Advertisement

ನೀರಿಗಾಗಿ ರಸ್ತೆ ತಡೆ: ಪೊಲೀಸರ ಮಧ್ಯೆ ವಾಗ್ವಾದ  

12:03 PM Feb 27, 2019 | Team Udayavani |

ಕಲಬುರಗಿ: ಕಳೆದ ಹತ್ತು-ಹದಿನೈದು ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ನಗರದ ಜಗತ್‌ ಬಡಾವಣೆ ನಿವಾಸಿಗಳು ಸೋಮವಾರ ದಿಢೀರ್‌ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Advertisement

ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ತಲೆದೋರಿದ್ದು, ನಗರದ ನಿವಾಸಿಗಳು ಕೂಡ ಕುಡಿಯುವ ನೀರಿಗೆ ಸಂಕಷ್ಟ ಎದುರಿಸುತ್ತಿದ್ದಾರೆ. ವಿವಿಧ ವಾರ್ಡ್‌ಗಳ ಹಲವು ಬಡಾವಣೆಗಳಲ್ಲಿ ಸರಿಯಾದ ನೀರು ಸರಬರಾಜು ಆಗದೆ ಹಾಹಾಕಾರ ಉಂಟಾಗಿದೆ. ಹೀಗಾಗಿ ಜಗತ್‌ ಬಡಾವಣೆ ನಿವಾಸಿಗಳು ಸೋಮವಾರ ಬೆಳಗ್ಗೆ ಜಗತ್‌ ವೃತ್ತದಲ್ಲಿ ಖಾಲಿ ಕೊಡ ಹಿಡಿದು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸುತ್ತಿಲ್ಲ. ತಕ್ಷಣವೇ ಮಹಾನಗರ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮಹಿಳೆಯರು, ಯುವಕರು, ಪುರುಷರು ಏಕಾಏಕಿ ಜಗತ್‌ ವೃತ್ತದಲ್ಲಿ ಜಮಾವಣೆಗೊಂಡು ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಬ್ರಹ್ಮಪುರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಶ್ರೀಮಂತ್‌ ಇಲ್ಲಾಳ್‌ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ಪೊಲೀಸರ ಅನುಮತಿಯೂ ಪಡೆಯದೇ, ಗಮನಕ್ಕೂ ತಾರದೆ ರಸ್ತೆ ತಡೆ ನಡೆಸುತ್ತಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಇನ್ಸ್‌ಪೆಕ್ಟರ್‌ ಶ್ರೀಮಂತ್‌ ಇಲ್ಲಾಳ ಅವರೊಂದಿಗೆ ವಾಗ್ವಾದಕ್ಕಿಳಿದರು. ಆಗ ಪ್ರತಿಭಟನೆ ನಡೆಸುವ ಬಗ್ಗೆ ಮೊದಲೇ ಗಮನಕ್ಕೆ ತರಬೇಕಿತ್ತು. ಈ ರೀತಿಯ ದಿಢೀರ್‌ ರಸ್ತೆ ತಡೆ ನಡೆಸುವುದು ಸರಿಯಲ್ಲ ಎಂದು ಇನ್ಸ್‌ಪೆಕ್ಟರ್‌ ಶ್ರೀಮಂತ ಹೇಳಿದರು. ಕೊನೆಗೆ ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next