ಕಲಬುರಗಿ: ಗಾಂಧೀಜಿ ಭಾರತ ದೇಶವಷ್ಟೇ ಅಲ್ಲ ಯುಗ ಕಂಡ ಬಹುದೊಡ್ಡ ವ್ಯಕ್ತಿ. ಸತ್ಯ, ಅಹಿಂಸೆ ಮೂಲಕ ದೇಶದಲ್ಲಿ ಶಾಂತಿ ಸ್ಥಾಪಿಸಿದ ಧೂತ. ಅಸ್ಪೃಶ್ಯತೆ ವಿರುದ್ಧ ಹೋರಾಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಾನವತಾವಾದಿ ಎಂದು ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ ಹೇಳಿದರು.
ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸರ್ವಜ್ಞ ಚಿಣ್ಣರ ಲೋಕದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಾಮ ಮನೋಹರ ಅವರು ಕಂಡಂತೆ ಮಹಾತ್ಮ ಗಾಂಧಿ ಎನ್ನುವ ಬಿ.ಎ. ಸನದಿ ಅವರ ಅನುವಾದಿತ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತವನ್ನು ರಾಮರಾಜ್ಯ ಮಾಡಬೇಕೆಂಬ ಕನಸನ್ನು ಗಾಂಧೀಜಿ ಕಂಡಿದ್ದರು. ಆ ಕನಸು ನನಸಾಗಬೇಕಾದರೆ ನಾವೆಲ್ಲ ಅವರ ಆದರ್ಶಗಳನ್ನು ಪಾಲಿಸಬೇಕು. ಅದೇ ರೀತಿ ಲಾಲ್ ಬಹಾದ್ದೂರ ಶಾಸ್ತ್ರೀ ಅವರು ಸರಳ ಜೀವನ ನಡೆಸಿದರಲ್ಲದೇ, ಉನ್ನತ ವಿಚಾರ ಹೊಂದಿದ್ದರು. ಜೈ ಜವಾನ್ ಜೈ ಕಿಸಾನ್ ಎನ್ನುವ ವಾಕ್ಯವನ್ನು ಘೋಷಿಸಿದವರು. ಭಾರತ ದೇಶಕ್ಕೆ ಈ ಇಬ್ಬರು ಮಹಾನ್ ವ್ಯಕ್ತಿಗಳು ನೀಡಿದ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಂಸ್ಥಾಪಕ ಪ್ರೊ| ಚನ್ನಾರಡ್ಡಿ ಪಾಟೀಲ ಮಾತನಾಡಿ, ಗಾಂಧೀಜಿ ಹಳ್ಳಿಗಳ ಉದ್ಧಾರವೇ ಭಾರತದ ಪ್ರಗತಿ ಎಂದು ಅರಿತಿದ್ದರು. ಸ್ವಚ್ಛ ಭಾರತದ ಕನಸು ಕಂಡಿದ್ದರು. ಅವರ ಸತ್ಯ, ಅಹಿಂಸೆ ಮಾರ್ಗವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಸ್ನೇಹಾ ಕುಲಕರ್ಣಿ ಮತ್ತು ಸರ್ವಜ್ಞ ಚಿಣ್ಣರ ಲೋಕದ ವಿದ್ಯಾರ್ಥಿಗಳು ಪ್ರಾರ್ಥನಾಗೀತೆ ಹಾಡಿದರು, ಡಾ| ವಿದ್ಯಾವತಿ ನಿರೂಪಿಸಿದರು, ಮನೋಜ ವಂದಿಸಿದರು.