ತನುಷ್ ಅಭಿನಯದ “ನಂಜುಂಡಿ ಕಲ್ಯಾಣ’ ಇಷ್ಟರಲ್ಲಾಗಲೇ ಮಾರ್ಚ್ 16ರಂದು ಬಿಡುಗಡೆಯಾಗಬೇಕಿತ್ತು. ಯೂಎಫ್ಓ-ಕ್ಯೂಬ್ ಸಮಸ್ಯೆಯಿಂದಾಗಿ ಚಿತ್ರದ ಬಿಡುಗಡೆ ನಿಧನಾವಾಗಿ, ಈಗ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಚಿತ್ರವು ಏಪ್ರಿಲ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ವಿಷಯವನ್ನು ಹೇಳುವುದಕ್ಕೆ ತನುಷ್ ಮತ್ತು ನಿರ್ದೇಶಕ ರಾಜೇಂದ್ರ ಕಾರಂತ್, ಮಾಧ್ಯಮದವರೆದುರು ಕುಳಿತಿದ್ದರು.
“ನಂಜುಂಡಿ ಕಲ್ಯಾಣ’ ಅದ್ಭುತ ಚಿತ್ರವಲ್ಲ, ಮಜವಾದ ಚಿತ್ರ ಎನ್ನುತ್ತಾರೆ ನಿರ್ದೇಶಕ ರಾಜೇಂದ್ರ ಕಾರಂತ್. “ಒಂದು ಹೊಸ ಎಳೆ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಒಳ್ಳೆಯ ಕಾಮಿಡಿಯೂ ಇದೆ, ಡಬ್ಬಲ್ ಮೀನಿಂಗ್ ಸಂಭಾಷಣೆಗಳೂ ಇಲ್ಲಿವೆ. ಮಡಿವಂತಿಕೆ ಇಟ್ಟುಕೊಳ್ಳದೆ, ಕಥೆಗೆ ಬೇಕಾಗಿದ್ದನ್ನು ಮಾಡಿದ್ದೇವೆ. ಇಲ್ಲಿ ಇಂಥವರನ್ನು ಮೆಚ್ಚಿಸಬೇಕು, ಇಂಥವರನ್ನು ರಂಜಿಸಬೇಕು ಅಂತಿಲ್ಲ. ಯಾವುದೇ ಸತ್ಯ ಹೇಳದೆ, ಸಂದೇಶ ಕೊಡದೆ, ಎರಡು ಗಂಟೆ ಮನರಂಜನೆ ಕೊಡುವ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ರಾಜೇಂದ್ರ ಕಾರಂತ್.
ನಾಯಕ ತನುಷ್‌ಗೆ ಮುಂದಿನ ತಿಂಗಳು ಮದುವೆಯ ಸಡಗರ ಎಂದರೆ ತಪ್ಪಿಲ್ಲ, ಏಕೆಂದರೆ, ಏಪ್ರಿಲ್ ಆರಕ್ಕೆ “ನಂಜುಂಡಿ ಕಲ್ಯಾಣ’ವಾದರೆ, ಏಪ್ರಿಲ್ 20ಕ್ಕೆ ಅವರ ಕಲ್ಯಾಣವಿದೆ. ಈ ಎರಡೂ ಮದುವೆಗಳ ಸಂಭ್ರಮದಲ್ಲಿರುವ ತನುಷ್, “ನಂಜುಂಡಿ ಕಲ್ಯಾಣ’ವು ಎರಡು ಗಂಟೆ ಮನರಂಜನೆ ಕೊಡುತ್ತದೆ ಎಂದು ಗ್ಯಾರಂಟಿ ಕೊಡುತ್ತಾರೆ. “ಇಲ್ಲಿ ತಮಾಷೆ, ಎಮೋಷನ್ ಎಲ್ಲವೂ ಇದೆ. ಮೊದಲ ಐದು ನಿಮಿಷ ಪಾತ್ರಗಳ ಪರಿಚಯವಾಗುತ್ತದೆ. ಅದಾದ ಮೇಲೆ ಪ್ರೇಕ್ಷಕರು ಪ್ರತಿ ದೃಶ್ಯದಲ್ಲೂ 10 ಬಾರಿ ನಗುತ್ತಾರೆ. ಒಂದು ಪಕ್ಷ ನಗದೇ ಇದ್ದವರಿಗೆ ಒಂದು ಲಕ್ಷ ಬಹುಮಾನ ಕೊಡುವುದಾಗಿ ಹೇಳಿದ್ದೇನೆ. ಈಗಾಗಲೇ ಕೆಲವರಿಗೆ ಚಿತ್ರ ತೋರಿಸಿದ್ದೇನೆ.
ಎಲ್ಲರೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಸಲಿಂಗಿ ಸಂಬಂಧ ಮತ್ತು ಡಬ್ಬಲ್ ಮೀನಿಂಗ್ ಸಂಭಾಷಣೆಯ ಕುರಿತು ಒಂದೆರೆಡು ಅಪಸ್ವರಗಳು ಕೇಳಿ ಬಂದಿದೆ. ಅದು ಬಿಟ್ಟರೆ, ಎಲ್ಲರೂ ಇಷ್ಟಪಟ್ಟಿದ್ದಾರೆ. ಅದೇ ಕಾರಣಕ್ಕೆ ಚಿತ್ರವನ್ನು ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ’ ನನಗಿದೆ ಎನ್ನುತ್ತಾರೆ ತನುಷ್.