Advertisement

ಕಲ್ಯಾಣ ಕರ್ನಾಟಕ: ಗುಳೆ ಹೋಗೋದೇ ಕಾಯಕ

10:52 PM Jan 18, 2020 | Lakshmi GovindaRaj |

ಬೆಂಗಳೂರು: “ಹೆಸರಿಗೆ ಮಾತ್ರ ನಮ್ಮದು ಕಲ್ಯಾಣ ಕರ್ನಾಟಕ. ಆದರೆ ಹಲವು ದಶಕಗಳು ಕಳೆದರು ಇನ್ನೂ ಇಲ್ಲಿಯ ಜನರ ಕಲ್ಯಾಣ ಆಗಿಲ್ಲ! ಜನರು ಉದ್ಯೋಗ ಅರಸಿ ಊರೂರು ಅಲೆಯುವುದು ನಿಂತಿಲ್ಲ’.

Advertisement

-ಇದು ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಅವರ ನೋವಿನ ಮಾತು. ಅವರ ಈ ಮಾತು ಇಡೀ ಕಲ್ಯಾಣ ಕರ್ನಾಟದ ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಫೆಬ್ರವರಿ 5 ರಿಂದ 7ರ ವರೆಗೆ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆಯಲಿದ್ದು ಈ ಕನ್ನಡ ಜಾತ್ರೆ “ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆ’ಗಳ ಬಗ್ಗೆ ಬೆಳಕು ಚೆಲ್ಲಲಿದೆ.

ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬೇಕಾದ ಗೋಷ್ಠಿಗಳನ್ನು ಅಣಿಗೊಳಿಸಿದೆ. ಇದರಲ್ಲಿ ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಮಣೆ ಹಾಕಿದೆ. ಕಲ್ಯಾಣ ಕರ್ನಾಟಕದ ಜನರು ಹಲವು ರೀತಿಯ ಸಂಕಷ್ಟಗಳಿಂದ ಇನ್ನೂ ಹೊರ ಬಂದಿಲ್ಲ. ಉದ್ಯೋಗ ಅರಸಿ ಬೆಂಗಳೂರು, ಗೋವಾ, ಪುಣೆ, ದಾಂಡೇಲಿ ಸೇರಿ ಹಲವು ಕಡೆಗಳಲ್ಲಿ ವಲಸೆ ಹೋಗುವುದು ಇನ್ನೂ ನಿಂತಿಲ್ಲ.

ಈ ವಿಷಯ ಸೇರಿ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಗೆ ಬರಲಿವೆ. ಪ್ರಧಾನ ವೇದಿಕೆಯಲ್ಲೆ ಈ ಬಗ್ಗೆ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬಿಕೋ ಅನ್ನುತ್ತವೆ ಹಳ್ಳಿಗಳು: ಕಲ್ಯಾಣ ಕರ್ನಾಟಕ ರಾಷ್ಟ್ರ ಕೂಟರು, ಬಹಮನಿ ಸುಲ್ತಾನರು, ಕಲ್ಯಾಣಿ ಚಾಲುಕ್ಯರು ಆಳಿದ ನಾಡು. ರಾಜ ಮಹಾರಾಜರು ತಮ್ಮ ಆಳ್ವಿಕೆ ಕಾಲದಲ್ಲಿ ಹಲವು ಕಲ್ಯಾಣಿಗಳನ್ನು ಇಲ್ಲಿ ನಿರ್ಮಿಸಿದ್ದರು. ಆದರೆ ಆ ಕಲ್ಯಾಣಿಗಳು ಇವತ್ತು ನಾಪತ್ತೆಗಳಾಗಿವೆ. ಹೀಗಾಗಿ ಶೇ.60 ಮಳೆಯನ್ನು ಆಶ್ರಯಿಸಿಯೇ ಬದುಕು ಕಟ್ಟಿಕೊಳ್ಳಬೇಕಾಗಿರುವ ಜನರು ಈಗ ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಉದ್ಯೋಗಕ್ಕಾಗಿ ದೂರದೂರುಗಳಿಗೆ ತೆರಳುವ ಪ್ರಸಂಗ ಎದುರಾಗಿದೆ.

Advertisement

ಈ ಎಲ್ಲಾ ಕಾರಣಗಳಿಂದ ಈ ಭಾಗದ ಹಲವು ಹಳ್ಳಿಗಳು ಆಗಾಗ್ಗೆ ಜನರಿಲ್ಲದೆ ಬಿಕೋ ಅನ್ನುತ್ತವೆ ಎಂದು ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಐತಿಹಾಸಿಕ ತಾಣಗಳಿವೆ. ಆದರೆ ಅವುಗಳ ಅಭಿವೃದ್ಧಿಯಾಗಿಲ್ಲ. ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿದರೆ ಆ ಭಾಗದ ಯುವಕರಿಗೆ ಉದ್ಯೋಗ ನೀಡಬಹುದು. ಖಾಸಗಿ ವಲಯದ ಸಿಮೆಂಟ್‌ ಕಾರ್ಖಾನೆಗಳೇನೋ ಇವೆ. ಆದರೆ ವಿದ್ಯಾವಂತರಿಗೆ ಕಲಿಕೆಗೆ ತಕ್ಕಂತೆ ಉದ್ಯೋಗ ನೀಡುವಲ್ಲಿ ವಿಫ‌ಲವಾಗಿವೆ ಎಂದು ದೂರಿದ್ದಾರೆ.

ಅಭಿವೃದ್ಧಿಯ ಮುನ್ನೋಟವಿಲ್ಲ: ಕಾಲಂ 371 (ಜೆ)ಆಧಾರವಾಗಿಟ್ಟು ಕೊಂಡರೂ ಕಲ್ಯಾಣ ಕರ್ನಾಟಕ ಭಾಗದ ಜನರ ಕಲ್ಯಾಣ ಇನ್ನೂ ಆಗಿಲ್ಲ. ಅಭಿವೃದ್ಧಿಯ ಮನ್ನೋಟವಿಲ್ಲ. ಇದೊಂದು ರಾಜಕೀಯ ಅಸ್ತ್ರವಾಗಿ ಉಳಿದು ಕೊಂಡಿದೆ ಎಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕಲ್ಯಾಣ ಕರ್ನಾಟಕ: ಅಂದು-ಇಂದು- ಮುಂದು’ ಎಂಬ ವಿಷಯದ ಬಗ್ಗೆ ಬೆಳಕು ಚೆಲ್ಲಲಿರುವ ಹಿರಿಯ ಪತ್ರ ಕರ್ತ ಡಾ.ಶ್ರೀನಿವಾಸ ಸಿರನೂರಕರ ಹೇಳಿದ್ದಾರೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ “ಹೈದ್ರಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಸ್ಥಾಪನೆ ಮಾಡಿದೆ. ಅದಕ್ಕೆ ಪ್ರತಿ ವರ್ಷ ಸಾವಿರ ಕೋಟಿ ರೂ. ನೀಡಲಾಗುತ್ತದೆ. ಆದರೆ ಈ ಅನುದಾನವನ್ನು ಹೇಗೆ ವಿನಿಯೋಗ ಮಾಡಿ ಕೊಳ್ಳಬೇಕು ಎಂಬುವುದರ ಬಗ್ಗೆ ಈ ಭಾಗದ ಜನಪ್ರತಿನಿಧಿ ಹಾಗೂ ಅಧಿಕಾರಿಗಳಲ್ಲಿ ಸ್ಪಷ್ಟವಾದ ಕಲ್ಪನೆ, ಚಿತ್ರಣವಿಲ್ಲ ಎಂದಿದ್ದಾರೆ.

ಈ ಭಾಗದಲ್ಲಿ ಹಲವು ವಿವಿಗಳಿವೆ. ಆದರೆ ಅವುಗಳಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಸರ್ಕಾರ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದಕ್ಕಿಂತಲೂ ಮಾನವ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು. ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿರಲು ಈ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿ ಕಾರಣ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ನಡೆಯ ಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ಗೋಷ್ಠಿ ನಡೆಯಲಿದೆ. ಇಲ್ಲಿ “ಕಲ್ಯಾಣ ಕರ್ನಾಟಕ: ಅಂದು-ಇಂದು- ಮುಂದು’ ಕುರಿತು ಚರ್ಚೆ ನಡೆಯಲಿದೆ.
-ಮನುಬಳಿಗಾರ್‌, ಕಸಾಪ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.