ಕಲ್ಯಾಣ್: ಸ್ಥಳೀಯ ಕಲ್ಯಾಣ್ ಕರ್ನಾಟಕ ಸಂಘದ ವತಿಯಿಂದ ಕಲ್ಯಾಣ್‌ನ ಮಾತೋಶ್ರೀ ಸಭಾ ಗೃಹದಲ್ಲಿ ಕಾವ್ಯಭಾವ ಸಂಗಮ ಎಂಬ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರಗಿತು.
ಕಾರ್ಯಕ್ರಮದ ಉತ್ತಾರಾರ್ಧ ದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಗಿರಿಜಾ ಶಾಸ್ತ್ರಿ ಅವರು, ಕವಿತೆ ಎನ್ನುವುದು ಬೆಳಕು, ಬದುಕು, ಪ್ರೀತಿ ಹಾಗೂ ಸತ್ಯ. ನಾನು ಎಲ್ಲ ಎಂಬುದನ್ನು ಮರೆತು ನಾನು ಏನೂ ಇಲ್ಲ ಎಂದು ಅರಿತುಕೊಂಡಾಗಲೇ ಕವನ ಸೃಷ್ಟಿಯಾಗುವುದು ಎಂದು ಹೇಳುತ್ತ ಕವಿತೆ ರಚನೆಯಲ್ಲಿ ಕವಿಯ ಜವಾಬ್ದಾರಿಯನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಾಶಿ ಕರ್ನಾಟಕ ಸಂಘದ ಅಧ್ಯಕ್ಷ ಡಿ. ಎಚ್. ಕಟ್ಟಿ ಅವರು ಕಲ್ಯಾಣ್ ಕರ್ನಾಟಕ ಸಂಘದ ನಾಡು ನುಡಿಯ ಸೇವೆಯನ್ನು ಶ್ಲಾಘಿಸಿ ಕಾವ್ಯ ವಾಚನ ಮಾಡಿದರು.
ಗೌರವ ಅತಿಥಿಯಾಗಿ ಆಗಮಿಸಿದ ಕವಯಿತ್ರಿ ಡಾ| ದಾಕ್ಷಾಯಣಿ ಯಡಹಳ್ಳಿ, ಅನಿತಾ ಪೂಜಾರಿ ತಾಕೊಡೆ, ಡಾ| ಕರುಣಾಕರ ಶೆಟ್ಟಿ, ಇಂದಿರಾ ಕುಲಕರ್ಣಿ, ಅಂಜಲಿ ತೋರವಿ, ಹೇಮಾ ಅಮೀನ್, ರಮಣ ಶೆಟ್ಟಿ ರೆಂಜಾಳ, ಕೆ. ಎನ್. ಸತೀಶ್, ಸಾ.ದಯಾ, ಎಚ್. ಆರ್. ಚಲವಾದಿ, ನಂದಾ ಶೆಟ್ಟಿ, ಸರೋಜಾ ಅಮಾತಿ ಮುಂತಾದವರು ತಮ್ಮ ಕಾವ್ಯ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಪೂರ್ವಾರ್ಧ ದಲ್ಲಿ ನಡೆದ ಭಾವಗೀತೆ ಕಾರ್ಯ ಕ್ರಮದಲ್ಲಿ ಇಂದಿರಾ ಕುಲಕರ್ಣಿ, ಉಮಾ ನಾಯಕ್, ಗುರುರಾಜ ಕಾಂಜಿಕರೆ, ವಸಂತ ಚಂದ್ರಶೇಖರ ಕಾಂಜಿಕರ, ವಸಂತ್ ಚಂದ್ರಶೇಖರ್, ವಿಭಾ ದೇಶು¾ಖ್, ಕೆ. ಎನ್. ಸತೀಶ್, ವಿಶ್ವನಾಥ ಶೆಟ್ಟಿ, ಭಾಸ್ಕರ್ ಭಟ್, ಸುಜಾತಾ ಶೆಟ್ಟಿ, ನಂದಿತಾ ಕೌಶಿಕ್, ಗೀತಾ ಪೂಜಾರಿ, ಹೇಮಾ ಶೆಟ್ಟಿ ಮುಂತಾದವರು ಭಾವಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಇದೇ ಸಂದರ್ಭದಲ್ಲಿ ಕಾವ್ಯಭಾವ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿ ಹಾಗೂ ಕಲಾವಿದರನ್ನು ಗಣ್ಯರು ಗೌರವಿಸಿದರು.
ಸಂಘದ ಅಧ್ಯಕ್ಷೆ ದರ್ಶನಾ ಸೋನ್ಕರ್‌ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ನಾಡು-ನುಡಿಯ ಸೇವೆಗಾಗಿ ಕಲ್ಯಾಣ್ ಕರ್ನಾಟಕ ಸಂಘದ ಯೋಜನೆ ಹಾಗೂ ಯೋಚನೆಗಳನ್ನು ವಿವರಿಸಿದರು. ಗುರುರಾಜ ಕಾಂಜಿಕರ, ರಮಣ ಶೆಟ್ಟಿ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಕೆ. ಚಂದ್ರಶೇಖರ ವಂದಿಸಿದರು. ನೂರಾರು ಸಂಖ್ಯೆ ಯಲ್ಲಿ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ, ವರದಿ: ಗುರುರಾಜ ಪೋತನೀಸ್