Advertisement

ಬಸ್‌ ಶುರು: ಸಿಬಂದಿಗೆ ಲಸಿಕೆ ಮಾನದಂಡ

07:29 PM Jun 21, 2021 | Team Udayavani |

ಕಲಬುರಗಿ: ಕೊರೊನಾ ಸೋಂಕಿನ ಎರಡನೇ ಅಲೆ ತಗ್ಗಿದ್ದರಿಂದ ಸರ್ಕಾರ ಲಾಕ್‌ಡೌನ್‌ ಮತ್ತುಷ್ಟು ಸಡಿಲಿಕೆ ಮಾಡಿದ್ದರಿಂದ ಸೋಮವಾರದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿವೆ. ಕೊರೊನಾದಿಂದ ರಕ್ಷಣೆಗಾಗಿ ಕರ್ತವ್ಯ ಹಾಜರಾಗುವ ನೌಕರರಿಗೆ ಲಸಿಕೆ ಮಾನದಂಡ ಅನುಸರಿಸಲು ಮುಂದಾಗಿದ್ದು, ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಮೊದಲ ಆದ್ಯತೆ ಮೇಲೆ ಸಾರಿಗೆ ಸಂಸ್ಥೆಯು ನಿಯೋಜನೆ ಮಾಡುತ್ತಿದೆ.

Advertisement

ಲಾಕ್‌ಡೌನ್‌ ಕಾರಣ ಸುಮಾರು ಎರಡು ತಿಂಗಳಿಂದ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದೀಗ ಸೋಂಕಿನ ಪಾಸಿಟಿವ್‌ ಪ್ರಮಾಣ ಕಡಿಮೆಯಾಗಿದ್ದರಿಂದ ರಾಜ್ಯ ಸರ್ಕಾರ ಹಂತಹಂತವಾಗಿ ಅನ್‌ಲಾಕ್‌ ಮಾಡುತ್ತಿದೆ. ಎರಡನೇ ಹಂತದ ಅನ್‌ಲಾಕ್‌ನಲ್ಲಿ ಸಾರಿಗೆ ಬಸ್‌ ಗಳ ಕಾರ್ಯಾಚರಣೆಗೂ ಅವಕಾಶ ನೀಡಲಾಗಿದೆ. ಒಂದು ಬಸ್‌ನಲ್ಲಿ ಶೇ.50ರಷ್ಟು ಮಾತ್ರ ಭರ್ತಿ ಮಾಡಲಾಗುತ್ತದೆ.

ಸೋಮವಾರ ಮೊದಲ ದಿನವೇ ಶೇ.30ರಿಂದ 40ರಷ್ಟು ಬಸ್‌ಗಳನ್ನು ಓಡಿಸಲು ನಿರ್ಧರಿಸಿದ್ದು, ಈಶಾನ್ಯ ಸಾರಿಗೆ ವ್ಯಾಪ್ತಿಯ ಬಳ್ಳಾರಿ, ಹೊಸಪೇಟೆ, ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಒಟ್ಟು ಒಂಭತ್ತು ವಿಭಾಗಗಳಿಂದ ಮೊದಲ ಹಂತದಲ್ಲಿ ಸುಮಾರು ಎರಡು ಸಾವಿರ ಬಸ್‌ಗಳ ಸಂಚಾರ ಆರಂಭವಾಗಲಿದೆ. ಅನ್‌ಲಾಕ್‌ ಮಾಡಿದ ಜಿಲ್ಲೆಗಳು ಮತ್ತು ಕೊರೊನಾ ಪಾಸಿಟಿವ್‌ ಪ್ರಮಾಣ ಹೆಚ್ಚಿರುವ ಅನ್‌ಲಾಕ್‌ ಎರಡನೇ ಹಂತಕ್ಕೆ ತೆರೆದುಕೊಳ್ಳದ ಜಿಲ್ಲೆಗಳು ಹಾಗೂ ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೂ ಬಸ್‌ಗಳು ಸಂಚರಿಸಲಿವೆ.

ನೆಗೆವಿಟ್‌ ವರದಿ ಕಡ್ಡಾಯ: ಈಗಾಗಲೇ ಎಲ್ಲ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗೆ ಕರ್ತ ವ್ಯಕ್ಕೆ ಹಾಜರಾಗಲು ಡಿಪೋಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮುಖ್ಯವಾಗಿ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರಿಗೆ ಕೊರೊನಾ ಪರೀಕ್ಷೆ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಕಡ್ಡಾಯವಾಗಿ ಮಾಡಲಾಗಿದೆ. ಅಲ್ಲದೇ, ಕೊರೊನಾ ಲಸಿಕೆಯನ್ನು ಎರಡು ಡೋಸ್‌ ಪಡೆದ ಸಿಬ್ಬಂದಿಯನ್ಮು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಅಗತ್ಯವಾದರೆ ಮೊದಲ ಲಸಿಕೆ ಪಡೆದವರನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭರದ ಸಿದ್ಧತೆ: ಸಾರಿಗೆ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ನಗರದ ನಾಲ್ಕು ಬಸ್‌ ಡಿಪೋಗಳಲ್ಲಿ ಸಿಬ್ಬಂದಿ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಸ್‌ ಗಳ ಸ್ವಚ್ಛತೆ, ಅವುಗಳ ಸ್ಥಿತಿಗತಿ ತಪಾಸಣೆ ಸೇರಿ ಮತ್ತಿತರ ರಿಪೇರಿ ಕಾರ್ಯದಲ್ಲಿ ತೊಡಗಿದ್ದರು. ಅಲ್ಲದೇ, ಬಸ್‌ ಡಿಪೋ ಮತ್ತು ಬಸ್‌ ನಿಲ್ದಾಣಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಯಿತು. ಜತೆಗೆ ಬಸ್‌ಗಳ ಒಳಗೆ ಮತ್ತು ಹೊರಗೂ ಸ್ಯಾನಿಟೈಸ್‌ ಮಾಡಿ ಸಜ್ಜುಗೊಳಿಸಿದರು.

Advertisement

ಜಿಲ್ಲೆಯಲ್ಲಿ ಎರಡೂ ವಿಭಾಗಗಳಿಂದಲೂ ಸುಮಾರು 300ಕ್ಕೂ ಹೆಚ್ಚಿನ ಬಸ್‌ಗಳು ಸೋಮ ವಾರದಿಂದ ರಸ್ತೆಗಿಳಿಯುವ ಸಾಧ್ಯತೆ ಇದೆ. ಕಲ ಬುರಗಿ ವಿಭಾಗ ಒಂದರಲ್ಲಿ ಅಂದಾಜು 200 ಬಸ್‌ ಗಳು ಹಾಗೂ ವಿಭಾಗ ಎರಡರಿಂದ 100 ಬಸ್‌ ಗಳನ್ನು ಓಡಿಸಲು ಸಜ್ಜುಗೊಳಿಸಲಾಗಿದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯಾದ್ಯಂತ ಈಶಾನ್ಯ ಸಾರಿಗೆ ಬಸ್‌ ಸಂಚಾರ ನಡೆಯಲಿದೆ. ಬಸ್‌ಗಳ ಸಂಚಾರ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಜಾರಿಯಾಗುವ ಆದೇಶಗಳು ಮತ್ತು ಪಕ್ಕದ ಮಹಾರಾಷ್ಟ್ರ, ತೆಲಂಗಾಣಕ್ಕೂ ಆ ರಾಜ್ಯಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ.

ಕೊಟ್ರಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕ,
ಎನ್‌ಇಕೆಆರ್‌ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next