Advertisement

ಕಳ್ಳಿಗೆ: ಹತ್ತಾರು ಸೌಕರ್ಯ ಹರಿದು ಬರಬೇಕು ಈ ಹಳ್ಳಿಗೆ !

10:30 AM Jul 05, 2022 | Team Udayavani |

ಕಳ್ಳಿಗೆ‌: ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇರುವ ನೆತ್ತರಕೆರೆಯನ್ನು ಹೊಂದಿರುವ ಗ್ರಾಮ ಕಳ್ಳಿಗೆ. ದೈವ-ದೇವರ ಬೀಡಾಗಿಯೂ ಪ್ರಸಿದ್ಧಿ ಹೊಂದಿರುವ ಗ್ರಾಮ. ಕೃಷಿಯೇ ಆರ್ಥಿಕತೆಯ ಜೀವಾಳ.

Advertisement

ನೆತ್ತರಕೆರೆಯ ಕುರಿತು ಹಲವಾರು ಕಥೆಗಳಿವೆ. ಹಿಂದೆ ಅರಸು ಮನೆತನಗಳ ಜಗಳದ ಹಿಂದಿನ ಕಥೆ ಈ ಕೆರೆಗಿದೆ ಎನ್ನಲಾಗುತ್ತದೆ. ಐತಿಹಾಸಿಕವಾಗಿ, ಟಿಪ್ಪು ಸುಲ್ತಾನ್‌ ಇದೇ ಊರಿನಲ್ಲಿ ಹಲವರ ಹತ್ಯೆ ನಡೆಸಿ ನೆತ್ತರು ಹರಿಸಿದ ಕಾರಣ ನೆತ್ತರ ಕೆರೆಯಾಗಿದೆ ಎಂಬ ಮಾತೂ ಇದೆ. ಗ್ರಾಮಕ್ಕೂ ಇದೇ ಹೆಸರಿರುವುದು ವಿಶೇಷ.

ಗ್ರಾಮದಲ್ಲಿ ಶತಮಾನವನ್ನು ದಾಟಿದ ನೆತ್ತರಕೆರೆ ಸರಕಾರಿ ಹಿ.ಪ್ರಾ. ಶಾಲೆ ಇದೆ. ಒಂದು ಕಾಲದಲ್ಲಿ ತೀರಾ ಹಿಂದುಳಿದಿತ್ತು. ಆದರೀಗ ಅನೇಕ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಂಡಿದೆ. ಆದರೆ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ, ಕಾಲೇಜು ಅಗತ್ಯವಿದೆ. ಇದು ಗ್ರಾಮಸ್ಥರ ಬೇಡಿಕೆ.

ಈ ಗ್ರಾಮ ತೀರಾ ಅಪರಿಚಿತವಾದದ್ದೇನೂ ಅಲ್ಲ. ಬಂಟ್ವಾಳದ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಇದೇ ಗ್ರಾಮದವರು. ರಾಜ್ಯಸಭಾ ಸದಸ್ಯರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಾ| ಕೊಡ್ಮಾಣ್‌ ನಾಗಪ್ಪ ಆಳ್ವ ಅವರೂ ನೆತ್ತರಕೆರೆ ಶಾಲೆಯಲ್ಲಿ ಕಲಿತವರು. ಇವರಲ್ಲದೆ ಹಲವಾರು ಮಂದಿ ಉದ್ಯಮ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಜತೆಗೆ ಸಾರ್ವಜನಿಕ ಮೈದಾನವೂ ಇಲ್ಲ. ಇವೆರಡು ತೀರಾ ಅಗತ್ಯವಿದೆ. ಆರೋಗ್ಯ ಕೇಂದ್ರ ಸ್ಥಾಪನೆಯಾದರೆ ಜನರಿಗೆ ಅನುಕೂಲವಾಗಲಿದೆ. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲವಾಗಿತ್ತು. ಪ್ರಸ್ತುತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜೆಜೆಎಂ ಮೂಲಕ ಅನುದಾನ ಮಂಜೂರಾಗಿದೆ.

Advertisement

ಕಸ ನಿರ್ವಹಣೆ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಗ್ರಾಮದಲ್ಲಿ ಜಾರಿಯಾಗಿಲ್ಲ. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಜಾರಿ ಮಾಡಬೇಕಿದೆ. ಅದರಿಂದ ಗ್ರಾಮ ಮಾಲಿನ್ಯ ಮುಕ್ತಗೊಳ್ಳಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಇದರೊಂದಿಗೆ ಇನ್ನೊಂದು ಸಮಸ್ಯೆಯೆಂದರೆ, ಗ್ರಾಮಸ್ಥರು ಉದ್ಯೋಗಕ್ಕಾಗಿ ಹತ್ತಿರದ ಪೇಟೆಗಳನ್ನೇ ಆಶ್ರಯಿಸಬೇಕಿದೆ. ಯುವಜನರಿಗೆ ಉದ್ಯೋಗ ಕಲ್ಪಿಸು ವಂಥ ಕೆಲವು ಯೋಜನೆಗಳು ಬಂದರೆ ಪೇಟೆ ವಲಸೆ ತಪ್ಪುತ್ತದೆ ಎಂಬುದು ಹಲವು ಗ್ರಾಮಸ್ಥರ ಅಭಿಪ್ರಾಯ. 2011ರ ಜನಗಣತಿ ಪ್ರಕಾರ 4205 ಜನರಿದ್ದಾರೆ. ಗ್ರಾಮವು ಒಟ್ಟಾರೆ 620.64 ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ.

ನೀರಿಗೆ ಯೋಜನೆ ಮಂಜೂರು: ಗ್ರಾಮವು ಪ್ರೌಢಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ಸಾರ್ವಜನಿಕ ಮೈದಾನದ ಕೊರತೆ ಯನ್ನು ಅನುಭವಿಸುತ್ತಿದೆ. ಮುಖ್ಯವಾಗಿ ಕುಡಿ ಯುವ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜೆಜೆಎಂ ಅನುದಾನ ಮಂಜೂರಾಗಿದ್ದು, ಶೀಘ್ರವೇ ಅನುಷ್ಠಾನ ವಾಗಲಿದೆ. – ದಾಮೋದರ್‌ ನೆತ್ತರಕೆರೆ., ಉಪಾಧ್ಯಕ್ಷರು, ಗ್ರಾ.ಪಂ.ಕಳ್ಳಿಗೆ

ಯುವಕರಿಗೆ ಇಲ್ಲೇ ಕೆಲಸ ಸಿಗಲಿ: ಗ್ರಾಮಕ್ಕೆ ಹೊಸ ಯೋಜನೆಗಳು ಬಂದು ಯುವ ಜನರು ಊರಲ್ಲೇ ನೆಲಸುವಂತಾಗಬೇಕು. ಮೂಲ ಸೌಕರ್ಯಗಳ ಜತೆಗೆ ಉದ್ಯೋಗ ಸೃಷ್ಟಿಯ ಕಾರ್ಯ ಆಗಬೇಕು. ಆಗ ಗ್ರಾಮದ ಅಭಿವೃದ್ಧಿ ಸಾಧ್ಯ. ಕೃಷಿ, ಪಶುಸಂಗೋಪನೆಯ ವಿಷಯದಲ್ಲೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯಬೇಕು ಹಾಗೂ ಅದರಂತೆ ಸಲಹೆ ನೀಡಬೇಕು. ಹಾಗೆಯೇ ಕೃಷಿ ಯಂತ್ರೋಪಕರಣಗಳು ಕೂಡ ಇಲ್ಲೇ ಸಿಗುವಂತಾಗಬೇಕು. – ನಾರಾಯಣ ಹೊಳ್ಳ ನೆತ್ತರಕೆರೆಗುತ್ತು., ಗ್ರಾಮಸ್ಥರು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next