ವಾಡಿ (ಚಿತ್ತಾಪುರ): ಭದ್ರತೆ ಬದಿಗಿಟ್ಟು, ಸೂಟು ಬೂಟು ಕಳಚಿಟ್ಟು, ಶ್ವೇತವರ್ಣದ ಅಂಗಿ ಪಂಚೆಯುಟ್ಟು ಹಸಿರು ಶಾಲು ಹೆಗಲೇರಿಸಿಕೊಂಡ ಜಿಲ್ಲಾಧಿಕಾರಿ ಯಶವಂತ ವಿ.ಗುರಿಕಾರ್, ಗುಲಾಬಿ ರುಮಾಲಿನಲ್ಲಿ ಎತ್ತಿನ ಗಾಡಿ ಹತ್ತಿ ಕೊಂಚೂರು ಗ್ರಾಮ ಪ್ರವೇಶ ಮಾಡುವ ಮೂಲಕ ಗ್ರಾಮೀಣ ರೈತರ ಹೃದಯ ತಟ್ಟಿದರು. ಮಹಿಳೆಯರು ಆರತಿ ಬೆಳಗಿ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮೆರವಣಿಗೆಯ ಆಕರ್ಷಣೆಯಾಗಿದ್ದವು. ಆಂಜನೇಯ ದೇವರ ದರ್ಶನ ಪಡೆದು ಗ್ರಾಮ ವಾಸ್ತವ್ಯ ಆರಂಭಿಸಿದ ಡಿಸಿ, ಜನರ ಕುಂದು ಕೊರತೆ ಆಲಿಸಿದರು. ಟಿಪ್ಪಣಿ ಮುಕ್ತ ಜಿಲ್ಲೆಯಾಗಿಸುವ ಗುರಿ ಕೊಂಚೂರು ಗ್ರಾಮದಿಂದಲೇ ಆರಂಭಿಸುತ್ತಿದ್ದೇನೆ ಎಂದು ಘೋಷಿಸಿ ಅನ್ನದಾತರ ಬಿಕ್ಕಟ್ಟಿನ ಸಮಸ್ಯೆಗೆ ಸರಳ ಪರಿಹಾರ ಒದಗಿಸಿದರು.
ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಡಿಸಿ ಯಶವಂತ ಗುರಿಕಾರ್, ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೊಂಚೂರು ಹಾಗೂ ಹಳಕರ್ಟಿ ಗ್ರಾಮಗಳ ಶೇ.90 ರಷ್ಟು ಜಮೀನುಗಳ ಪಹಣಿ, ಆಕಾರಬಂದ್, ಟಿಪ್ಪಣಿ ದೋಷದಂತಹ ಜಟಿಲ ಸಮಸ್ಯೆಗಳಿಗೆ ತಿಂಗಳೊಳಗಾಗಿ ಪರಿಹಾರ ಒದಗಿಸುವ ಭರವಸೆ ನೀಡಿದರು. 29 ಫಲಾನುಭವಿಗಳಿಗೆ ಪಿಂಚಣಿ, 10 ಕುಟುಂಬಗಳಿಗೆ ಪಡಿತರ ಚೀಟಿ, 80 ಜನ ಬಡವರಿಗೆ ಹೆಲ್ತ್ ಕಾರ್ಡ್, ಹೆಣ್ಣು ಹೆತ್ತ ಎರಡು ಕುಟುಂಬಕ್ಕೆ ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಓರ್ವ ಫಲಾನುಭವಿಗೆ ನಿವೇಶನ ಹಕ್ಕುಪತ್ರ ಸೇರಿದಂತೆ ಒಟ್ಟು 122 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಬಳವಡಗಿ ಕೊಂಚೂರು ಹಳ್ಳದ ಪ್ರವಾಹ ಸಮಸ್ಯೆಯ ಕುರಿತು ವರದಿ ಪಡೆದು ಕ್ರಮಕೈಗೊಳ್ಳುತ್ತೇನೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ನೀಡಲಾಗುವುದು. ಒಂದು ವಾರದಲ್ಲಿ ಕೊಂಚೂರು ಗ್ರಾಮವನ್ನು ಟಿಪ್ಪಣಿ ಮುಕ್ತ ಗ್ರಾಮವನ್ನಾಗಿ ಘೋಷಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ಇದನ್ನೂ ಓದಿ : ಅತಿಥಿ ಉಪನ್ಯಾಸಕರ ನೇಮಕ: ಶೀಘ್ರವೇ 2ನೇ ಸುತ್ತಿನ ಕೌನ್ಸೆಲಿಂಗ್
ನಾಲವಾರ, ಕಡಬೂರ, ಕೊಂಚೂರು, ಬಳವಡಗಿ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬಸ್ ಸೌಲಭ್ಯದ ಬೇಡಿಕೆಯನ್ನು ಸ್ಥಳದಲ್ಲೇ ಬಗೆಹರಿಸಿದ ಡಿಸಿ ಗುರಿಕಾರ್, ಸಾರಿಗೆ ಸಂಸ್ಥೆಯ ಬಸ್ ಜತೆಗೆ ಕೊಂಚೂರಿಗೆ ಆಗಮಿಸಿ ಶನಿವಾರದಿಂದಲೇ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಕೊಂಚೂರಿನಿಂದ ಬಳವಡಗಿ ಗ್ರಾಮದ ವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ ಹಳ್ಳಿ ಜನರ ಜತೆ ಆತ್ಮೀಯವಾಗಿ ಬೆರೆತರು. ಅಂಗನವಾಡಿ ಭಾಗವಾದ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯವನ್ನು ಡಿಸಿ ಗುರಿಕಾರ್ ಹಾಗೂ ತಾಪಂ ಇಒ ನೀಲಗಂಗಾ ಬಬಲಾದ ನೆರವೇರಿಸಿದರು. ಗ್ರಾಮದ ಗಲ್ಲಿಗಳಲ್ಲಿ ಸಂಚರಿಸಿ ಊರಿನ ಮೂಲಭೂತ ಸಮಸ್ಯೆಗಳ ಸ್ಥಿತಿಗತಿ ಅರಿತುಕೊಂಡರು. ವಾಡಿ ನಗರದಲ್ಲಿ ಸಿದ್ಧವಾಗುತ್ತಿರುವ 100 ಕೋಟಿ ವೆಚ್ಚದ ನ್ಯೂ ಟೌನ್ ಕಾಮಗಾರಿ ವೀಕ್ಷಿಸಿದರು. ಬಾಲಕರ ವಸತಿನಿಲಯಗಳಿಗೆ ಮತ್ತು ಕೊಂಚೂರು ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಭ್ಯಾಸ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿದರು.
ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ತಹಶೀಲ್ದಾರ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಟಿಎಚ್‌ಒ ಡಾ.ಅಮರದೀಪ ಪವಾರ, ಸಿಡಿಪಿಒ ಬಿ.ಎಸ್.ಹೊಸಮನಿ, ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಕುಂಬಾರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದು ಅಣಬಿ, ಎಇಇ ಶ್ರೀಧರ ಸಾರವಾಡ, ಲಾಡ್ಲಾಪುರ ಗ್ರಾಪಂ ಅಧ್ಯಕ್ಷೆ ಸೋನಿಬಾಯಿ ರಾಠೋಡ, ಡಿಡಿಎಲ್‌ಆರ್ ಶಂಕರ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ, ಹಿರಿಯ ಮುಖಂಡರಾದ ಜುಮ್ಮಣ್ಣ ಪೂಜಾರಿ, ರುದ್ರುಮುನಿ ಮಠಪತಿ, ಅಲ್ಲಾ ಪಟೇಲ್, ಖಾದರ್ ಪಟೇಲ್, ರಮೇಶ ಡಿಸಿ, ಗೋವಿಂದಪ್ಪ ಸಾಹುಕಾರ, ಸುರೇಶ ಪಾಟೀಲ ಸೇರಿದಂತೆ ನೂರಾರು ಜನ ಫಲಾನುಭವಿಗಳು ಪಾಲ್ಗೊಂಡಿದ್ದರು.
– ಮಡಿವಾಳಪ್ಪ ಹೇರೂರ