ಬೆಳಗಾವಿ: ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ನನ್ನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಗತ್ಯವಿದ್ದರೆ ಗೋವಾ ಸಿಎಂ ಜತೆ ಮಾತುಕತೆ ಸಹ ನಡೆಸಲಾಗುವುದು ಎಂದು ಬೆಳಗಾವಿ ಕ್ಷೇತ್ರದ ನೂತನ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಸಾ ಬಂಡೂರಿ ಯೋಜನೆಯಡಿ ಈಗಾಗಲೇ ಕರ್ನಾಟಕಕ್ಕೆ 13 ಟಿಎಂಸಿ ನೀರು ಹಂಚಿಕೆಯಾಗಿದೆ. ಅಧಿಸೂಚನೆ ಸಹ ಹೊರಡಿಸಲಾಗಿದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಗದಿರುವುದರಿಂದ ಸಮಸ್ಯೆಯಾಗಿದೆ. ಗೋವಾದವರು ಇಡೀ ಯೋಜನೆ ಜಾರಿ ಬಗ್ಗೆ ಆಕ್ಷೇಪ ಎತ್ತಿದರೂ ಅದರಿಂದ ಸಮಸ್ಯೆಯಾಗುವುದಿಲ್ಲ. ಈಗ ಯೋಜನೆ ಜಾರಿ ವಿಷಯ ವನ್ಯಜೀವಿ ಮಂಡಳಿ ಮುಂದೆ ಬಾಕಿ ಇದ್ದು, ಇದರ ತೆರವಿಗೆ ಪ್ರಯತ್ನಿಸಲಾಗುವುದು ಎಂದರು.
ಸವದಿ ನನ್ನ ಸಂಪರ್ಕದಲ್ಲಿ ಇಲ್ಲ: ಜಗದೀಶ್ ಶೆಟ್ಟರ್
ಬೆಳಗಾವಿ: ಚುನಾವಣೆ ಬಳಿಕ ಜಿಲ್ಲೆಯ ಕಾಂಗ್ರೆಸ್ ಭಿನ್ನಮತ ಜೋರಾಗಿದೆ. ಆದರೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ನನ್ನ ಜತೆ ಸಂಪರ್ಕದಲ್ಲಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಇನ್ನು ಮುಂದೆ ಹುಬ್ಬಳ್ಳಿಯಲ್ಲಿ ಇರುವ ಶೆಟ್ಟರ್ ಬೇರೆ, ಬೆಳಗಾವಿಯಲ್ಲಿ ಇರುವ ಶೆಟ್ಟರ್ ಬೇರೆ ಎಂದು ಮಾರ್ಮಿಕವಾಗಿ ಹೇಳಿದರು.