Advertisement
“ಸರಿ. ಯಾವುದಾದ್ರೂ ಮಾಲ್‌ಗೆ ಹೋಗಿ ಬರೋಣ. ರಿಲ್ಯಾಕ್ಸ್ ಆದಂತೆಯೂ ಆಗುತ್ತೆ, ಶಾಪಿಂಗ್ ಮಾಡಿದಂತೆಯೂ ಆಗುತ್ತೆ. ಆದ್ರೆ ಒಂದ್ಮಾತು ಹೇಳ್ತೀನಿ ರೀ, ಅಮ್ಮ ಮನೆಯಲ್ಲೇ ಇರಲಿ. ಹೇಳಿ ಕೇಳಿ ಇದು ಕೊರೊನಾ ಟೈಮು. ಹಿರಿಯರಿಗೆ ಕಾಯಿಲೆ ತಡಕೊಳ್ಳೋ ಶಕ್ತಿ ಇರಲ್ಲ. ಜತೆಗೆ ಮಾಲ್‌ನಲ್ಲಿ ನಾಲ್ಕೈದು ಮಹಡಿ ಹತ್ತಬೇಕು. ಪ್ರತೀ ಸಲ
Related Articles
Advertisement
“ಸರಿ ಕಣಪ್ಪ. ಹಾಗೇ ಆಗಲಿ. ಅಲ್ಲಿಗೆ ಬಂದು ನಾನು ಮಾಡುವುದಾದ್ರು ಏನಿದೆ? ಕಾಲು ನೋವಿನ ಕಾರಣಕ್ಕೆ ಮೆಟ್ಟಿಲು ಹತ್ತಲು ಖಂಡಿತ ಆಗಲ್ಲ. ನಾನು ಮನೇಲಿ ಇರ್ತೇನೆ. ನೀವು ಹೋಗಿ ಬನ್ನಿ’ -ಆ ತಾಯಿ ಹೀಗೆಂದಳು. ತತ್‌ಕ್ಷಣವೇ ಮಗಳನ್ನು ಕರೆದ ಹರೀಶ – “ಪುಟ್ಟೂ, ಮಾಲ್‌ಗೆ ಹೋಗಿ ಬರೋಣ, ಬೇಗ ರೆಡಿಯಾಗು. ಅಜ್ಜಿ ಬರಲ್ಲ. ಅವರಿಗೆ ಮಂಡಿ ನೋವು ವಿಪರೀತ. ಮಾಲ್‌ನಲ್ಲಿ ನಾಲ್ಕು ಮಹಡಿ ಹತ್ತಿ ಇಳಿಯಬೇಕು. ಎಸ್ಕಲೇಟರ್ ಬಳಸಲು ಅಜ್ಜಿಗೆ ಗೊತ್ತಿಲ್ಲ. ರಿಸ್ಕ್ ತಗೊಂಡು ಹತ್ತಲು ಹೋಗಿ ಅಕಸ್ಮಾತ್ ಬಿದ್ದರೆ? ಆ ಏರಿಯಾದಲ್ಲಿ ದೇವಸ್ಥಾನವೋ, ಪಾರ್ಕೋ ಇದ್ದಿದ್ದರೆ ಅಜ್ಜಿಯನ್ನು ಕರ್ಕೊಂಡು ಹೋಗಬಹುದಿತ್ತು. ಮಾಲ್‌ನಲ್ಲಿ ಅಜ್ಜಿಗಾದರೂ ಏನು ಕೆಲ್ಸ ಇರುತ್ತೆ ಹೇಳು. ಅಲ್ಲಿ ನೋಡುವಂಥಾದ್ದು ಏನಿರ್ತದೆ? ಅಜ್ಜಿ ಮನೇಲಿರಲಿ, ನಾವು ಹೋಗಿ ಬಂದ್ಬಿಡೋಣ’ ಎಂದ.
“ಅಜ್ಜಿ ಬರದಿದ್ರೆ ನಾನೂ ಬರಲ್ಲ. ನಾನು ಅಜ್ಜಿ ಜತೆಗೇ ಇರ್ತೇನೆ, ನೀವಿಬ್ರೂ ಹೋಗಿ ಬನ್ನಿ’ -ಕಾವ್ಯ ಬಿರುಸಾಗಿಯೇ ಹೇಳಿದಳು. ತತ್‌ಕ್ಷಣ ಅಲ್ಲಿಗೆ ಬಂದ ವಾಣಿ – “ಬಸ್ ಸ್ಟಾಪ್‌ನಿಂದ ಮಾಲ್ ತನಕ ನಡೆಯಬೇಕು. ಮಾಲ್‌ನಲ್ಲಿ ನಾಲ್ಕು ಮಹಡಿ ಹತ್ತಬೇಕು. ಅಜ್ಜಿಗೆ ಮೆಟ್ಟಿಲು ಹತ್ತಲು ಆಗುತ್ತಾ? ಪ್ರತೀ ಸಲ ಲಿಫ್ಟ್ ಹುಡುಕಿಕೊಂಡು ಹೋಗೊಕ್ಕಾಗುತ್ತ? ಬಟ್ಟೆ ಬೇಕು ಅಂತಿದ್ಯಲ್ಲ, ತಗೊಂಡು ಬರೋಣ, ಅಪ್ಪ ಹೇಳಿದಂತೆ ಕೇಳು, ಬೇಗ ರೆಡಿಯಾಗು’ ಅಂದಳು.
“ಅಮ್ಮಾ, ಅಜ್ಜಿಯ ಚಿಂತೆ ನಿಮಗೆ ಬೇಡ. ಅವರನ್ನು ನಾನು ಹ್ಯಾಂಡಲ್ ಮಾಡ್ತೇನೆ. ಅವರಿಂದ ಏನೂ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಜ್ಜಿಯನ್ನು ಕರ್ಕೊಂಡೇ ಹೋಗೋಣ’ ಎಂದು ಕಾವ್ಯ ಪಟ್ಟುಹಿಡಿದಳು. ಅದೇನ್ ಮಾಡ್ತೀಯೋ ಮಾಡು, ನಮ್ಮ ಮಾತು ಯಾವತ್ ಕೇಳಿದೀಯ? ಎಂದು ಈ ದಂಪತಿ ಬೇಸರದಿಂದಲೇ ಒಪ್ಪಿಗೆ ಸೂಚಿಸಿದರು. ಐದೇ ನಿಮಿಷದಲ್ಲಿ ಅಜ್ಜಿ- ಮೊಮ್ಮಗಳು ರೆಡಿಯಾದರು. ವಾಣಿ ರೆಡಿಯಾಗುವವರೆಗೂ ಕುಂಟೆ ಬಿಲ್ಲೆ ಥರದ ಆಟವಾಡುತ್ತಾ ಅಜ್ಜಿ-ಮೊಮ್ಮಗಳು ಸಮಯ ಕಳೆದರು.
“ಅಜ್ಜಿ, ನನ್ನ ಕೈಹಿಡ್ಕೊ, ನಾನು ಕರ್ಕೊಂಡು ಹೋಗ್ತೀನೆ. ಏನೂ ಆಗಲ್ಲ.’ ಎಸ್ಕಲೇಟರ್ ಹತ್ತುವ ಮುನ್ನ ಕಾವ್ಯ ಹೀಗೆಂದರೂ ಅಜ್ಜಿಗೆ ಧೈರ್ಯ ಬರಲಿಲ್ಲ. ಆಕೆ ಮೆತ್ತಗಿನ ದನಿಯಲ್ಲಿ “ಹೆದ್ರಿಕೆ ಯಾಗುತ್ತದೆ ಕಣಪ್ಪಾ’ ಅಂದರು. “ನಾವು ಸಾವಿರ ಸಲ ಹೇಳಿದ್ವಿ, ಕೇಳಲಿಲ್ಲ ನೀನು. ಈಗ ಅನುಭವಿಸು’ ಎಂದು ಹರೀಶ- ವಾಣಿ ಶಾಪಿಂಗ್‌ಗೆ ಹೋಗಿಬಿಟ್ಟರು. ತತ್‌ಕ್ಷಣ ಈ ಹುಡುಗಿ ಅಜ್ಜಿಯನ್ನು ಲಿಫ್ಟ್ ಮೂಲಕ ಮೊದಲ ಮಹಡಿಗೆ ಕರೆದೊಯ್ದಳು. ಅಲ್ಲಿಂದ ಎರಡನೇ ಮಹಡಿಗೆ ಹೋಗುವ ಕೆಲಸ. ಈ ಬಾರಿ ಕಾವ್ಯ ಖಚಿತ ದನಿಯಲ್ಲಿ ಹೇಳಿದಳು: ಅಜ್ಜಿ, ಮನೇಲಿ ಹೇಳಿ ಕೊಟ್ಟೆನಲ್ಲ, ಆ ಥರ ಮಾಡು. ಎಸ್ಕಲೇಟರ್ ಮೇಲೆ ಮೊದಲು ಬಲಗಾಲನ್ನಿಡು, ಹತ್ತು ಸೆಕೆಂಡಿನ ಅನಂತರ ಎಡಗಾಲನ್ನಿಡು. ನಾನು ಅಲ್ಲೇ ಇತೇìನೆ. ಮುಗ್ಗರಿಸದಂತೆ, ಬ್ಯಾಲೆನ್ಸ್ ತಪ್ಪದಂತೆ ನೋಡಿ ಕೊಳ್ಳುತ್ತೇನೆ ಎಂದಳು. ಅಷ್ಟಕ್ಕೇ ಸುಮ್ಮನಾಗದೆ, ಎಸ್ಕಲೇಟರ್‌ಗೆ ಹೋಗುವುದು ಹೇಗೆ ಎಂದು ಮೂರ್ನಾಲ್ಕು ಬಾರಿ ತೋರಿಸಿಕೊಟ್ಟಳು.
ಏನಾಗ್ತದೋ ನೋಡಿಯೇ ಬಿಡೋಣ ಎಂದು ನಿರ್ಧರಿಸಿದ ಅಜ್ಜಿ ಮೊಮ್ಮಗಳ ಮಾತನ್ನು ಪಾಲಿಸಿದರು. ಆಶ್ಚರ್ಯ, ಎಸ್ಕಲೇಟರ್ ಹತ್ತುವಾಗ ಆಕೆ ಎಡವಲಿಲ್ಲ. ಆಯತಪ್ಪಿದಂತಾದಾಗ ತತ್‌ಕ್ಷಣ ಮೊಮ್ಮಗಳ ಕೈಹಿಡಿದು ಎರಡನೇ ಮಹಡಿಗೆ ಹೋಗಿಯೇ ಬಿಟ್ಟರು. ಇದನ್ನು ನಂಬುವುದೋ ಬೇಡವೋ ಎಂಬ ಬೆರಗಿನಲ್ಲಿ ಹರೀಶ- ವಾಣಿ ಇದ್ದಾಗಲೇ, ಅಜ್ಜಿ- ಮೊಮ್ಮಗಳ ಜೋಡಿ ಎಸ್ಕಲೇಟರ್ ಮೂಲಕವೇ ನಾಲ್ಕನೇ ಮಹಡಿ ತಲುಪಿಕೊಂಡಿತ್ತು. ಶಾಪಿಂಗ್ ಮುಗಿದಾಗ, ಸಿನೆಮಾಕ್ಕೆ ಹೋಗೋಣ ಎಂದ ಹರೀಶ. ಅವರು ಸಿನೆಮಾ ಹಾಲ್ ಪ್ರವೇಶಿ ಸುತ್ತಿದ್ದಂತೆ, ಹವಾನಿಯಂತ್ರಿತ ವ್ಯವಸ್ಥೆಯ ಕಾರಣಕ್ಕೆ ಅಜ್ಜಿ ಒಮ್ಮೆ ನಡುಗಿದರು. ಇದನ್ನು ಗಮನಿಸಿದ ಕಾವ್ಯ ತತ್‌ಕ್ಷಣವೇ ಬ್ಯಾಗಿನೊಳಗಿದ್ದ ಶಾಲು ತೆಗೆದು ಅಜ್ಜಿಗೆ ಹೊದಿಸಿದಳು. ಏಸಿ ಕಾರಣಕ್ಕೆ ನಿನಗೆ ಚಳಿ ಆಗ ಬಹುದು. ಇದನ್ನು ಹೊದ್ಕೊಂಡ್ರೆ ಸರಿ ಹೋಗುತ್ತೆ ಅಂದಳು. ಅಜ್ಜಿ ಹಾಗೇ ಮಾಡಿದರು.
ಸಿನೆಮಾ ಮುಗಿಯುತ್ತಿದ್ದಂತೆ- “ಮನೆಗೆ ಹೋಗಿ ಯಾರ್ರೀ ಅಡುಗೆ ಮಾಡ್ತಾರೆ? ಇಲ್ಲೇ ಏನಾದರೂ ತಿಂದು ಹೋಗೋಣ’ ಅಂದಳು ವಾಣಿ. ಎಲ್ಲರೂ ಹೊಟೇಲಿನ ದಾರಿ ಹಿಡಿದರು. “ನನಗೆ ಮೊಸರನ್ನ ಅಥವಾ ಎರಡು ಇಡ್ಲಿ ಸಾಕು. ನಿಮಗೆ ಏನು ಬೇಕು ತೊಗೊಳ್ಳಿ’ ಎಂದರು.
ಮನೆಗೆ ಹೊರಡುವ ಹೊತ್ತಾಯ್ತು ಕಾವ್ಯ-“ಅಜ್ಜೀ, ನಾವೇ ಫಸ್ಟ್ ಹೋಗಿ ಬಿಡೋಣ. ಹೆದರಬೇಡ, ನಾನು ಹೇಳಿದೀನಲ್ಲ. ಅದೇ ರೂಲ್ಸ್ ಫಾಲೋ ಮಾಡು’ ಅಂದಳು. ಅಜ್ಜಿಗೆ ಈಗ ಅದೆಂಥ ಆತ್ಮವಿಶ್ವಾಸ ಬಂದಿತ್ತೆಂದರೆ ಆಕೆ ಒಂದು ಬ್ಯಾಗ್ ಹಿಡಿದು ಎಸ್ಕಲೇಟರ್‌ನಲ್ಲಿ ನಿಂತಿದ್ದರು. ಅವರ ಜೀವನೋತ್ಸಾಹ ಕಂಡು ಸುತ್ತಲೂ ಇದ್ದವರು ಮೆಚ್ಚುಗೆಯಿಂದ ನೋಡಿದರು. “ಬೇಡ ಬೇಡ, ಅದನ್ನು ಹತ್ತಲು ಭಯ ಆಗುತ್ತೆ ಎಂದು ಎಸ್ಕಲೇಟರ್ ಹತ್ತಲು ಹಿಂಜರಿಯು ತ್ತಿದ್ದ ಹೆಂಗಸರು, ಮಕ್ಕಳಿಗೆ ಅಜ್ಜಿಯನ್ನು ತೋರಿಸಿದ ಹೆತ್ತವರು, ಆ ಅಜ್ಜಿನ ನೋಡಿ ಕಲಿತುಕೊಳ್ಳಿ. ಅಷ್ಟು ವಯಸ್ಸಾಗಿದ್ದರೂ ಲಗೇಜ್ ಸಮೇತ ಎಸ್ಕಲೇಟರ್‌ನಲ್ಲಿ ಆರಾಮವಾಗಿ ಹೋಗ್ತಿದ್ದಾರೆ. ಗ್ರೇಟ್ ಲೇಡಿ ’ ಎಂದರು. ಒಂದಿಬ್ಬರು ಉತ್ಸಾಹಿಗಳು, ಅಜ್ಜಿ- ಮೊಮ್ಮಗಳ ಫೋಟೋ ತೆಗೆದುಕೊಂಡರು. ಮಾಲ್‌ಗೆ ಬಂದಾಗಿನಿಂದ ಅಮ್ಮ ಬಹಳ ಖುಷಿಯಿಂದ ಇದ್ದುದನ್ನು ಹರೀಶ ಸೂಕ್ಷ್ಮವಾಗಿ ಗಮನಿಸಿದ್ದ. ಅಕಸ್ಮಾತ್ ಅಮ್ಮನನ್ನು ಮನೆಯಲ್ಲಿ ಬಿಟ್ಟು ಬಂದಿದ್ದರೆ ಆಕೆಗೆ ಖಂಡಿತ ಇಷ್ಟೊಂದು ಸಂತೋಷ ಆಗುತ್ತಿರಲಿಲ್ಲ ಅನಿಸಿದಾಗ, ಅಜ್ಜಿಯನ್ನು ಜೋಪಾನವಾಗಿ ನೋಡಿ ಕೊಂಡ ಮಗಳ ಬಗ್ಗೆ ಅವನಿಗೆ ಹೆಮ್ಮೆ ಅನಿಸಿತು. ಅಜ್ಜಿಗೆ ಏನೇನಿಷ್ಟ ಅನ್ನುವುದನ್ನು ಮಗಳು ಹೇಗೆ ಅರ್ಥ ಮಾಡಿಕೊಂಡಳು ಎಂಬ ಪ್ರಶ್ನೆಯೂ ಅವನನ್ನು ಬಿಡದೆ ಕಾಡಿತು. ಮನೆಗೆ ಬಂದ ಕೆಲಹೊತ್ತಿನಲ್ಲೇ, ಸುಸ್ತಾಗಿದೆ, ನಾವು ಮಲ್ಕೋತೇವೆ ಅನ್ನುತ್ತಾ ಹೆಂಗಸರಿಬ್ಬರೂ ನಿದ್ರಾದೇವಿಗೆ ಶರಣಾದರು. ಇದೇ ಸಮಯ ಅಂದುಕೊಂಡು ಮಗಳನ್ನು ಕರೆದ ಹರೀಶ-“ಪುಟ್ಟು, ಇವತ್ತು ಅಜ್ಜಿಗೆ ಸಖತ್ ಖುಷಿ ಆಗಿದೆ. ನನಗೆ ಅದು ಕಾಣಿಸ್ತು. ಅಜ್ಜಿಗೆ ಇದೆಲ್ಲ ಇಷ್ಟ ಅಂತ ಹೇಗೆ ಗೊತ್ತಾಯ್ತು ನಿನಗೆ?’ ಎಂದು ಕುತೂಹಲದಿಂದ ಪ್ರಶ್ನಿಸಿದ.
“ಅಪ್ಪಾ, ಒಂದು ಮನೆಯಲ್ಲಿ ಐದು ವರ್ಷದ ಮಗು ಇರ್ತದೆ ಅಂತಿಟ್ಕೊà. ಹೊರಗಿನ ಪ್ರಪಂಚ, ಅಲ್ಲಿನ ಮಾತು, ಅದರ ವೈಭವವೆಲ್ಲ ಮಗುವಿಗೆ ಅರ್ಥವಾಗಲ್ಲ. ಅದೆಲ್ಲ ಗೊತ್ತಿದ್ದೂ ತಾಯಿಯಾ ದವಳು ಮಗುವನ್ನು ಜತೆಯಲ್ಲಿ ಕರ್ಕೊಂಡು ಹೋಗ್ತಾಳೆ. ಅದೂ ಹೇಗೆ? ಎರಡು ಜತೆ ಬಟ್ಟೆ, ಹಾಲಿನ ಬಾಟಲಿ, ನೀರು, ವಿಕ್ಸ್ ಎಲ್ಲವನ್ನೂ ಜತೆಗಿಟ್ಟುಕೊಂಡೇ ಹೊರಡುತ್ತಾಳೆ. ಅಕಸ್ಮಾತ್ ಮಗು ಹೊರಗೆ ಸೂಸು/ ವಾಂತಿ ಮಾಡಿದರೆ, ಟಾಯ್ಲೆಟ್‌ಗೆ ಹೋಗಬೇಕು ಅಂದರೂ ಅಮ್ಮ ಬೇಸರ ಮಾಡಿಕೊಳ್ಳಲ್ಲ. ಅದಕ್ಕೆ ವ್ಯವಸ್ಥೆ ಮಾಡ್ತಾಳೆ. ಮಗು ಥೈಥೈಥೈ ಕುಣಿದರೆ, ಆ ಕ್ಷಣವನ್ನು ಮನಸೊಳಗೆ ಉಳಿಸಿಕೊಳ್ತಾಳೆ. ಕಾಲ ಉರುಳಿ, ಅದೇ ತಾಯಿ ಅಜ್ಜಿ ಅನ್ನಿಸಿಕೊಂಡಾಗ, ಮಕ್ಕಳು ಏನು ಮಾಡ್ತಾರೆ ಹೇಳು? ಅಮ್ಮನಿಗೆ ನಡೆಯಲು ಆಗಲ್ಲ ಅಂತ ಕಾರಣ ಹೇಳಿ, ತಾವು ಮಾತ್ರ ಹೊರಗೆ ಹೋಗಿ ಎಂಜಾಯ್ ಮಾಡ್ತಾರೆ! ವಯಸ್ಸಾದವರು ದೇವಸ್ಥಾನಕ್ಕೆ, ಪಾರ್ಕ್‌ಗೆ ಮಾತ್ರ ಹೋಗಬೇಕು ಅಂತ, ಮಾಲ್‌ಗೆ, ಸಿನೆಮಾಕ್ಕೆ, ಹೊಟೇಲ್‌ಗೆ ಹೋಗಬಾರದು ಅಂತ ರೂಲ್ಸ… ಇದೆಯಾ? ಕುಟುಂಬದವರ ಜತೆ ಹೊರಗೆ ಹೋಗಬೇಕು, ಎಲ್ಲ ಬಗೆಯ ಬೆರಗಿಗೂ ಸಾಕ್ಷಿ ಆಗಬೇಕು, ಮನೆ ಮಂದಿಯ ಜತೆ ಓಡಾಡಬೇಕು ಅಂತ ಹಿರಿಯ ಜೀವಗಳಿಗೂ ಅನ್ನಿಸ್ತಾ ಇರ್ತದೆ ಕಣಪ್ಪ, ಆದ್ರೆ ಅದನ್ನೆಲ್ಲ ಮಕ್ಕಳ ಮುಂದೆ ಹೇಳುವಂಥ ವಾತಾ ವರಣ ಮನೆಗಳಲ್ಲಿ ಇರಲ್ಲ. ಅಪ್ಪ-ಅಮ್ಮನ ಮನಸಿನ ಮಾತು ಕೇಳುವ ಆಸಕ್ತಿ ಮಕ್ಕಳಿಗೂ ಇರಲ್ಲ. ಕುಟುಂಬದವರ ಜತೆ ಇದ್ದಾಗ ಹಿರಿಯರು ಖುಷಿ ಯಿಂದ ನಗುತ್ತಾರಲ್ಲ, ಅದಕ್ಕೆ ಬೆಲೆ ಕಟ್ಟಲು ಆಗಲ್ಲ.
ಹಾಗೇನೇ ಮನೆಯೊಳಗೇ ಒಂಟಿಯಾಗಿ ಕೂತು ಸಂಕಟದಿಂದ ಕಣ್ಣೀರು ಹಾಕ್ತಾರಲ್ಲ; ಆ ನೋವನ್ನು ವಿವರಿಸಲೂ ಆಗಲ್ಲ. ಅಲ್ವೇನಪ್ಪಾ? ನನಗೆ ಹೀಗೆಲ್ಲ ಅನ್ನಿಸಿಬಿಡ್ತು. ಹಾಗಾಗಿ ಅಜ್ಜಿ ಯನ್ನೂ ಕರ್ಕೊಂಡು ಹೋಗಬೇಕು ಅಂತ ಪಟ್ಟು ಹಿಡಿದೆ. ಇಲ್ಲಿಂದ ಹೊರಡುವುದಕ್ಕಿಂತ ಮುಂಚೆ, ಲೆಫ್ಟ್ ರೈಟ್ ಮಾಡೋದನ್ನು ಅಭ್ಯಾಸ ಮಾಡಿಸ್ತೆ. ಎಸ್ಕಲೇಟರ್‌ಗೆ ಹತ್ತಿಸುವಾಗ ನಾನು ಬಳಸಿದ್ದು ಲೆಫ್ಟ್-ರೈಟ್ ತಂತ್ರವನ್ನೇ. ಜತೆಗೆ ಒಬ್ರು ಸಪೋರ್ಟ್‌ಗಿದ್ದಾರೆ ಅಂದ್ರೆ ಎಂಥವರಿಗೂ ಧೈರ್ಯ ಬರುತ್ತೆ. ಅಜ್ಜಿ ಕೂಡಾ ಇವತ್ತು ಹಾಗೇ ಮಾಡಿ ಗೆದ್ರು ಕಣಪ್ಪಾ… ನನಗೆ ಸಖತ್ ಖುಷಿ ಆಯ್ತು…’
ಇವತ್ತು ನೀನು ನನಗೆ ಗುರು ಆಗಿಬಿಟ್ಟೆ ಮಗಳೇ. ಹಿರಿಯರನ್ನು ಕೇವಲವಾಗಿ ನೋಡುವ, ಅವರ ಬಗ್ಗೆ ಪೂರ್ವಗ್ರಹ ಹೊಂದಿರುವ ನನ್ನಂಥ ಮಕ್ಕಳು ಎಲ್ಲ ಮನೆಗಳಲ್ಲೂ ಇದ್ದಾರೆ. ಆದರೆ ಎಲ್ಲ ಮನೆಗಳಲ್ಲೂ ನಿನ್ನಂಥಾ ಮಕ್ಕಳು ಇಲ್ಲ. ನೀನಿವತ್ತು ನನಗೆ ಬದುಕಿನ ಅಮೂಲ್ಯ ಪಾಠ ಹೇಳಿಕೊಟ್ಟೆ ಅನ್ನುತ್ತಾ ಭಾವುಕನಾದ ಹರೀಶ, ಮಗಳ ಕೈ ಹಿಡಿದು ಹಣೆಗೆ ಒತ್ತಿಕೊಂಡ.
–ಎ.ಆರ್.ಮಣಿಕಾಂತ್