Advertisement

ನೆರೆ ಬಳಿಕ ಗುಡ್ಡ ಕುಸಿತದ ಭೀತಿಯಲ್ಲಿ ಕಲ್ಮಕಾರು ಜನತೆ

03:35 AM Aug 22, 2018 | Team Udayavani |

ಮಂಗಳೂರು: ಬಾಯ್ದೆರೆದು ನಿಂತ ಬೃಹತ್‌ ಗುಡ್ಡ. ತುಂಡಾಗಿರುವ ಸೇತುವೆಗಳು, ಹರಿಯುವ ಹಳ್ಳಕೊಳ್ಳ ದಾಟುವುದಕ್ಕೆ ಪರದಾಟ. ಇದು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿರುವ ಸುಳ್ಯ ತಾ. ಕಲ್ಮಕಾರಿನ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಅರಣ್ಯ ರೋದನ! ಪ್ರವಾಹದಿಂದ ತತ್ತರಿಸಿರುವ ಗ್ರಾಮದ ಅವಲೋಕನಕ್ಕೆ ಪತ್ರಕರ್ತರು ತೆರಳಿದಾಗ ಕಂಡ ಚಿತ್ರಣವಿದು. ಗಾಳಿಬೀಡು ಕಡಕಮಲೆ ಎಸ್ಟೇಟ್‌ ವ್ಯಾಪ್ತಿಯಲ್ಲಿರುವ ಬೆಟ್ಟ ಕುಸಿತಗೊಂಡು ಟನ್‌ಗಟ್ಟಲೆ ಮರಗಳು ಕಲ್ಮಕಾರಿನಲ್ಲಿರುವ ತೋಡುಗಳಲ್ಲಿ ನೀರಿನೊಂದಿಗೆ ನುಗ್ಗಿವೆ. ಇದರಿಂದ ಸೇತುವೆಗಳು ಕೊಚ್ಚಿ ಹೋಗಿವೆ.

Advertisement

ರಾತ್ರಿ ಮನೆ ತೊರೆಯುತ್ತೇವೆ
ಕಲ್ಮಕಾರಿಗೆ ಹೊಂದಿಕೊಂಡಿರುವ ಬೆಟ್ಟ ಬಾಯ್ದೆರೆದು ನಿಂತಿದೆ. ಯಾವಾಗ ಕುಸಿತಕ್ಕೊಳಗಾಗುವುದೋ ಹೇಳಲಾಗದು. ಭೀತಿಯಿಂದ 14 ಮಲೆಕುಡಿಯ ಕುಟುಂಬಗಳು ಊರನ್ನೇ ಬಿಟ್ಟು ಹೋಗಿವೆ. ಮೆಂಟೆಕಜೆ, ಕೊಪ್ಪಡ್ಕ, ಅಂಜನಕಜೆ, ಕಾಜಿಮಡ್ಕ, ಗುಳಿಕಾನ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮನೆಯವರು ರಾತ್ರಿ ಹೊತ್ತಲ್ಲಿ ತಮ್ಮ ಮನೆಗಳನ್ನೇ ತೊರೆಯುತ್ತಾರೆ. ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡು ಬೆಳಗ್ಗೆ ಮನೆಗಳಿಗೆ ವಾಪಸಾಗುತ್ತಾರೆ.


ತುಂಡಾದ ಆರು ಸೇತುವೆಗಳು

ತೋಡು ನೀರಿನೊಂದಿಗೆ ಟನ್‌ಗಟ್ಟಲೆ ಮರ ನುಗ್ಗಿದ ಪರಿಣಾಮ ಕಾಜಿಮಡ್ಕ, ಯಾಳದಾಳು, ಪಡ್ಪು, ಕಲ್ಮಕಾರು, ಬಾಳೆಬೈಲು, ಕಡಕಮಲ್‌ ಎಸ್ಟೇಟ್‌ ಸಂಪರ್ಕ ಕಲ್ಪಿಸುವ ಸೇತುವೆಗಳು ತುಂಡಾಗಿವೆ. ಇಲ್ಲಿ ಅಡಿಕೆ ಮರ ಜೋಡಿಸಿ ಕಾಲು ಸಂಕ ನಿರ್ಮಿಸಿದ್ದಾರೆ.  ಸಹಾಯಕ ಆಯಕ್ತರು ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಆದರೆ ಮಳೆಗಾಲ ಮುಗಿವಲ್ಲಿವರೆಗೆ ಭೀತಿ ಇದ್ದಿದ್ದೇ ಎನ್ನುತ್ತಾರೆ ಸ್ಥಳೀಯರು.

ಕಲ್ಲುಕೋರೆಗಳಿಂದ ಸಮಸ್ಯೆ?
ಕೊಪ್ಪಡ್ಕ ಆಸುಪಾಸಿನ ಕೆಲವು ಮನೆಗಳಿಗೆ ಗುಡ್ಡ ಕುಸಿತದಿಂದ ಹಾನಿಯಾಗಿರುವುದಕ್ಕೆ ಮನೆಯ ಮೇಲ್ಭಾಗದ ಗುಡ್ಡದಲ್ಲಿ ಕಲ್ಲುಕೋರೆ ಮಾಡಿರುವುದೇ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಅಲ್ಲಿನ ಗುಂಡಿಗಳನ್ನು ಹಾಗೇ ಬಿಡಲಾಗಿದ್ದು ಅವುಗಳಲ್ಲಿ ನೀರು ತುಂಬಿ ರಭಸದಿಂದ ತಗ್ಗು ಪ್ರದೇಶಗಳಿಗೆ ನುಗ್ಗುತ್ತವೆ. ಇದರಿಂದ ಮಣ್ಣು ಮೆದುಗೊಂಡು ಕೆಳಭಾಗದಲ್ಲಿರುವ ಮನೆಯ ಮೇಲೆ ಕುಸಿತ ಉಂಟಾಗುತ್ತದೆ ಎಂಬ ಅನುಮಾನ ಸ್ಥಳೀಯ ನಿವಾಸಿಗಳದ್ದಾಗಿದೆ.

27 ಕಿ.ಮೀ. ದೂರಕ್ಕೆ 80 ಕಿ.ಮೀ. ಕ್ರಮಿಸಬೇಕು!
ಕಲ್ಮಕಾರು ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿಭಾಗವಾಗಿದೆ. ಇಲ್ಲಿಂದ ಮಡಿಕೇರಿಗೆ ಕೇವಲ ಸುಮಾರು ಇಪ್ಪತ್ತೇಳು ಕಿ.ಮೀ. ದೂರ. ಆದರೆ ಅವರು ಮಡಿಕೇರಿಗೆ ಸುಳ್ಯ – ಸಂಪಾಜೆಯಾಗಿಯೇ 80 ಕಿ.ಮೀ. ಕ್ರಮಿಸಿ ಹೋಗಬೇಕು. ಕಲ್ಮಕಾರು ಮೂಲಕ ಮಡಿಕೇರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹಿಸುತ್ತಲೇ ಇದ್ದರೂ ಅರಣ್ಯ ಇಲಾಖೆ ಅಪಸ್ವರದಿಂದ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next