ಕಲಬುರಗಿ: “ಎಸ್‌ಪಿ ಮೇಡಂ ನನಗೆ ಕ್ಲೋಸ್. ನಿಮಗೆ ಏನೇ ಅಡ್ಡಿ ಬಂದರೂ ತೊಂದರೆಯಾಗದಂತೆ ನೋಡಿಕೊಳ್ಳುವೆ. ನಿಮಗೆ ಬೇಕಾದ ಎಲ್ಲ ಹೆಲ್ಪ್ ಮಾಡಿಸುವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ಪಿಎಸ್‌ಐ (ಪೊಲೀಸ್ ಸಬ್ ಇನ್ಸ್ ಪೆಕ್ಟರ್)ಗೆ ನಂಬಿಸಿ ಎಂಟುವರೆ ಲಕ್ಷ ರೂ. ದೋಚಿದ ಪ್ರಸಂಗ ನಡೆದಿದೆ.
ಎಸ್‌ಪಿ ಹೆಸರಿನಲ್ಲೇ ಪಿಎಸ್ ಐಯಿಂದ ಹಣ ಪಡೆದು ವಂಚಿಸಿದ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಕಾಶಿಂ ಬಾಬು ಪಟೇಲ್ (30) ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಈ ಹಿಂದೆ ಜೇವರ್ಗಿಯಲ್ಲಿ ಪಿಎಸ್‌ಐ ಆಗಿ ಹಾಗೂ ಸದ್ಯ ಡಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಹೂಗಾರ ವಂಚನೆಗೊಳಗಾದವರು.
ಏನಿದು ಘಟನೆ?: ಕಾಶೀಂ ಪಟೇಲ್ ಎಂಬಾತ ತನಗೆ ರಾಜಕೀಯ ಮತ್ತು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜತೆ ತಮ್ಮ ಕುಟುಂಬ ಸದಸ್ಯರೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದನ್ನು ತೋರಿಸಿದ್ದ. ಅಲ್ಲದೇ ಪ್ರಭಾವಿ ವ್ಯಕ್ತಿಯಂತೆ ನಂಬಿಕೆ ಬರುವ ರೀತಿ ವರ್ತಿಸಿದ್ದಲ್ಲದೇ, ಮೇಲಧಿಕಾರಿಗಳಿಂದ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಂದರೆಯಾದರೆ ಬಗೆಹರಿಸಿಕೊಡುತ್ತೇನೆ ಎಂದು ನಂಬಿಕೆ ಉಂಟಾಗುವಂತೆ ಹೇಳಿ ಕಳೆದ ನವೆಂಬರ್ ತಿಂಗಳಿನಲ್ಲಿ ಮೊಬೈಲ್ ನಂಬರ್ ನೀಡಿದ್ದ.
ಅದರಲ್ಲಿ ಡಾ|ಎಸ್‌ಎಂಜಿ ಅಂತ ಸೇವ್ ಮಾಡಿ, ಇದು ಎಸ್‌ಪಿ ಮೇಡಂ ಅವರ ಖಾಸಗಿ ನಂಬರ್. ಇದು ನನಗೆ ಹಾಗೂ ಮೇಡಂ ಅವರಿಗೆ ಮಾತ್ರ ಗೊತ್ತಿದ್ದು, ಈ ನಂಬರ್ ಯಾರಿಗೂ ನೀಡಬಾರದು, ಕರೆ ಮಾಡಬಾರದು. ಕೇವಲ ವಾಟ್ಸ್‌ಆ್ಯಪ್ ಮೆಸೇಜ್ ಮಾತ್ರ ಮಾಡಬೇಕೆಂದು ತಿಳಿಸಿ ವಾಟ್ಸ್ ಆ್ಯಪ್‌ನಲ್ಲಿ ಎಸ್‌ಪಿ ಮೇಡಂ ಅವರ ಡಿಪಿ ಇಟ್ಟು ನಂಬಿಸಲಾಗಿತ್ತು. ತನ್ನ ಕೆಲಸಕ್ಕಾಗಿ ತುರ್ತಾಗಿ ಹಣ ಬೇಕಾಗಿದೆ ಎಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರಿಂದ 2.50 ಲಕ್ಷ ರೂ. ಹಾಗೂ 6 ಲಕ್ಷ ರೂ.ನಗದು ರೂಪದಲ್ಲಿ ಸ್ನೇಹಿತರ ಮೂಲಕ ಕಳುಹಿಸಿಕೊಡಲಾಗಿತ್ತು ಎಂದು ಪಿಎಸ್‌ಐ ಹೂಗಾರ ದೂರು ಸಲ್ಲಿಸಿದ್ದಾರೆ.
ಕಳೆದ ಫೆ.3ರಂದು ಸಂಜೆ 6ರ ಸುಮಾರಿಗೆ ವಾಟ್ಸ್‌ಆ್ಯಪ್ ಕರೆ ಬಂದಿತ್ತು. ಅದರಲ್ಲಿ ಹೆಣ್ಣು ಮಕ್ಕಳು ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡುವ ಹಾಗೂ ಮಕ್ಕಳು ಅಳುವ ಶಬ್ದ ಕೇಳಿದ್ದರಿಂದ ಮೊಬೈಲ್ ನಂಬರ್ ನಿಖರತೆ ಬಗ್ಗೆ ಸಂಶಯ ಉಂಟಾಗಿತ್ತು. ತದನಂತರ ಎಸ್‌ಪಿ ಮೇಡಂ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಈ ತರಹದ ನಂಬರ್ ಯಾವುದೂ ಇಲ್ಲ. ಜತೆಗೆ ಯಾವುದೇ ಮೆಸೇಜ್ ಮಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಸಕ್ತ ವರ್ಷ ಶೇ.30ರಷ್ಟು ಪಠ್ಯ ಕಡಿಮೆ
ಒಟ್ಟಾರೆ 8.50 ಲಕ್ಷ ರೂ. ವಂಚಿಸಲಾಗಿದೆ ಎಂದು ಪಿಎಸ್‌ಐ ಮಂಜುನಾಥ ಹೂಗಾರ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೋಸ ಎಸಗಿರುವ ಆರೋಪಿ ಕಾಶಿಂ ಪಟೇಲ್ ಎಂಬಾತನನ್ನು ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಅರಿತು ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನ ಮೇರೆಗೆ ದಾಳಿ ನಡೆಸಿ ಬಂಧನ ಮಾಡಲಾಗಿದೆ. ಆರೋಪಿ ಈ ಕೃತ್ಯ ಮಾಡಿರುವುದನ್ನು ಒಪ್ಪಿಕೊಂಡಿದ್ದಲ್ಲದೆ ಕೃತ್ಯಕ್ಕೆ ಬಳಸಲಾಗಿದ್ದ ಪಾರ್ಚುನ್ ವಾಹನ, ಮೂರು ಮೊಬೈಲ್ ಹಾಗೂ 2 ಲಕ್ಷ ರೂ. ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.