Advertisement
ಬೆಳ್ಮಣ್: ಕಡಂದಲೆ ಕಲ್ಲೋಳಿಯ ನಲ್ಲೆಗುತ್ತು ಬಳಿ ನೂತನವಾಗಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿದ್ದರಿಂದ ನೀರು ತುಂಬಿದ್ದು ಈಗ ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ.
ನೂತನ ಕಿಂಡಿ ಅಣೆಕಟ್ಟುವಿಗೆ ರಸ್ತೆ ಸಂಪರ್ಕ ನಡೆಯದ ಕಾರಣ ಜನ ಈ ಹಿಂದಿನ ಓಡಾಟಕ್ಕಿದ್ದ ಹಳೆಯ ಸೇತುವೆಯನ್ನೇ ಬಳಸುತ್ತಿದ್ದಾರೆ.ಇಲ್ಲಿ ಸುಮಾರು 500 ಮೀಟರ್‌ನಷ್ಟು ರಸ್ತೆ ಕಾಮಗಾರಿ ಬಾಕಿ ಇದೆ. ಏತನ್ಮಧ್ಯೆ ನೀರು ತುಂಬಿದ್ದರೂ ಅದರ ಮೇಲೆಯೇ ಜನ ಸಂಚಾರ ನಡೆಯುತ್ತಿದೆ. ನೂತನ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣವಾದರೂ ಸಂಪರ್ಕ ರಸ್ತೆಯನ್ನು ಗುತ್ತಿಗೆದಾರರು ನಿರ್ಮಿಸದ್ದರಿಂದ ಜನರು ಕಷ್ಟಪಡುತ್ತಿದ್ದಾರೆ.
Related Articles
ಹೊಸ ಸೇತುವೆಯ ಅಣೆಕಟ್ಟುವಿಗೆ ಹಲಗೆ ಹಾಕಿದ ಬಳಿಯ ಹಳೆಯ ಅಣೆಕಟ್ಟಿನ ಸೇತುವೆ ಹಲವು ಬಾರಿ ಮುಳುಗಡೆಯಾಗಿದ್ದು ಪಕ್ಕದ ಕೃಷಿ ಭೂಮಿಗೂ ನೀರು ಆವರಿಸಿತ್ತು. ಸ್ಥಳೀಯರು ಅಪಾಯವನ್ನರಿತು ಒಂದು ಕಿಂಡಿಯನ್ನು ತೆರವು ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ಇದಲ್ಲದೆ ಬೋಳ ಪಾಲಿಂಗೇರಿಯಲ್ಲಿರುವ ಅಣೆಕಟ್ಟಿನ ಹಲಗೆಯನ್ನುತೆರವು ಮಾಡಿದ್ದರಿಂದ ಇಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಜತೆಗೆ ನಲ್ಲೆಗುತ್ತು ಹಳೆಯ ಅಣೆಕಟ್ಟಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆಯುದ್ದಕ್ಕೂ ನೀರು ಆವರಿಸಿದೆ. ಇದರಿಂದ ಬೋಳ, ಕಡಂದಲೆ ಹಾಗೂ ಸಚ್ಚೇರಿಪೇಟೆ ಭಾಗದ ಜನ ಸಂಚಾರ ದುಸ್ತರವಾಗಿದೆ.
Advertisement
ರಸ್ತೆಯಲ್ಲೇ ಬಾಕಿಇತ್ತೀಚೆಗೆ ಶಾಲೆ ಬಿಟ್ಟು ಮನೆಗೆ ತೆರಳಬೇಕಾದ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಉಳಿಯಬೇಕಾಯಿತು. ನೀರು ಅಣೆಕಟ್ಟೆ ಮೇಲ್ಭಾಗದಲ್ಲಿ ಹರಿಯುತ್ತಿತ್ತು. ಒಂದಷ್ಟು ವಾಹನಗಳು ನೀರಿನ ನಡುವೆ ಸಾಹಸ ಮಾಡಿಕೊಂಡು ರಸ್ತೆಯನ್ನು ದಾಟಿದರೆ ಶಾಲಾ ಮಕ್ಕಳನ್ನು ಹೊತ್ತು ತಂಡ ವಾಹನಗಳು ರಸ್ತೆಯಲ್ಲೇ ಉಳಿಯುವಂತಾಯಿತು. ಬಳಿಕ ವಿದ್ಯಾರ್ಥಿಗಳನ್ನು ಸ್ಥಳೀಯರು ನೀರಿನ ನಡುವೆ ದಡ ಸಾಗಿಸುವ ಪ್ರಯತ್ನವನ್ನು ಮಾಡಿದರು. ಕೆಲವು ವಾಹನ ಸವಾರರು ನೀರಿನ ಮಟ್ಟ ಕಡಿಮೆಯಾಗುವವರೆಗೂ ಕಾದು ಬಳಿಕ ಮನೆ ಸೇರಿದರು. ನಲ್ಲೆಗುತ್ತು ಹಳೆ ಅಣೆಕಟ್ಟಿನ ಮೂಲಕ ಸುಗಮವಾಗಿ ದಾಟಬಹುದಾಗಿದ್ದರೂ, ನೀರು ತುಂಬಿರುವುದರಿಂದ ಮುಳುಗಿದೆ. ನಿತ್ಯ ಶಾಲಾ ಮಕ್ಕಳು ಇದೇ ದಾರಿಯಲ್ಲಿ ಸಂಚರಿಸಬೇಕಾಗಿರುವುದರಿಂದ ಯಾರಾದರೂ ಹಿರಿಯರು ಇದ್ದುಕೊಂಡೇ ಅಣೆಕಟ್ಟು ದಾಟಬೇಕಾಗಿದೆ. ರಸ್ತೆ ಸಂಪರ್ಕ ಕಲ್ಪಿಸಲು ಆಗ್ರಹ
ಹಳೆಯ ಅಣೆಕಟ್ಟಿನ ಪಕ್ಕದಲ್ಲೇ ನೂತನ ಸೇತುವೆಯನ್ನು ನಿರ್ಮಿಸಿದ್ದರೂ ಅದಕ್ಕೆ ಸಂಪರ್ಕವನ್ನು ಇನ್ನೂ ಕಲ್ಪಿಸಿಲ್ಲ ಹೀಗಾಗಿ ಅಪಾಯಕಾರಿಯಾಗಿರುವ ಹಳೆಯ ಸೇತುವೆಯಲ್ಲೇ ನದಿ ನೀರಿನ ಮಧ್ಯೆ ವಿದ್ಯಾರ್ಥಿಗಳು ವಾಹನ ಸವಾರರು ಅತ್ತಿತ್ತ ನಿತ್ಯ ಸಾಗಬೇಕಾದ ಅನಿವಾರ್ಯ ಎದುರಾಗಿದೆ. ಹೊಸ ಸೇತುವೆಯ ರಸ್ತೆ ಸಂಪರ್ಕಕ್ಕೆ ಮಣ್ಣು ತಂದು ರಾಶಿ ಹಾಕಿದರೂ ಸಂಪರ್ಕ ಕಲ್ಪಿಸಿಲ್ಲ. ಕೂಡಲೇ ಹೊಸ ಸೇತುವೆಗೆ ರಸ್ತೆಯ ಸಂಪರ್ಕವನ್ನು ಕಲ್ಪಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಶೀಘ್ರ ಕಾಮಗಾರಿ
ಗುತ್ತಿಗೆದಾರರ ವಿಳಂಬ ನೀತಿಯಿಂದ ಈ ತೊಂದರೆ ಉಂಟಾಗಿದೆ. ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಈ ವಿಳಂಬ ನಡೆದಿದೆ. ಆದರೂ ಎಚ್ಚರಿಕೆ ನೀಡಲಾಗಿದ್ದು ಸೇತುವೆ ಸಂಪರ್ಕ ಕೆಲಸ ನಡೆಯುತ್ತಿದೆ. ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಅಣೆಕಟ್ಟುವಿಗೆ ಬೇಗ ಹಲಗೆ ಹಾಕಿದ್ದರಿಂದ ನೀರಿನ ಹೆಚ್ಚಳ ಉಂಟಾಗಿ ಈ ತೊಂದರೆ ಆಗಿದೆ. ಕೆಲವೇ ದಿನಗಳಲ್ಲಿ ನೂತನ ಸೇತುವೆ ಸಂಪರ್ಕ ಕಾರ್ಯ ಪೂರ್ಣಗೊಳ್ಳಲಿದೆ..
-ಅರುಣ್, ಸಹಾಯಕ ಇಂಜಿನಿಯರ್ ,
ಸಣ್ಣ ನೀರಾವರಿ ಇಲಾಖೆ, ಉಡುಪಿ. ಕ್ರಮ ಕೈಗೊಳ್ಳಲಾಗುವುದು
ಸಂಚಾರ ಅಪಾಯಕಾರಿಯಾಗಿರುವುದರ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು. ಅಕಾಲಿಕ ಮಳೆಯಿಂದಾಗಿ ನೀರಿನ ಮಟ್ಟ ಏರಿದೆ. ಇನ್ನು ಕಡಿಮೆಯಾಗಬಹುದು. ಕೃಷಿಕರ ಪ್ರಯೋಜನಕ್ಕಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ.
-ಶುಭಾ ಪಿ. ಶೆಟ್ಟಿ,
ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಪಾಯಕಾರಿ
ಅಣೆಕಟ್ಟು ನಿರ್ವಹಣೆಯಿಂದಾಗಿ ನದಿಯಲ್ಲಿ ನೀರು ತುಂಬಿದ್ದು ಸೇತುವೆಗೆ ಯಾವುದೇ ತಡೆಬೇಲಿ ಇಲ್ಲದೆ ದಾಟಬೇಕಾಗಿದೆ. ಶಾಲೆಯ ಮಕ್ಕಳು ತುಂಬಿದ ನೀರಿನ ಮಧ್ಯೆ ಅಣೆಕಟ್ಟಿನಲ್ಲಿ ಸಾಗಬೇಕಾಗಿದೆ. ನೂತನ ಅಣೆಕಟ್ಟುವಿಗೆ ಕೂಡಲೇ ಸಂಪರ್ಕ ರಸ್ತೆ ಕಲ್ಪಿಸಿ.
-ನಾಗರಾಜ, ಸುರೇಶ್ ಶೆಟ್ಟಿ
ಸ್ಥಳೀಯರು -ಶರತ್ ಶೆಟ್ಟಿ ಮುಂಡ್ಕೂರು