Advertisement

ಕಲ್ಯಾಣಪುರ -ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ: ಇಂದಿನಿಂದ ಬದಲಿ ಮಾರ್ಗ “ಪ್ರಯೋಗ’

12:50 AM Jan 30, 2023 | Team Udayavani |

ಉಡುಪಿ: ಸಂತೆಕಟ್ಟೆ ಪರಿಸರದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಿಸಲು ಮತ್ತು ಆಗುತ್ತಿರುವ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಓವರ್‌ ಪಾಸ್‌ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿದ್ದು, ಕಾಮಗಾರಿಗೆ ಪೂರಕವಾಗಿ ಸೋಮವಾರದಿಂದ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗುತ್ತದೆ.

Advertisement

ವ್ಯವಸ್ಥಿತವಾಗಿ ಬದಲಿ ಮಾರ್ಗ ರೂಪುಗೊಳಿಸದ ಹಿನ್ನೆಲೆಯಲ್ಲಿ ಒಮ್ಮೆ ಶುರುವಾಗಿದ್ದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಅಲ್ಲದೆ, ಗುದ್ದಲಿ ಪೂಜೆಯ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸ್ಥಳೀಯ ಶಾಸಕ ರಘುಪತಿ ಭಟ್‌ ಅವರು ಬದಲಿ ಮಾರ್ಗವನ್ನು ಪೂರ್ಣ ಪ್ರಮಾಣದಲ್ಲಿ ಸಮರ್ಪಕವಾಗಿ ರೂಪಿಸಿದ ಅನಂತರವೇ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಮತ್ತು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು. ಬದಲಿ ಮಾರ್ಗ ಸಮರ್ಪಕವಾಗಿ ರೂಪಿಸದೆ ಕಾಮಗಾರಿ ಆರಂಭಿಸಿದರೆ ಟ್ರಾಫಿಕ್‌ ಸಮಸ್ಯೆಯ ಜತೆಗೆ ಹಲವು ರೀತಿಯಲ್ಲಿ ಸಾರ್ವಜನಿಕರಿಗೆ ಅನನುಕೂಲವೂ ಆಗಲಿದೆ ಎಂಬ ಎಚ್ಚರಿಕೆ ನೀಡಿದ್ದರು.
ಅದರಂತೆ ಈ ಪ್ರಕ್ರಿಯೆ ಜಿಲ್ಲಾಡಳಿತ ಮತ್ತು ಪೊಲೀಸ್‌, ಹೆದ್ದಾರಿ ಪ್ರಾಧಿಕಾರದ ಸಮನ್ವಯದೊಂದಿಗೆ ಬದಲಿ ಮಾರ್ಗ ರೂಪಿಸಲಾಗಿದೆ.

ಬದಲಿ ಮಾರ್ಗ
ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್‌ ಸಹಿತವಾಗಿ ಬೃಹತ್‌ ವಾಹನಗಳನ್ನು ಕೆ.ಜಿ. ರೋಡ್‌, ಕೊಳಲಗಿರಿ, ಉಪ್ಪೂರು ಮಾರ್ಗವಾಗಿ ಶೀಂಬ್ರಾ ಸೇತುವೆಯಿಂದ ಪೆರಂಪಳ್ಳಿ – ಮಣಿಪಾಲದ ಕಾಯಿನ್‌ ವೃತ್ತಕ್ಕೆ ಬಂದು ಸಿಂಡಿಕೇಟ್‌ ವೃತ್ತದಿಂದ ಉಡುಪಿಗೆ ಬರಲಿದೆ. ಇದರಿಂದ ಸುಮಾರು 10 ಕಿ.ಮೀ ಸುತ್ತುವರಿದು ಬರಬೇಕಾಗುತ್ತದೆ. ಸೋಮವಾರದಿಂದ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಶುರುವಾಗಲಿದೆ.

ಸಂತೆಕಟ್ಟೆ ಪರಿಸರದ ಸ್ಥಳೀಯರಿಗೆ ಅನುಕೂಲವಾಗುವಂತೆ ಪೂರ್ಣ ಪ್ರಮಾಣದಲ್ಲಿ ಸರ್ವೀಸ್‌ ರಸ್ತೆ ಬಳಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ.

ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಸಮರ್ಪಕವಾದ ಅನಂತರದಲ್ಲಿ ಒಂದು ಭಾಗದ ಕಾಮಗಾರಿ ಶುರುವಾಲಿದೆ. ಆ ವೇಳೆಯಲ್ಲಿ ಉಡುಪಿಯಿಂದ ಕುಂದಾಪುರದ ಕಡೆಗೆ ಹೋಗುವ ಎಲ್ಲ ವಾಹನಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲೇ ಸಂಚರಿಸಲಿದೆ. ಸದ್ಯಕ್ಕೆ ಉಡುಪಿ-ಕುಂದಾಪುರ ಸಂಚರಿಸುವ ಯಾವ ವಾಹನಕ್ಕೂ ಬದಲಿ ಮಾರ್ಗ ಗೊತ್ತುಮಾಡಿಲ್ಲ.

Advertisement

ಕುಂದಾಪುರದಿಂದ ಉಡುಪಿಗೆ ಬರುವ ವಾಹನಗಳನ್ನು ಸೋಮವಾರದಿಂದ ಬದಲಿ ಮಾರ್ಗದಲ್ಲಿ ಸಂಚರಿಸಲು ಬೇಕಾದ ವ್ಯವಸ್ಥೆಯಾಗಿದೆ. ಪೊಲೀಸ್‌, ಜಿಲ್ಲಾಡಳಿತ, ಪ್ರಾಧಿಕಾರ ಎಲ್ಲರೂ ಈ ಕಾರ್ಯದಲ್ಲಿ ಜತೆಯಾಗಲಿದ್ದಾರೆ. ಸ್ಥಳೀಯರಿಗೆ ಸರ್ವಿಸ್‌ ರಸ್ತೆಯನ್ನು ವ್ಯವಸ್ಥಿತಗೊಳಿಸಲಾಗುವುದು.
– ಕೆ. ರಘುಪತಿ ಭಟ್‌ ಶಾಸಕರು, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next