Advertisement

ಕಲ್ಮಂಜ ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ; ಆರೋಪಿಗಳ ಸಹಿತ 8.42 ಲಕ್ಷ ರೂ. ಸೊತ್ತು ವಶ

11:23 PM May 27, 2024 | Team Udayavani |

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ 2020ರಲ್ಲಿ ಅಡಿಕೆ ವ್ಯಾಪಾರಿಯ ಮನೆಗೆ ನುಗ್ಗಿ ಮನೆಮಂದಿಯನ್ನು ಕೂಡಿ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವು ಪ್ರಕರಣಕ್ಕೆ ಸಬಂಧಿಸಿದಂತೆ, ನಾಲ್ಕು ವರ್ಷದ ಬಳಿಕ ಮೂವರು ಆರೋಪಿಗಳ ಸಹಿತ ಕಳವಾಗಿರುವ ಪೈಕಿ 8.42 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸಿ.ಬಿ. ತಿಳಿಸಿದ್ದಾರೆ.

Advertisement

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಮೇ 27ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣದಲ್ಲಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ರಿಯಾಜ್‌ (40) ಹಾಗೂ ಸಹೋದರ ನವಾಝ್ (38), ಬೆಂಗಳೂರು ನಿವಾಸಿ ಕೃಷ್ಣ (37)ನನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದರು.

ಘಟನೆ ವಿವರ
ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಡಿಕೆ ವ್ಯಾಪಾರಿಯಾಗಿದ್ದ ಅಚ್ಯುತ್‌ ಭಟ್‌ (56) ಅವರ ಮನೆಯಿಂದ 2020 ಜೂನ್‌ 26ರಂದು ತಾಯಿ ಕಾಶಿಯಮ್ಮ ಹಾಗೂ ತಮ್ಮನ ಪತ್ನಿ ಹಾಗೂ ಮೂವರು 3 ಮಕ್ಕಳೊಂದಿಗೆ ಮನೆಯಲ್ಲಿದ್ದರು. ಮಧ್ಯರಾತ್ರಿ ನಾಯಿ ಬೊಗಳುವ ಸದ್ದು ಕೇಳಿ ಮುಂಬದಿ ಬಾಗಿಲು ಹಾಗೂ ಹಿಂಬದಿ ಬಾಗಿಲು ತೆರೆದಾಗ ದರೋಡೆಕೋರರು ಒಳನುಗ್ಗಿ ಅಚ್ಯುತ್‌ ಭಟ್‌ ಸಹಿತ ಮನೆಮಂದಿಯನ್ನು ಕೈಕಾಲು ಕಟ್ಟಿ ಕೂಡಿ ಹಾಕಿ ಮನೆಯಲ್ಲಿದ್ದ 30ರಿಂದ 35 ಪವನ್‌ ಚಿನ್ನದ ಒಡವೆ ಹಾಗೂ ಸುಮಾರು 1 ಕೆ.ಜಿ. ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿದಂತೆ ಸುಮಾರು 12,40,000 ರೂ. ಕಳವು ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ತನಿಖೆ ಕೈಗೆತ್ತಿಕೊಂಡಿದ್ದ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಿ ಅಂತಿಮ ವರದಿ ಸಲ್ಲಿಸಿದ್ದರು. ಆದರೆ 2024 ಮೇ 22ರಂದು ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕ ಅನಿಲ್‌ ಕುಮಾರ್‌ ಪ್ರಕರಣವೊಂದರಲ್ಲಿ ಸಂಶಯಾಸ್ಪದ ವ್ಯಕ್ತಿಯು ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ರಿಯಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಲ್ಮಂಜ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ಮೂವರನ್ನು ಬಂಧಿಸಲಾಗಿದೆ.

ಬಂಧಿತರಿಂದ 7,87,000 ರೂ. ಅಂದಾಜು ಮೌಲ್ಯದ ಒಟ್ಟು 104 ಗ್ರಾಂ ಬಂಗಾರದ ಆಭರಣ, ಸುಮಾರು 30,240 ರೂ. ಮೌಲ್ಯದ 288 ಗ್ರಾಂ ಬೆಳ್ಳಿ, ಸುಮಾರು 25,000 ರೂ. ಮೌಲ್ಯದ ಬೈಕ್‌ ಸೇರಿ ಒಟ್ಟು ಮೌಲ್ಯ 8,42,240 ರೂ. ಸೊತ್ತನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.

Advertisement

ಪೊಲೀಸ್‌ ಅಧೀಕ್ಷಕ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಪೋಲಿಸ್‌ ಅಧೀಕ್ಷಕ ಎಂ. ಜಗದೀಶ್‌ ಮತ್ತು ರಾಜೇಂದ್ರ ಡಿ.ಎಸ್‌., ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕ ವಿಜಯ ಪ್ರಸಾದ್‌ ಎಸ್‌. ನಿರ್ದೇಶನದಂತೆ ವೃತ್ತ ನಿರೀಕ್ಷಕ ವಸಂತ್‌ ಆರ್‌.ಆಚಾರ್‌, ಪೊಲೀಸ್‌ ನಿರೀಕ್ಷಕ ನಾಗರಾಜ್‌ ಎಚ್‌.ಇ., ಸುಬ್ಟಾಪುರ ಮಠ, ಧರ್ಮಸ್ಥಳ ಪೋಲಿಸ್‌ ಠಾಣಾ ಪೊಲೀಸ್‌ ಉಪ-ನಿರೀಕ್ಷಕರಾದ ಅನೀಲ್‌ ಕುಮಾರ ಡಿ., ಸಮರ್ಥರ ಗಾಣಿಗೇರ ಹಾಗೂ ಸಿಂಬಂದಿ ರಾಜೇಶ ಎನ್‌., ಪ್ರಶಾಂತ್‌ ಎಂ., ಸತೀಶ್‌ ನಾಯ್ಕ, ಪ್ರಮೋದಿನಿ, ಶೇಖರ್‌ ಗೌಡ, ಕೃಷ್ಣಪ್ಪ, ಆನಿಲ್‌ ಕುಮಾರ್‌, ಜಗದೀಶ್‌, ಮಲ್ಲಿಕಾರ್ಜುನ್‌, ವಿನಯ್‌ ಪ್ರಸನ್ನ, ಗೋವಿಂದರಾಜ್‌, ಭಿಮೇಶ್‌, ನಾಗರಾಜ್‌ ಬುಡ್ರಿ ಹಾಗೂ ಹುಲಿರಾಜ್‌ ಪತ್ತೆ ಕಾರ್ಯಕ್ಕೆ ಸಹಕರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಶೀಘ್ರವೇ ಬಹುಮಾನವನ್ನು ಘೋಷಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next