ್‌ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ ಜತೆಗೆ ಹೊಸದಾಗಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಜೆಡಿಎಸ್‌ ಅವರ  ಜತೆಗೂಡಿ ಮೂರೂ ಪಕ್ಷಗಳು ಹಾಗೂ ನಾಯಕರು ಒಟ್ಟಾದರೆ ದಕ್ಷಿಣ ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಬಹುದು ಎಂಬ ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next