ನವದೆಹಲಿ: ನಿರ್ದೇಶಕಿ ಲೀನಾ ಅವರ ಸಾಕ್ಷ್ಯಚಿತ್ರವೊಂದರ “ಕಾಳಿ ಮಾತೆ’ ಪೋಸ್ಟರ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆನಡಾದ ಅಗಾ ಖಾನ್ ವಸ್ತು ಸಂಗ್ರಹಾಲಯವು ಪೋಸ್ಟರ್ ಅನ್ನು ಹಿಂಪಡೆದಿದೆ. ಹಾಗೆಯೇ ಈ ವಿಚಾರವಾಗಿ ಕ್ಷಮೆಯಾಚಿಸಿದೆ. ಅದರ ಬೆನ್ನಲ್ಲೇ ಟ್ವಿಟರ್ ಸಂಸ್ಥೆ ಕೂಡ ವಿವಾದಾತ್ಮಕ ಪೋಸ್ಟರ್‌ಅನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ.
ಇದೇ ವಿಚಾರದಲ್ಲಿ “ಕಾಳಿ ಮಾಂಸಾಹಾರಿ, ಮದ್ಯ ಸೇವಿಸುವವಳು’ ಎಂದಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬುಧವಾರ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇದಕ್ಕೆ ಸಂಸದೆ ಮತ್ತೆ ಪ್ರತಿಕ್ರಿಯಿಸಿದ್ದು, “ನಾನು ಕಾಳಿಯ ಆರಾಧಕಿ. ತಾರಾಪಿತ್‌ನ ಕಾಳಿ ದೇಗುಲಕ್ಕೆ ತೆರಳಿ ಅಲ್ಲಿ ದೇವರಿಗೆ ಏನು ನೈವೇದ್ಯ ಮಾಡುತ್ತಾರೆ ಎನ್ನುವುದನ್ನು ನೋಡಿ ಬನ್ನಿ. ನಾನು ಯಾರಿಗೂ ಹೆದರುವುದಿಲ್ಲ. ಸತ್ಯಕ್ಕೆ ಬ್ಯಾಕಪ್ ಬಲದ ಅಗತ್ಯವಿಲ್ಲ’ ಎಂದಿದ್ದಾರೆ. ಹಾಗೆಯೇ ತಮ್ಮ ಹೇಳಿಕೆಯನ್ನು ಖಂಡಿಸಿದ ತಮ್ಮದೇ ಪಕ್ಷದ ಟ್ವಿಟರ್ ಖಾತೆಯನ್ನು ಅವರು ಅನ್‌ಫಾಲೋ ಮಾಡಿದ್ದಾರೆ. ಮಹುವಾ ಅವರನ್ನು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಬೆಂಬಲಿಸಿದ್ದಾರೆ.
ಸುಪ್ರೀಂ ನಕಾರ: ಪ್ರವಾದಿ ಬಗ್ಗೆ ಹೇಳಿಕೆ ಕೊಟ್ಟು ವಿವಾದಕ್ಕೀಡಾದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದೇ ವೇಳೆ ನೂಪುರ್ ಅವರ ಶಿರಚ್ಛೇದ ಮಾಡುವವರಿಗೆ ಮನೆಯನ್ನೇ ಉಡು ಗೊರೆಯಾಗಿ ಕೊಡುವುದಾಗಿ ಹೇಳಿದ್ದ ಅಜ್ಮೀರ್ ದರ್ಗಾದ ಕ್ಲರ್ಕ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸಹಿಸುವಂಥದ್ದಲ್ಲ ಎಂದ ಕೆನಡಾದ ಸಂಸದ
ಇತ್ತೀಚೆಗೆ ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕನ್ನಡಿಗ ಸಂಸದ ಚಂದ್ರ ಆರ್ಯ ಕೂಡ ಕಾಳಿ ಪೋಸ್ಟರ್ ವಿಚಾರದಲ್ಲಿ ಬೇಸರ ಹೊರಹಾಕಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿರುವ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿಗಳು ಒಟ್ಟಾಗಿ ಹಿಂದೂ ವಿರೋಧಿ ಲೇಖನಗಳನ್ನು ಬರೆಯುತ್ತಿದ್ದಾರೆ. ಹಾಗೆಯೇ ಹಿಂದೂ ದೇವರುಗಳ ಮೇಲೆ ದಾಳಿ ಮಾಡಿದ್ದಾರೆ. ಇದು ಬಹಳ ಬೇಸರದ ಸಂಗತಿ. ಅಗಾ ಖಾನ್ ವಸ್ತು ಸಂಗ್ರಹಾಲಯ ಕ್ಷಮೆ ಕೇಳಿರುವುದು ಸ್ವಾಗತಾರ್ಹ’ ಎಂದು ಅವರು ಹೇಳಿದ್ದಾರೆ.