ಹೈದರಾಬಾದ್: ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ (Kalki 2898 AD) ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ವರ್ಲ್ಡ್ ವೈಡ್ ಚಿತ್ರ 1000 ಕೋಟಿ ರೂ. ಗಳಿಕೆ ಕಂಡಿದೆ ಎಂದು ಚಿತ್ರತಂಡವೇ ಹೇಳಿದೆ.
ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಸಾಕಷ್ಟು ಪರಿಶ್ರಮವಹಿಸಿ ʼಕಲ್ಕಿʼ ಲೋಕವನ್ನು ಸೃಷ್ಟಿಸಿ ಅದರಲ್ಲಿ ಸೈನ್ಸ್ ಫೀಕ್ಷನ್ ಹಾಗೂ ಪೌರಾಣಿಕ ಜಗತ್ತನ್ನು ತೋರಿಸಿದ್ದಾರೆ. ನಾಗ್ ಅಶ್ವಿನ್ ಅವರ ಅಮೋಘ ದೃಶ್ಯ ಕಾವ್ಯವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಪ್ರಭಾಸ್ (Prabhas), ಅಮಿತಾಭ್(Amitabh Bachchan), ಕಮಲ್ ಹಾಸನ್(Kamal Haasan), ದೀಪಿಕಾ(Deepika Padukone).. ಹೀಗೆ ಬಹುದೊಡ್ಡ ಕಲಾವಿದರ ದಂಡೇ ಇರುವ ʼ ಕಲ್ಕಿ 2898 ಎಡಿʼ ಚಿತ್ರದಲ್ಲಿದೆ.
ಆದರೆ ಕೆಲವರಿಗೆ ಸಿನಿಮಾ ಇಷ್ಟವಾಗಿಲ್ಲ. ಕಡೆಯ 30 ನಿಮಿಷ ಮಾತ್ರ ಚೆನ್ನಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿರ್ದೇಶಕ ನಾಗ್ ಅಶ್ವಿನ್ ಅವರು ಪೋಸ್ಟ್ ವೊಂದು ಚರ್ಚೆಗೆ ಗ್ರಾಸವಾಗಿದೆ.
ʼʼಈ ಮೈಲುಗಲ್ಲು, ಈ ಸಂಖ್ಯೆ (1000 ಕೋಟಿ ರೂ.) ನಮ್ಮಂತಹ ಯುವ ತಂಡಕ್ಕೆ ಖಂಡಿತವಾಗಿಯೂ ದೊಡ್ಡದೇ. ಆದರೆ ನಾವು ಈ ಸಂಖ್ಯೆಯನ್ನು ಯಾವುದೇ ರಕ್ತಪಾತ, ಅಶ್ಲೀಲತೆ, ಪ್ರಚೋದನಕಾರಿ ಅಥವಾ ಶೋಷಣೆಯ ಕಂಟೆಂಟ್ ಗಳಿಲ್ಲದೆ ಸಾಧಿಸಿದ್ದೇವೆ ಎನ್ನುವುದು ವಿಶೇಷ. ನಮ್ಮ ಬೆನ್ನುಲುಬಾಗಿ ನಿಂತ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಧನ್ಯವಾದಗಳು” ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ʼಕೆಜಿಎಫ್ʼ, ʼಬಾಹುಬಲಿʼ, ಅನಿಮಲ್ ಹಾಗೂ ʼಸಲಾರ್ʼ ಸಿನಿಮಾಗಳಲ್ಲಿ ಹಿಂಸಾತ್ಮಕ ದೃಶ್ಯ ಹಾಗೂ ಹಸಿಬಿಸಿ ದೃಶ್ಯಗಳು ಹೆಚ್ಚಾಗಿತ್ತು. ʼಕಲ್ಕಿʼಯಲ್ಲಿ ಇದ್ಯಾವ ದೃಶ್ಯಗಳಿಲ್ಲ, ಹೀಗಾಗಿ ಇದನ್ನೆಲ್ಲ ಉದ್ದೇಶಿಸಿ ನಾಗ್ ಅಶ್ವಿನ್ ಹೇಳಿದ್ದಾರೆ ಎನ್ನಲಾಗಿದೆ.
ಈ ಸ್ಟೋರಿ ಹಾಕಿದ ಬೆನ್ನಲ್ಲೇ ನೆಟ್ಟಿಗರು ನಾಗ್ ಅಶ್ವಿನ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಸಂದೀಪ್ ರೆಡ್ಡಿ ವಂಗಾ(Sandeep Reddy Vanga) ಅವರಿಗೆ ಟಾಂಗ್ ಕೊಡಲೆಂದೇ ನಾಗ್ ಅಶ್ವಿನ್ ಈ ರೀತಿ ಸ್ಟೋರಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ʼಅನಿಮಲ್ʼ ನಲ್ಲಿ ಸಿಕ್ಕಾಪಟ್ಟೆ ವೈಲೆನ್ಸ್ ಹಾಗೂ ಬೋಲ್ಡ್ ದೃಶ್ಯಗಳಿದ್ದವು.
ʼಕಲ್ಕಿʼ 1000 ಕೋಟಿ ಗಳಿಸಿದೆ ಎನ್ನುತ್ತಿದ್ದಾರೆ. ಆದರೆ ಸಿನಿಮಾವನ್ನು ಹಾಲಿವುಡ್ ನಿಂದ ಕಾಪಿ ಮಾಡಿ ಕಟ್ಟಿಕೊಡಲಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ನಾಗ್ ಅಶ್ವಿನ್ ಸತ್ಯಾಂಶವನ್ನೇ ಹೇಳಿದ್ದಾರೆ ಎಂದು ಅವರ ಪರವಾಗಿ ಕಮೆಂಟ್ ಮಾಡಿದ್ದಾರೆ.
ಸದ್ಯ ನಾಗ್ ಅಶ್ವಿನ್ ಅವರ ಪೋಸ್ಟ್ ಟಾಲಿವುಡ್ ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.