ಉಡುಪಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜು. 13ರಂದು ಕಾಸರಗೋಡಿನಲ್ಲಿ ನಡೆದ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಕಾಪು ತಾಲೂಕಿನ ಗ್ರಾಮೀಣ ಪರಿಸರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ದ್ವಾದಶಿ ಪಬ್ಲಿಸಿಟಿಯ ಮಾಲಕ ಕಳತ್ತೂರು ದಿವಾಕರ ಬಿ. ಶೆಟ್ಟಿ ಅವರಿಗೆ ಮಾಧ್ಯಮ ಕ್ಷೇತ್ರದ ಸಾಧಕರಿಗೆ ನೀಡುವ “ಮಾಧ್ಯಮ ದತ್ತಿ ನಿಧಿ ಪ್ರಶಸ್ತಿ’ ಪ್ರದಾನ ನಡೆಯಿತು.
ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯುಜೆ ಕಾಸರಗೋಡು ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ಗಡಿನಾಡ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜೇಶ್ವರ ಶಾಸಕ ಅಶ್ರಫ್, ಕಾಸರಗೋಡು ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.
ದಿವಾಕರ ಶೆಟ್ಟಿಯವರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡಜನರಿಗೆ ಸ್ವಂತ ಖರ್ಚಿನಿಂದ ಸಾವಿರಕ್ಕೂ ಮಿಕ್ಕಿ ಪಲಾನುಭವಿಗಳಿಗೆ ಸರಕಾರದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರûಾ ಯೋಜನೆ, ಗೃಹಲಕ್ಷ್ಮೀ ಯೋಜನೆಯನ್ನು ಕೊಡಿಸಿರುವುದು, ಕೊರೊನಾ ಸಮಯದಲ್ಲಿ ಸುಮಾರು 6,000 ಕುಟುಂಬಗಳಿಗೆ ಹಲವಾರು ಸಂಘಟನೆ ಮೂಲಕ ಆಹಾರ ಕಿಟ್‌ಗಳನ್ನು ಒದಗಿಸಿದ್ದರು.
ಜಾಗತಿಕ ಬಂಟರ ಸಂಘದ ಮೂಲಕ ಶಶಿ ಲಾಜಿಸ್ಟಿಕ್‌ನ ಎಂ.ಡಿ. ಶಶಿಕಿರಣ್ ಶೆಟ್ಟಿಯವರು ನೀಡಿದ ಕಳತ್ತೂರು ಗ್ರಾಮದ 4 ಬಂಟ ಕುಟುಂಬಗಳಿಗೆ ತಲಾ 7 ಲ.ರೂ. ವೆಚ್ಚದ ಮನೆ ನಿರ್ಮಿಸಿಕೊಡುವಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ದಿಲ್ಲಿಯಲ್ಲಿ ಏಷ್ಯಾ ಪೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್, ಗೋವಾ ಮತ್ತು ಕೇರಳ ರಾಜ್ಯದಲ್ಲಿ ರಾಷ್ಟ್ರೀಯ ಪ್ರಶಸ್ತಿ, ಕಾಸರಗೋಡಿನಲ್ಲಿ ಕರ್ನಾಟಕ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಹಲವಾರು ಸಮ್ಮಾನಗಳನ್ನು ಸ್ವೀಕರಿಸಿದ್ದಾರೆ.