ಬಂಟ್ವಾಳ : ಶುಕ್ರವಾರ ಮಧ್ಯಾಹ್ನ ಪರಸ್ಪರ ಗುರಾಯಿಸಿ ನೋಡಿಕೊಂಡು ಇಬ್ಬರಿಗೆ ಚೂರಿ ಇರಿತ, ಒಬ್ಬನಿಗೆ ಹಲ್ಲೆ ನಡೆಸಿದ ಘಟನೆ ನಡೆದ ಬಳಿಕ ಕಲ್ಲಡ್ಕದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸೂಕ್ಷ್ಮ ಪ್ರದೇಶವಾದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಇಂದು ಬೆಳಿಗ್ಗೆ 9 ಗಂಟೆಯಿಂದ ಜೂನ್ 2ರವರೆಗೆ ಗಂಟೆಯವರೆಗೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಉಪವಿಭಾಗ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮಹಮ್ಮದ್ ಹಾಸೀರ್, ಜಮಾಲ್ ಮತ್ತು ನಾಸೀರ್ ಮೇಲೆ ಮಿಥುನ್, ಆತನ ಸಹಚರರಾದ ಅಮಿತ್ ಮತ್ತು ಯತೀನ್ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಘಟನೆಯ ಸುದ್ದಿ ಹರಡುತ್ತಿದ್ದಂತೆ ರಸ್ತೆಯಲ್ಲಿ ಗುಂಪು ಜಮಾಯಿಸಿದ್ದು ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಪಷ್ಟ ಮಾಹಿತಿ ತಿಳಿಯುವ ಮೊದಲೇ ಭಯಭೀತ ಮಂದಿ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿಕೊಂಡರು. ಆದರೆ ವಾಹನ ಸಂಚಾರ ಅಬಾಧಿತವಾಗಿತ್ತು. ಇಂದೂ ಸಹ ಕಲ್ಲಡ್ಕದಲ್ಲಿ ಅಂಗಡಿಗಳು ಬಾಗಿಲು ತೆರೆದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ಘಟನೆಯ ಬಳಿಕ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.