ಕಲಬುರಗಿ: ಜಿಲ್ಲೆಯಲ್ಲಿ ಆಕ್ಸಿಜನ್ – ವೆಂಟಿಲೇಟರ್ ತೊರತೆಯಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮಂಗಳವಾರ ಒಂದೇ ದಿನದಲ್ಲಿ ಅಂಗನವಾಡಿ ಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ನಡೆದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಗರದ ಸಾಯಿ ಮಂದಿರ ಸಮೀಪದ ನಿವಾಸಿ, ತಾಲೂಕಿನ ಹೊನ್ನಕಿರಣಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅಕ್ಕನಾಗಮ್ಮ (50) ಹೈದ್ರಾಬಾದ್‍ಗೆ ಕೊಂಡೊಯ್ಯುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ.
ತಡರಾತ್ರಿ 2 ಗಂಟೆ ಸುಮಾರಿಗೆ ಅಕ್ಕನಾಗಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಅವರನ್ನು ಜಿಮ್ಸ್ ಆಸ್ಪತ್ರೆಗೆ ಕರೆತಲಾಗಿತ್ತು. ಆದರೆ, ಅಲ್ಲಿ ದಾಖಲಿಸಿಕೊಳ್ಳದ ಕಾರಣ ನಂತರ ಇಎಸ್‍ಐ ಆಸ್ಪತ್ರೆಗೆ ಕರೆಕೊಂಡು ಹೋಗಲಾಯಿತು. ಆದರೆ, ಅಲ್ಲಿ ವೆಂಟಿಲೇಟರ್ ಇಲ್ಲವೆಂದು ಹೇಳಿ ವೈದ್ಯರು ಚಿಕಿತ್ಸೆಗೆ ನಿರಾಕರಿಸಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಅಲ್ಲಿಂದ ನಂತರ ನಗರದ ಮೂರ್ನಾಲ್ಕು ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಅವರನ್ನು ಕರೆದೊಯ್ಯಲಾಗಿದೆ. ಅಲ್ಲಿಯೂ ಅಕ್ಕನಾಗಮ್ಮ ಅವರನ್ನು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಆಂಬ್ಯುಲೆನ್ಸ್ ಮೂಲಕ ಹೈದ್ರಾಬಾದ್‍ಗೆ ಸಾಗುವ ಮಾರ್ಗಮಧ್ಯ ಜಹೀರಾಬಾದ್ ಬಳಿ ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಆಸ್ಪತ್ರೆಗಳ ನಿರ್ಲಕ್ಷ್ಯ ಕಾರಣ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಇತ್ತ, ರಾಜೀವಗಾಂಧಿ ನಗರದ ನಿವಾಸಿ, ಗುರುಬಾಯಿ (55) ಎಂಬ ಮಹಿಳೆ ಆಕ್ಸಿಜನ್ ಕೊರತೆಯಿಂದ ಮಂಗಳವಾರ ಬೆಳಿಗ್ಗೆ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜು.11ರಂದೇ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಅಲ್ಲಿಂದ ಅವರು ಇಎಸ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆಕ್ಸಿಜನ್ ಕೊರತೆ ನೆಪ ಹೇಳಿ ಇಎಸ್‍ಐ ಆಸ್ಪತ್ರೆಯಿಂದ ಸೋಮವಾರ ಜಿಮ್ಸ್ ಗೆ ರವಾನಿಸಲಾಗಿತ್ತು. ಹೀಗೆ ಸೂಕ್ತ ಚಿಕಿತ್ಸೆ ಸಿಗದೆ ಗುರುಬಾಯಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.