Advertisement

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

02:54 PM Aug 04, 2021 | Team Udayavani |

ಕಲಬುರಗಿ: ಬುಧವಾರ ನಡೆದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಂದಿನಂತೆ ಅನ್ಯಾಯ, ನಿರ್ಲಕ್ಷ್ಯ ಮುಂದುವರೆದಿದೆ.

Advertisement

ಬಿಜೆಪಿ ಸರ್ಕಾರ ಬಂದಾಗೊಮ್ಮೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನದ ಭಾಗ್ಯ ಇಲ್ಲ ಎಂಬುದು ಈ ಮೂಲಕ ಮತ್ತೆ ನಿರೂಪಿಸಿದಂತಾಗಿದೆ. ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ, ಯಾದಗಿರಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಂಡಿವೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಈ ಮುಂಚೆ ಬೀದರ್, ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲೆಗೆ ಮಾತ್ರ ಒಂದು ಸ್ಥಾನದ ಅವಕಾಶ ದೊರೆತ್ತಿದೆ. ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಮುಂಚೆ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಬೀದರ್ ಜಿಲ್ಲೆಯಿಂದ ಪ್ರಭು ಚವ್ಹಾ, ಹೊಸಪೇಟೆ ಯಿಂದ ಆನಂದಸಿಂಗ್ ಸಚಿವರಾಗಿದ್ದರು. ಈಗ ಇವರಿಬ್ಬರು ಮುಂದುವರೆದಿದ್ದು, ಈಗ ಕೊಪ್ಪಳ ಜಿಲ್ಲೆಯಿಂದ ಹಾಲಪ್ಪಚಾರ್ಯ ಮಾತ್ರ ಸೇರ್ಪಡೆ ಗೊಂಡಿದ್ದಾರೆ.

ಇದನ್ನೂ ಓದಿ :ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

ಕಲಬುರಗಿ ಜಿಲ್ಲೆಯಿಂದ ಎರಡು ಸಲ ಶಾಸಕರಾಗಿರುವ, ಕಲಬುರಗಿ ದಕ್ಷಿಣ ಮತಕ್ಷೇತ್ರದ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಯಾದಗಿರಿ ಜಿಲ್ಲೆಯಿಂದ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಸಚಿವರಾಗುವುದು ನಿಶ್ಚಿತ ಎನ್ನಲಾಗುತ್ತಿತ್ತು. ಸಚಿವಾಂಕ್ಷಿಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕೈ ತಪ್ಪಿರುವುದು ಆಶ್ಚರ್ಯ ಮೂಡಿಸಿದೆ.

Advertisement

ಕಳೆದ ಸಲವೂ ಸಂಪುಟ ರಚನೆ ಹಾಗೂ ವಿಸ್ತರಣೆ ಸಂದರ್ಭದಲ್ಲೂ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ರಾಜುಗೌಡರ ಹೆಸರು ಕೈ ತಪ್ಪಿ ಹೋಗಿ ಎಲ್ಲೇಡೆ ಆಕ್ರೋಶ ವ್ಯಕ್ತವಾಗಿತ್ತು. ಬಹು ಮುಖ್ಯವಾಗಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗೋದು ಗ್ಯಾರಂಟಿ ಎನ್ನಲಾಗೊತ್ತು.‌ಈಗ ಮತ್ತೆ ಠುಸ್ಸಾಗಿದೆ.

ಬೀದರ್ ಜಿಲ್ಲೆಯಿಂದ ಒಬ್ಬರೇ ಪಕ್ಷದ ಶಾಸಕರಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಪರಿಗಣಿಸದಿರುವುದು ನಿಜಕ್ಕೂ ಅನ್ಯಾಯ ಹಾಗೂ ಶೋಷಣೆಯ ಪರಮಾವಧಿ ಎಂಬುದಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕಳೆದ ಸಲ ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಕೆಕೆ ಆರ್ ಡಿಬಿ ಅಧ್ಯಕ್ಷ ಸ್ಥಾನ ಹಾಗೂ ರಾಜುಗೌಡ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಆದರೆ ಈ ಸಲ ಕಲಬುರಗಿ ಯಿಂದ ದತ್ತಾತ್ರೇಯ ಪಾಟೀಲ್, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಇಬ್ಬರಲ್ಲಿ ಒಬ್ಬರು ಸಚಿವರಾಗುವರು ಎನ್ನಲಾಗಿತ್ತು.‌ ಅದರಲ್ಲೂ ಯಾದಗಿರಿ ಜಿಲ್ಲೆಯಿಂದ ರಾಜುಗೌಡ ಅವರಂತು ಸಚಿವರಾಗುವುದು ಗ್ಯಾರಂಟಿ ಎಂದೇ ಊಹಿಸಲಾಗಿತ್ತು.

ಈ ಹಿಂದೆ 2008ರಲ್ಲಿ ಬಿ.ಎಸ್.‌ಯಡಿಯೂರಪ್ಪ ಸಂಪುಟದಲ್ಲೂ ಕಲಬುರಗಿ ಯಿಂದ ಯಾರೂ ಸಚಿವರಾಗಿರಲಿಲ್ಲ. ಕೊನೆ ಅವಧಿಯಲ್ಲಿ ರೇವು ನಾಯಕ ಬೆಳಮಗಿ ಸಚಿರಾಗಿದ್ದರೂ ಉಸ್ತುವಾರಿ ಸಚಿವರಾಗಿರಲಿಲ್ಲ. ಈಗ ಎರಡು ವರ್ಷಗಳ ಅವಧಿಯಲ್ಲೂ ಸಚಿವ ಭಾಗ್ಯ ದೊರಕಿರಲಿಲ್ಲ. ಈಗ ಅದೇ ಪದ್ದತಿ ಮುಂದುವರೆಸಲಾಗಿದೆ.

ಬಿಜೆಪಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಳ್ಳು ಕಾಳಷ್ಟು ಇಲ್ಲ. ದಾಸ್ಯದ ಸಂಕೇತವೆಂದು ಹೈದರಾಬಾದ್ ಕರ್ನಾಟಕ ಎಂಬುದನ್ನು ಕಲ್ಯಾಣ ಕರ್ನಾಟಕದ ಎಂಬುದಾಗಿ ಮಾಡಲಾಗಿದೆ ಎನ್ನುತ್ತಿದ್ದ ಬಿಜೆಪಿಯವರು ಇದಕ್ಕೇನು? ಹೇಳುತ್ತಾರೆ ಎಂದು ಕಾಂಗ್ರೆಸ್ ನವರು ಬಲವಾಗಿ‌ ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ವರಿಷ್ಠರು ಒತ್ತಡ ಇರುವ ಹಿನ್ನೆಲೆಯಲ್ಲಿ ತಮಗೆ ಅವಕಾಶ ದೊರಕಿಸಲಿಕ್ಕಾಗಿಲ್ಲ ಏನಿಸುತ್ತಿದೆ.‌ ತಮಗೆ ಈ ರೀತಿ ಅನ್ಯಾಯಕ್ಕೊಳಗಾಗುವುದು ಹೊಸದೇನಲ್ಲ ಎಂದು ಸಚಿವ ಸ್ಥಾನದಿಂದ ವಂಚಿತರಾಗಿರುವ ರಾಜುಗೌಡ ಹಾಗೂ ದತ್ತಾತ್ರೇಯ ಪಾಟೀಲ್ ರೇವೂರ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next