ರಾಣಿಬೆನ್ನೂರ: ತಾಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ಪ್ರತೀವರ್ಷ ದಸರಾ ಹಬ್ಬದ ಪ್ರಯುಕ್ತ ನಡೆಯುವ ಶ್ರೀ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪ ಉರ್ಮಿ ಅವರು 21 ಅಡಿ ಬಿಲ್ಲನ್ನೇರಿ ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್ ಎಂಬ ದೈವ ವಾಣಿಯನ್ನು ಸೋಮವಾರ ಸಂಜೆ ನುಡಿದರು.
30 ಸಾವಿರಕ್ಕೂ ಹೆಚ್ಚಿನ ಭಕ್ತರು ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕ ಭವಿಷ್ಯ ಕೇಳಲು ದೇವರಗುಡ್ಡ ಕ್ಷೇತ್ರಕ್ಕೆ ಆಗಮಿಸಿದ್ದರು. ಗೊರವಯ್ಯ ನಾಗಪ್ಪಜ್ಜ ಆಯುಧ ಪೂಜೆ ದಿನ ಈ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ.
ಡೆಂಕಣಮರಡಿಯಲ್ಲಿ ಕಾರ್ಣಿಕ ವಾಣಿ ಆಲಿಸಲು ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ನೆರೆದಿದ್ದರು. ಬಿಲ್ಲನ್ನೇರಿದ ಮಾಲತೇಶ ಸ್ವಾಮಿ ಗೊರವಯ್ಯನವರು “ಮುಕ್ಕೋಟಿ ಚೆಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್’ ಎಂದು ಭವಿಷ್ಯ ನುಡಿದರು. ಉತ್ತರ ಕರ್ನಾಟಕದ ಬಹುತೇಕ ಭಕ್ತರು ಈ ಭವಿಷ್ಯ ನಂಬುತ್ತಾರೆ.
ಗೊರವಯ್ಯ ನಾಗಪ್ಪಜ್ಜ ಅವರು ನುಡಿದ ಭವಿಷ್ಯವಾಣಿಯ ವಿಶ್ಲೇಷಣೆ ಮಾಡಿದ ಪ್ರಧಾನ ಅರ್ಚಕ ಅರ್ಚಕ ಸಂತೋಷ ಭಟ್ಟ ಗುರೂಜಿ, ಈ ವರ್ಷ ರಾಜ್ಯಕ್ಕೆ ಮಳೆಯ ಅವಕೃಪೆ ಕಾಡಲಿದೆ. ಮುಕ್ಕೋಟಿ ಚೆಲ್ಲಿತಲೆ ಕಲ್ಯಾಣ ಕಟ್ಟಿತಲೆ ಅಂದರೆ, ಮುಕ್ಕೋಟಿ ರೈತರು ನೀರಿಗಾಗಿ ಹಣ ಚೆಲ್ಲಿದ್ದಾರೆ. ಮಳೆ, ಬೆಳೆಯಲ್ಲಿದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಭೀಕರ ಬರಗಾಲ ಎದುರಾಗಬಹುದು ಎಂದು ತಿಳಿಸಿದ್ದಾರೆ.
ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ಗುರೂಜಿ, ಮುಕ್ಕೋಟಿ ಮತದಾರರ ಮತದ ಆಶೀರ್ವಾದದಿಂದ ರಾಜ್ಯದಲ್ಲಿ ಒಮ್ಮತದ ಸರಕಾರ ರಚನೆಯಾಗಿದೆ. ಆದರೆ, ಒಂದು ಹೆಣ್ಣಿನ ಹಸ್ತಕ್ಷೇಪದಿಂದ ಸರಕಾರ ಏರುಪೇರಾಗುವ ಸಂಭವವಿದೆ. ರಾಜ್ಯದಲ್ಲಿ ಸರಕಾರ ಅದಲು ಬದಲಾಗಬಹುದು. ಕಲ್ಯಾಣಿ ಅಂದರೆ ಕಮಲ ಎಂದರ್ಥ. ಹಾಗಾಗಿ, ಕೇಂದ್ರದಲ್ಲಿ ಮತ್ತೆ ಕಮಲ ಅರಳಬಹುದು ಎಂತಲೂ ಹೇಳಬಹುದು ಎಂದು ಸಂತೋಷ ಭಟ್ಟ ಗೂರೂಜಿ ಕಾರ್ಣಿಕ ಭವಿಷ್ಯವನ್ನು ವಿಶ್ಲೇಷಣೆ ಮಾಡಿದ್ದಾರೆ.