Advertisement

ಕಾಮ್‌ಕಿ ಬಾತ್‌ ಕೇಳುವ ಅಗತ್ಯವಿಲ್ಲ; ಉದಯವಾಣಿ ವಿಶೇಷ ಸಂದರ್ಶನ

08:52 AM Oct 06, 2017 | Team Udayavani |

ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೇ ಜಯ ಎಂದ ಯೋಗಿ ಆದಿತ್ಯನಾಥ್‌ ಯೋಗಿ ಆದಿತ್ಯನಾಥ ನಮ್ಮ ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಮುಖ್ಯ ಮಂತ್ರಿ. ಕಾವಿ ತೊಟ್ಟು ಸ್ವಾಮೀಜಿಯಾಗಿದ್ದ ಯೋಗಿಯೊಬ್ಬರು ರಾಜಕೀಯವಾಗಿ ನಿರ್ಣಾಯಕ ಕಣವಾಗಿರುವ ಉತ್ತರಪ್ರದೇಶದಲ್ಲಿ ದಿಢೀರನೇ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಆಶ್ಚರ್ಯದ ಸಂಗತಿಯಾಗಿತ್ತು. ಇದೀಗ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳು ಕಳೆದಿದೆ. “ಫೈರ್‌ ಬ್ರಾಂಡ್ ಸ್ವಾಮೀಜಿ’ ಎಂದೇ ಜನಪ್ರಿ ಯತೆ ಗಳಿಸಿರುವ ಆದಿತ್ಯನಾಥ ಹಿಂದುತ್ವದ ಪ್ರಖರ ಪ್ರತಿಪಾದನೆಗಳಿಂದಾಗಿ ಸಾಕಷ್ಟು ಬಾರಿ ವಿವಾದಗಳಿಗೂ ಗುರಿಯಾಗಿ ದ್ದಾರೆ. ಮುಖ್ಯಮಂತ್ರಿ ಯಾದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಅವರು ಕರ್ನಾಟಕಕ್ಕೆ ಆಗಮಿಸಿದ್ದು, ಈ ವೇಳೆ “ಉದಯವಾಣಿ’ಗೆ ಮಂಗಳೂರಿನಲ್ಲಿ ವಿಶೇಷ ಸಂದರ್ಶನ ನೀಡಿದರು.

Advertisement

ಸಿಎಂ ಸಿದ್ದರಾಮಯ್ಯನವರ ಆಡಳಿತಾವಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿಲ್ಲ. ಇಲ್ಲಿ ಸರ್ಕಾರ ಒಂದು ಪಕ್ಷದ ಅಜೆಂಡಾದ ಮೇಲೆ ಹೋಗುತ್ತಿದೆಯೇ ಹೊರತು ಅದಕ್ಕೆ ಅಭಿವೃದ್ಧಿಯ ಪಥ ಕಾಣಿಸಿಲ್ಲ. ಜನರ ಪರ ಅಥವಾ ಸಮಾಜದ ಪರ ಕೆಲಸ ಮಾಡದೇ ಪಕ್ಷದ ಅಜೆಂಡಾಕ್ಕೊಸ್ಕರ ಕೆಲಸ ಮಾಡಿದರೆ ಅವರ ನಿರೀಕ್ಷೆಗಳೂ
ಉಲ್ಟಾ ಆಗಿರುತ್ತವೆ.

ನಿಮ್ಮ ಪ್ರಕಾರ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವೇ?
ಇಲ್ಲಿನ ಸರ್ಕಾರ ಪಕ್ಷದ ಅಜೆಂಡಾಗೆ ಸೀಮಿತವಾಗಿರುವುದರಿಂದ ಮತ್ತೆ ಅಧಿಕಾರಕ್ಕೆ ಬರಲ್ಲ. ಸ್ವಂತ ಲಾಭ ಮತ್ತು ಪಕ್ಷದ ಲಾಭಕ್ಕೋಸ್ಕರ ಕೆಲಸ ಮಾಡುತ್ತಿರುವುದಲ್ಲದೇ, ಯಾವ ಒಳ್ಳೆ ಕೆಲಸ ಮಾಡಿದೆ ಎಂದು ಈ ಸರ್ಕಾರವನ್ನು ಕರ್ನಾಟಕದ ಜನ ಮತ್ತೆ ಏಕೆ ಅಧಿಕಾರಕ್ಕೆ ತರಬೇಕು ಹೇಳಿ?

ಪ್ರಧಾನಿ ಮೋದಿ ಅವರ “ಮನ್‌ ಕಿ ಬಾತ್‌’ ಅನ್ನು “ಮಂಕಿ ಬಾತ್‌’ ಎಂದು ಟೀಕಿಸಿ, ಈಗ ಅದಕ್ಕೆ ಪರ್ಯಾಯವಾಗಿ ಕಾಮ್‌ ಕಿ ಬಾತ್‌ ಆರಂಭಿಸುತ್ತಿದ್ದಾರಲ್ಲ?
ಪ್ರಧಾನಿ ಮೋದಿ ಅವರು ತಮ್ಮ ಮನದ ಮಾತನ್ನು “ಮನ್‌ ಕಿ ಬಾತ್‌’ ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಿಯ ಮನದ ಮಾತಿಗೆ ಸ್ಪಂದಿಸಿ 30
ಕೋಟಿ ಮಂದಿ ಬ್ಯಾಂಕ್‌ ಖಾತೆ ಮಾಡಿಸಿಕೊಂಡಿದ್ದಾರೆ. ರೈತರಿಗೆ ಫಸಲು ವಿಮಾ ಯೋಜನೆ, ಮಹಿಳೆಯರು, ಸೈನಿಕರ ಕಲ್ಯಾಣ ಯೋಜನೆ, ಆರ್ಥಿಕವಾಗಿ ಸಶಕ್ತರಾಗಲು ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌ಗ್ಳಂಥ ಹಲವಾರು ಯೋಜನೆಗಳು “ಮನ್‌ ಕಿ ಬಾತ್‌’ನಿಂದ ಜಾರಿಯಾಗಿವೆ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ದೇಶದ ಮತ್ತು ಜನರ ಹಿತ ಕಡೆಗಣಿಸಿರುವುದರಿಂದ ಮನ್‌ ಕಿ ಬಾತ್‌ಗೆ ವಿರುದ್ಧವಾಗಿ ಮಂಕಿ ಬಾತ್‌ ಹೇಳಿಕೆಯನ್ನೇ ನೀಡಬೇಕಾಗುತ್ತದೆ! 

ನಿಮ್ಮ ಪ್ರಕಾರ ಮುಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ?
ನೂರಕ್ಕೆ ನೂರು ಖಚಿತ. ಬಿಜೆಪಿ ಕರ್ನಾಟಕದ ವಿಕಾಸಕ್ಕಾಗಿ ಕೆಲಸ ಮಾಡುವುದರಿಂದ ದೇಶದ ವಿಕಾಸವೂ ಆಗುತ್ತದೆ.

Advertisement

„ ಕೇರಳದಲ್ಲಿ ಈಗ ಜನರಕ್ಷಾ ಯಾತ್ರೆ ಮಾಡುವ ಅಗತ್ಯವೇನಿದೆ?
ಅಲ್ಲಿ ನಿರಂತರವಾಗಿ ಬಿಜೆಪಿ ಮತ್ತು ಹಿಂದೂ ಮುಖಂಡರ ಹತ್ಯೆಯಾಗುತ್ತಿದೆ. ಅಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ.
ಹಿಂದೂಗಳ ಹತ್ಯೆ ಬಗ್ಗೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಕಾರಣಕ್ಕೆ ನಾವು ಜನರಕ್ಷಾ ಯಾತ್ರೆ ಮಾಡಿದ್ದೇವೆ. ಅದರಲ್ಲಿ ಭಾಗವಹಿಸುವ ಅವಕಾಶ ನನಗೂ ಲಭಿಸಿದೆ. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸಾಧನೆ ಬಗ್ಗೆ?
ಕೇರಳದಲ್ಲಿ ಪಿಣರಾಯಿ ವಿಜಯನ್‌ ಅವರದ್ದು ಎಂಥ ಸಾಧನೆಯೂ ಇಲ್ಲ. ಆದರೂ, ನನ್ನ ಪ್ರಕಾರ ಅವರು ಎರಡು
ಮಹತ್ವದ ಸಾಧನೆ ಮಾಡಿದ್ದಾರೆ. ಮೊದಲನೆಯದು, ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಬಿಜೆಪಿ
ಹಾಗೂ ಹಿಂದೂ ಮುಖಂಡರ ಹತ್ಯೆ ಮಾಡಿಸಿರುವುದು; ಎರಡನೆಯದು, ಜಿಹಾದಿ ತತ್ವಗಳಿಗೆ ಪ್ರೋತ್ಸಾಹ ನೀಡಿ ದೇಶದ ಭದ್ರತೆಗೆ ಆತಂಕ ಉಂಟು ಮಾಡಿರುವುದು. ಇಂಥವರಿಂದ ನಾವು ನೋಡಿ ಕಲಿಯುವುದು ಏನೂ ಇಲ್ಲ. ಕೇರಳದ ಯುವಕರಿಗಾಗಿ ಅವರು ಏನೂ ಮಾಡಿಲ್ಲ. ಈ ಕಾರಣಕ್ಕೆ ಯುವಜನತೆ ಉದ್ಯೋಗಕ್ಕಾಗಿ ಬೇರೆಡೆ ವಲಸೆ
ಹೋಗಬೇಕಾಗಿದೆ.

ಲೋಕಸಭೆ ಸದಸ್ಯರಾಗಿದ್ದವರು ಈಗ ಮುಖ್ಯಮಂತ್ರಿಯಾಗಿದ್ದೀರಿ. ಏನು ಅನ್ನಿಸುತ್ತಿದೆ?
ಲೋಕಸಭಾ ಸದಸ್ಯನಾಗಿರಲಿ ಅಥವಾ ಮುಖ್ಯಮಂತ್ರಿಯಾಗಲಿ; ನಮ್ಮಂಥವರ ಉದ್ದೇಶ ಒಂದೇ. ಅದುವೇ ರಾಜ್ಯ, ದೇಶ ಮತ್ತು ಸಮಾಜ ಕಲ್ಯಾಣ. ನಮ್ಮೆಲ್ಲರ ಧರ್ಮವೂ ಒಂದೇ ಆಗಿದೆ; ಅದುವೇ ರಾಷ್ಟ್ರ ಧರ್ಮ. ಅದಕ್ಕಾಗಿ ನಮ್ಮನ್ನು ನಾವು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದೇವೆ.

ಮಂಗಳೂರಿನ ಯೋಗೇಶ್ವರ ಮಠದ ಜತೆಗೆ ನಿಕಟ ಸಂಬಂಧ ಹೊಂದಿದ್ದೀರಾ?
ಹೌದು. ಮಂಗಳೂರಿನ ಕದ್ರಿ ಮಠ ನಾಥ ಸಂಪ್ರದಾಯದ ಪ್ರತಿಷ್ಠಿತ ಮಠಗಳಲ್ಲಿ ಒಂದು. ಇದು ಸೇರಿದಂತೆ
ಕರ್ನಾಟಕದಲ್ಲಿ ನಾಥ ಸಂಪ್ರದಾಯದ ಒಟ್ಟು 51 ಮಠಗಳಿವೆ. ಈ ಮಠಗಳು ಲೋಕ ಕಲ್ಯಾಣಕ್ಕಾಗಿ ಸ್ಥಾಪನೆಯಾಗಿವೆ. ನಾನು ಇಲ್ಲಿಗೆ ಬಂದಾಗ ಈ ಮಠದಲ್ಲೇ ಉಳಿದುಕೊಂಡು ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಏನು ಹೇಳಬಯಸುವಿರಿ?
ರಾಮಮಂದಿರ ನಿರ್ಮಾಣ ವಿಚಾರ ಈಗ ನ್ಯಾಯಾಲಯದ ಮುಂದಿದ್ದು, ಡಿಸೆಂಬರ್‌ನಲ್ಲಿ ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ. ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯದಿಂದ ಒಳ್ಳೆಯ ತೀರ್ಪು 
ಹೊರಬೀಳುತ್ತದೆ ಎನ್ನುವ ವಿಶ್ವಾಸ ನನಗಿದೆ.

ನೀವು ಕೇರಳಕ್ಕೆ ಬರುವ ಮುನ್ನ “ಯುಪಿ ಮುಖ್ಯಮಂತ್ರಿಗಳು ನಮ್ಮ ಆಸ್ಪತ್ರೆಗಳು ಮಕ್ಕಳನ್ನು ಹೇಗೆ ಆರೈಕೆ ಮಾಡುತ್ತಿವೆ ಎಂಬುದನ್ನು ನೋಡಿ ಕೊಂಡು ಹೋಗಲಿ’ ಎಂದು ಲೇವಡಿ ಮಾಡಿದ್ದಾರಲ್ಲ?
ಕೇರಳ ರಾಜ್ಯಕ್ಕೂ ನಮಗೂ ಅಜಗಜಾಂತರ ಇದೆ. ಕೇರಳದ ಜನಸಂಖ್ಯೆ ಮೂರೂವರೆ ಕೋಟಿಯಿದ್ದರೆ, ನಮ್ಮದು 22 ಕೋಟಿ. ಜನಸಂಖ್ಯೆಗೆ ಹೋಲಿಸಿದರೆ ಉ.ಪ್ರ.ದಲ್ಲಿ ಶಿಶು ಮರಣ ಪ್ರಮಾಣ ಕೇರಳಕ್ಕಿಂತ ಕಡಿಮೆ. ಅಷ್ಟೇ ಅಲ್ಲ ಚಿಕೂನ್‌ಗುನ್ಯಾ, ಡೆಂಘೀ ಜ್ವರದಿಂದ ಮೃತಪಟ್ಟವರ ಸಂಖ್ಯೆಯೂ ನಮ್ಮಲ್ಲಿ ಕಡಿಮೆಯಿದೆ. ಹೀಗಿರುವಾಗ ಕೇರಳವನ್ನು ನೋಡಿ ನಾವು ಕಲಿಯುವುದಾರೂ ಏನನ್ನು? ನಮ್ಮ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಷ್ಟೇ ಆಗಿದೆ. ಹೀಗಾಗಿ ನಮ್ಮ ಸರಕಾರ ಎಲ್ಲಿದೆ; ಕೇರಳ ಸರಕಾರ ಎಲ್ಲಿದೆ ಎಂಬುದನ್ನು ಮೊದಲು ಅರಿತು ಬಳಿಕ ಅವರು ಮಾತನಾಡಲಿ.

*ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next