Advertisement

ಕಲಬುರಗಿ ಜಿಲ್ಲೆ: ಶೇ. 63.01 ಮತದಾನ

11:58 AM May 13, 2018 | Team Udayavani |

ಕಲಬುರಗಿ: ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 63.01 ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಮತದಾನವಾಗಿದ್ದರೆ  ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಮಹಾನಗರದ ಕ್ಷೇತ್ರಗಳಲ್ಲಿಯೇ ಅತಿ ಕಡಿಮೆ ಮತದಾನವಾಗಿದೆ. ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 63.75 ಮತದಾನವಾಗಿತ್ತು.

Advertisement

ಸೇಡಂ ಮತಕ್ಷೇತ್ರದಲ್ಲಿ ಶೇ. 73.84 ರಷ್ಟು ಮತದಾನವಾಗಿದ್ದರೆ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಶೇ. 52.36, ಕಲಬುರಗಿ ಉತ್ತರದಲ್ಲಿ 53.60 ಮತದಾನವಾಗಿದೆ. ಅದೇ ರೀತಿ ಅಫಜಲಪುರದಲ್ಲಿ ಶೇ. 60.61, ಜೇವರ್ಗಿ ತಾಲೂಕಿನಲ್ಲಿ ಶೇ. 67.57, ಚಿತ್ತಾಪುರ ಕ್ಷೇತ್ರದಲ್ಲಿ ಶೇ. 58.06, ಚಿಂಚೋಳಿ ಕ್ಷೇತ್ರದಲ್ಲಿ ಶೇ. 68.71 ಹಾಗೂ ಆಳಂದ ಕ್ಷೇತ್ರದಲ್ಲಿ ಶೇ. 64.48ರಷ್ಟು ಮತದಾನವಾಗಿದೆ. ಒಟ್ಟಾರೆ 94 ಸ್ಪರ್ಧಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ. 15ರಂದು ಬಹಿರಂಗವಾಗಲಿದೆ.

ಬಹುತೇಕ ಶಾಂತಿಯುತ ಮತದಾನ: ಒಂದೆರಡು ಗಲಾಟೆ ಪ್ರಕರಣಗಳನ್ನು ಬಿಟ್ಟರೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ನೀಡಿಲ್ಲವೆಂದು ಚಿತ್ತಾಪುರ ಕ್ಷೇತ್ರದ ತರಕಸ್‌ಪೇಟ್‌ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರೆ, ಚಿಂಚೋಳಿ ಕ್ಷೇತ್ರದ ಮರಪಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದು ಲಘು ಲಾಠಿ ಪ್ರಹಾರ ನಡೆದಿದೆ.

ನಾಲ್ಕೈದು ಕಡೆ ಯಂತ್ರಗಳು ಕೆಲ ಹೊತ್ತು ಕೈ ಕೊಟ್ಟಿರುವುದು ಹಾಗೂ ವಾಡಿ ಪಟ್ಟಣದಲ್ಲಿ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ನಡುವೆ ವಾಗ್ಧಾದ ಹಾಗೂ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಘರ್ಷಣೆ ಘಟನೆಗಳು ನಡೆದಿದ್ದನ್ನು ಬಿಟ್ಟರೆ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತ ಮತದಾನವಾಗಿದೆ. ಸಂಜೆ ಹೊತ್ತು ಜಿಲ್ಲೆಯ ಹಲೆವೆಡೆ ಧಾರಾಕಾರ ಮಳೆ ಬಂದಿದ್ದರಿಂದ ಸುಗಮ ಮತದಾನಕ್ಕೆ ಕೆಲಕಾಲ ಅಡ್ಡಿಯುಂಟು ಆಗಿತ್ತು. ಜೋರಾದ ಗಾಳಿ ಮಿಶ್ರಿತ ಮಳೆಯಿಂದ ಹಲವೆಡೆ ಮತಗಟ್ಟೆ ಎದುರು ನೆರಳಿಗಾಗಿ ಹಾಕಲಾದ ಟೆಂಟ್‌ ಹಾರಿ ಹೋಗಿದ್ದವು. ಅಫಜಲಪುರ ತಾಲೂಕಿನ ಕರ್ಜಗಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ಮೂಲಕ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ ಸ್ಪಷ್ಟವಾಗಿ 144 ಕಲಂ ಉಲ್ಲಂಘಿಸಿದ ಕುರಿತು ತಿಳಿದುಬಂದಿದೆ.

ಬೆಳಗ್ಗೆ 7ಗಂಟೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಲಾರಂಭಿಸಿದರೆ ಮಧ್ಯಾಹ್ನ 2 ಗಂಟೆಯಾಗುತ್ತಲೇ ಬಿಸಿಲಿಗೆ ಹೆದರಿದ ಮತದಾರರು ಮತಗಟ್ಟೆಗೆ ಬರಲು ಸ್ವಲ್ಪ ಹಿಂದೇಟು ಹಾಕುತ್ತಿರುವುದು ಕಂಡು ಬಂತು. ತದನಂತರ ಸಂಜೆ 4ಗಂಟೆ ಆಗುತ್ತಲೇ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಆರಂಭಿಸಿದಾಗ ಬಹುತೇಕ ಕಡೆ ಮಳೆ ಸುರಿಸಲಾರಂಭಿಸಿತು. ಇದರಿಂದ ಕೆಲ ಹೊತ್ತು ಕೆಲವರು ಆಶ್ರಯ ಪಡೆಯಬೇಕಾಯಿತು. 

Advertisement

ಬೇಸಿಗೆಯ ಖಡಕ್‌ ಬಿಸಿಲಿಗೆ ಹೆದರಿ ಮನೆಯಿಂದ ಹೊರ ಬರದೆ ಇರುವವರು. ಮಳೆಯಾಗಿ ಇಳೆ ತಂಪಾದ ನಂತರ ಹೆಜ್ಜೆ ಹಾಕಿದರು. ಇನ್ನೂ ಕೆಲ ಯುವಕರಂತು ಮಳೆಯಲ್ಲಿ ತೋಯ್ದುಕೊಂಡು ಹುರುಪಿನಿಂದ ಮತದಾನ ಮಾಡಿದ್ದು ಅಲ್ಲಲ್ಲಿ ಕಂಡು ಬಂದಿತು.

ಘಟಾನುಘಟಿಗಳಿಂದ ಮತದಾನ: ಜಿಲ್ಲೆಯಲ್ಲಿ ಅನೇಕ ಘಟಾನುಘಟಿಗಳು ತಮ್ಮ ಮತ ಚಲಾಯಿಸಿದರು. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ರಾಧಾದೇವಿ ಸಮೇತ ಮಹಾನಗರದ ಬಸವನಗರದ ಮತಗಟ್ಟೆ ಸಂಖ್ಯೆ 108ರಲ್ಲಿ ಮತ ಚಲಾಯಿಸಿದರು.

ದಕ್ಷಿಣ ಮತಕ್ಷೇತ್ರದ ಜಾತ್ಯತೀತ ಜನತಾದಳದ ಅಭ್ಯರ್ಥಿ ಬಸವರಾಜ ಡಿಗ್ಗಾವಿ ಅವರು ಪತ್ನಿ ನಾಗರತ್ನಾ ಅವರೊಂದಿಗೆ ಸೇರಿ ಬಿದ್ದಾಪುರ ಕಾಲೋನಿಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಅದೇ ರೀತಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಅವರು ಪತ್ನಿಯೊಂದಿಗೆ ಶಾಂತಿನಗರ ಬಡಾವಣೆಯಲ್ಲಿನ ಚಾಣಕ್ಯ

ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ ಅವರು
ತಂದೆಯವರಾದ ಶಾಸಕ ಬಿ.ಜಿ. ಪಾಟೀಲ ಅವರೊಂದಿಗೆ ಸೇರಿ ಎಪಿಎಂಸಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಖನಿಜಾ ಫಾತಿಮಾ ಬೇಗಂ ಲೋಕೋಪಯೋಗಿ ಇಲಾಖೆ ಕಚೇರಿಯ ಮತಗಟ್ಟೆ 166ರಲ್ಲಿ ಮತದಾನ ಮಾಡಿದರು. ಜಿಲ್ಲಾಧಿಕಾರಿ ವೆಂಕಟೇಶಕುಮಾರ ಮತದಾನದ ಹಕ್ಕನ್ನು ಚಲಾಯಿಸಿದರು. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ವಿವಿಧೆಡೆ ಮುಖಾಮುಖೀಯಾಗಿ ಪರಸ್ಪರರು ವಿಚಾರಗಳನ್ನು ವಿನಿಮಯ ಹಂಚಿಕೊಂಡಿರುವುದು ಸಹ ಕಂಡು ಬಂತು.

ಮತಗಟ್ಟೆಗೆ ನೂತನ ಜೋಡಿ: ಕಲಬುರಗಿ ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಮದುವೆಯ ಅಕ್ಷತಾರೋಪಣ ನಡೆದ ಬೆನ್ನಲ್ಲಿಯೇ ಜೋಡಿಯೊಂದು ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.

ವೀರೇಶ ನಗರದ ನಿವಾಸಿ ಪ್ರಸನ್ನ ಜತೆಗೆ ಸಿಬಿಐ ಕಾಲೋನಿಯ ನಿವಾಸಿ ಸುಮಲತಾ ವಿವಾಹವು ಶುಕ್ರವಾರ ನಗರದಲ್ಲಿ ನಡೆಯಿತು. ಅಕ್ಷತೆ ಹಾಕಿಕೊಂಡ ನಂತರ ಇಬ್ಬರು ಕೂಡಿಕೊಂಡು ಮೊದಲು ಪತ್ನಿಯ ಮತವಿರುವ ಬಸ್‌ ನಿಲ್ದಾಣ ಹಿಂಭಾಗದ ಸಿಐಬಿ ಕಾಲೋನಿಯ ಇಎಸ್‌ಐಸಿ ಡಿಸ್ಪೆನ್ಸರಿಯಲ್ಲಿರುವ ಮತಗಟ್ಟೆಗೆ ಆಗಮಿಸಿದ ದಂಪತಿ, ಅಲ್ಲಿ ನವವಿವಾಹಿತೆ ಸುಮಲತಾ ಮತ ಚಲಾಯಿಸಿದರು. ನಂತರ ಅಲ್ಲಿಂದ ಕಾರ್‌ ಹತ್ತಿಕೊಂಡು ಹಳೆ ಎಸ್ಪಿ ಕಚೇರಿ ಮುಂಭಾಗದಲ್ಲಿರುವ ಬಾಲಕಿಯರ ಸರ್ಕಾರಿ ಕಾಲೇಜಿನ ಮತಗಟ್ಟೆಗೆ ಆಮಿಸಿ ಪ್ರಸನ್ನ ಮತದಾನ ಮಾಡಿದರು.

ಹಿರಿಯ-ಕಿರಿಯರಲ್ಲಿ ಕಂಡ ಉತ್ಸಾಹ: ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು ಹುರುಪಿನಿಂದಲೇ
ಆಗಮಿಸಿ ಮತದಾನ ಮಾಡಿದರು. ಅನೇಕರು ವ್ಹೀಲ್‌ ಚೇರ್‌ಗಳಲ್ಲಿ, ಇನ್ನು ಕೆಲವರನ್ನು ಹೊತ್ತುಕೊಂಡು, ಇಲ್ಲವೇ
ತಮ್ಮ ಮೊಮ್ಮಕ್ಕಳು,ನೆರೆ-ಹೊರೆಯವರ ಸಹಕಾರದೊಂದಿಗೆ ಮತಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿದರು. ಇದೇ ಮೊದಲ ಬಾರಿಗೆ ಮತದಾನ ಹಕ್ಕು ಹೊಂದಿದ ಯುವಕ-ಯುವತಿಯರೂ ಉತ್ಸಾಹದಿಂದ ಮತ ಚಲಾಯಿಸಿದರು.
 
ಗಮನ ಸೆಳೆದ ಮಂಗಳಮುಖೀಯರ ಮತದಾನ ಹಕ್ಕು: ಈ ಸಲದ ವಿಧಾನ ಸಭೆ ಚುನಾವಣೆಯಲ್ಲಿ ಮಂಗಳಮುಖೀಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದರು. ಕಲಬುರಗಿ ನಗರದ ಆಳಂದ ರಸ್ತೆಯ ದೇವಿ ನಗರದದಲ್ಲಿರುವ ಮಹಿಳಾ ನಿಲಯದ ಸಮೀಪದಲ್ಲಿನ ನಿರ್ಮಿತಿ ಕೇಂದ್ರದಲ್ಲಿರುವ ಮತಗಟ್ಟೆಗೆ ಸುಮಾರು 20 ಜನ ಮಂಗಳಮುಖೀಯರು ಏಕಕಾಲಕ್ಕೆ ತೆರಳಿ ಸರದಿಯಲ್ಲಿ ನಿಂತುಕೊಂಡು ಮತದಾನ ಮಾಡಿದರು. ತಾಜಸುಲ್ತಾನಪುರ, ಶಿವಾಜಿನಗರ, ಸುವರ್ಣ ನಗರ, ಚಿಂಚನಸೂರ, ಚಿಂಚೋಳಿ ತಾಲೂಕಿನ ವಿವಿಧ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಮಂಗಳಮುಖೀಯರು ಹುರುಪಿನಿಂದ ಆಗಮಿಸಿ ಸರದಿಯಲ್ಲಿ ನಿಂತುಕೊಂಡು ಹಕ್ಕು ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next