ಕಲಬುರಗಿ: ದೇಶದಲ್ಲೇ ಮೊದಲು ಕೋವಿಡ್ ಸೋಂಕಿಗೆ ಬಲಿಯಾಗಿ, ಮೊದಲು ಲಾಕ್‌ಡೌನ್ ಆಗಿದ್ದ ಸೂರ್ಯನಗರಿ ಇಂದು (ಜೂ.1ರಂದು) ಬಹುತೇಕ ಸಹಜ ಸ್ಥಿತಿಗೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಬಹುತೇಕ ವ್ಯಾಪಾರ-ವಹಿವಾಟಿಗೆ ಜಿಲ್ಲಾಡಳಿತ ಅಸ್ತು ಎಂದಿದೆ.
ಅಂಗಡಿ- ಮುಂಗಟ್ಟುಗಳು ಸೇರಿದಂತೆ ಬಹುತೇಕ ಅಂಗಡಿಗಳನ್ನು ಆರಂಭಿಸಲು ಸಮ್ಮತಿ ಸೂಚಿಸಿದ್ದು, ಹೋಟೆಲ್ -ಬೇಕರಿ, ಮಾಲ್, ಚಿತ್ರಮಂದಿರ ಹಾಗೂ ಹೆಚ್ಚಿನ ಜನ ಸಂದಣಿ ಸೇರಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಆರಂಭಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ರವಿವಾರ ವರ್ತಕರು, ಬಟ್ಟೆ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಜಿಲ್ಲಾಧಿಕಾರಿ ಬಿ.ಶರತ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರನ್ನು ಭೇಟಿ ಮಾಡಿ ವ್ಯಾಪಾರ-ವಹಿವಾಟಿಗೆ ಅನುಮತಿ ನೀಡುವಂತ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅಂಗಡಿ-ಮುಂಗಟ್ಟುಗಳ ಆರಂಭಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಚಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಕಿರಾಣಿ ಬಜಾರ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಾತ್ರೆ ಅಂಗಡಿಗಳು ತೆರೆದಿರಬೇಕು. ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಗ್ರಾಹಕರು ಕಡ್ಡಾಯ ಮಾಸ್ಕ್ ಧರಿಸಬೇಕು. ಎಲ್ಲ ಬಟ್ಟೆ ಅಂಗಡಿಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಪರಸ್ಪರ ಅಂತರ ಕಾಪಾಡಬೇಕು ಎಂಬ ನಿಯಮದೊಂದಿಗೆ ಬಟ್ಟೆ ಅಂಗಡಿಗಳ ಆರಂಭಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಪ್ರತಿ ಭಾನುವಾರ ಎಲ್ಲ ಬಟ್ಟೆ ಅಂಗಡಿಗಳು ಬಂದ್ ಮಾಡಬೇಕು ಎಂಬ ಮಾರ್ಗಸೂಚಿ ನೀಡಿದೆ ಎಂದು ತಿಳಿಸಿದ್ದಾರೆ.
ಇನ್ನು, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕೆಂದು ಸೂಚಿಸಲಾಗಿದೆ. ಜೂ.8ರಿಂದ ಹೋಟೆಲ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ಸೂಚಿಸುವ ಸಾಧ್ಯತೆ ಇದೆ ಎಂದೂ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.