Advertisement

ಕಲಂಕರಿ ಸೀರೆಗಳು

07:18 PM Nov 28, 2019 | mahesh |

ಆಂಧ್ರಪ್ರದೇಶ ದಕ್ಷಿಣದ ರಾಜ್ಯಗಳಲ್ಲಿ ಒಂದು ದೊಡ್ಡ ರಾಜ್ಯ. ಅಂತೆಯೇ ಸಂಸ್ಕೃತಿ ಭೂಯಿಷ್ಠವೂ ಹೌದು.
“ಕಲಂಕರಿ’ ಎಂಬ ವಸ್ತ್ರವೀಚಿ ಬಲು ಸ್ವಾರಸ್ಯಪೂರ್ಣ. ನೈಸರ್ಗಿಕ ಬಣ್ಣ (Natural dye)ಗಳನ್ನು ಉಪಯೋಗಿಸಿ ತಯಾರಿಸುವ ಕಲಂಕರಿ ಬಟ್ಟೆ ಹಾಗೂ ಸೀರೆ 23 ಹಂತಗಳನ್ನು ಹೊಂದಿದೆ ಎಂದರೆ ಆಶ್ಚರ್ಯಕರವಷ್ಟೇ!

Advertisement

ಕಲಂಕರಿ ಸೀರೆಗಳಲ್ಲಿ ಎರಡು ಮುಖ್ಯ ಶೈಲಿಗಳಿವೆ. ಒಂದು, ಶ್ರೀ ಕಾಳಹಸ್ತಿ ಶೈಲಿ ಮತ್ತು ಎರಡನೆಯದು ಮಚಲೀಪಟ್ಟಣಂ ಶೈಲಿ. ಕಲಮ್‌ ಎಂದರೆ ಅರ್ಧ ಪೆನ್‌. ಈ ಸೀರೆ ತಯಾರಿಸುವಾಗ ಕೈಯಿಂದಲೇ ಬಣ್ಣ ಬಣ್ಣದಲ್ಲಿ ಅದ್ದಿದ ಪೆನ್‌ ಅಥವಾ ವಿವಿಧ ರಂಗಿನ ಪೆನ್‌ಗಳನ್ನು ಬಳಸಿ ಚಿತ್ತಾರ ಚಿತ್ರಿಸಲಾಗುತ್ತದೆ.

ಕಲಂಕರಿ ಸೀರೆಯ ಇನ್ನೊಂದು ವೈಶಿಷ್ಟéವೆಂದರೆ ಇದರಲ್ಲಿ ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಿಗೆ ಸಂಬಂಧಿಸಿದ ಚಿತ್ರಗಳಿಗೇ ಪ್ರಾಧಾನ್ಯತೆ ಹೆಚ್ಚು. ದೇವಾಲಯ, ಪತಾಕೆ, ರಥ, ಗಂಟೆ, ಹೂಗಳ ಚಿತ್ತಾರ, ದೇವದೇವತೆಗಳ ಚಿತ್ತಾರ, ಪೌರಾಣಿಕ ಸನ್ನಿವೇಶಗಳ ಚಿತ್ತಾರವೇ ಮುಖ್ಯವಾದದ್ದು. ಈ ಬಗೆಯ ಕಲಂಕರಿ ಬಟ್ಟೆಯ ಸೀರೆಗಳನ್ನು ಜನಪ್ರಿಯತೆಗೆ ತರುವಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪಾತ್ರ ಮಹತ್ವದ್ದು. ಅವರು ಆಲ್‌ ಇಂಡಿಯಾ ಹ್ಯಾಂಡಿಕ್ರಾಫ್ಟ್ ಬೋರ್ಡ್‌ನ ಚೇರ್‌ ಪರ್ಸನ್‌ ಆಗಿದ್ದಾಗ ಈ ಕುರಿತು ಅತೀವ ಕಾಳಜಿ-ಆಸಕ್ತಿ ವಹಿಸಿ ಕಲಂಕರಿ ಸೀರೆಗಳನ್ನು ಜನಪ್ರಿಯತೆಗೆ ತರುವಲ್ಲಿ ಕಾರಣೀಕರ್ತರಾದವರು.

ಚಾರಿತ್ರಿಕವಾಗಿ ಕಲಂಕಾರಿಗಳು ಬಳಸುವ “ಪಟ್ಟ ಚಿತ್ರ’ಗಳು ಇಂದಿಗೂ ಒರಿಸ್ಸಾ ಹಾಗೂ ನೇಪಾಳದಲ್ಲಿ ತಯಾರಿಸುವ ಸೀರೆಯ ಕಲಾವಂತಿಕೆ ಹಾಗೂ ಕಲಾವೈಭವವನ್ನು ಹೋಲುತ್ತವೆ. ಪಟ್ಟ ಎಂದರೆ ಬಟ್ಟೆ ಎಂದರ್ಥ. ಚಿತ್ರ ಎಂದರೆ ಚಿತ್ತಾರಗಳು. ಹೀಗೆ ವಿವಿಧ ರಂಗಿನಿಂದ ಸೀರೆಯ ಮೇಲೆ ಚಿತ್ರ ಬಿಡಿಸುವುದು ಎಂದರ್ಥ.

ಮಧ್ಯಕಾಲೀನ ಇಸ್ಲಾಮಿಕ್‌ ಯುಗದಲ್ಲಿ ಕಲಂಕರಿ ಎಂಬುದು ಪರ್ಶಿಯನ್‌ ಭಾಷೆಯಿಂದ ಬಂದ ಶಬ್ದ. ಗೋಲ್ಕೊಂಡಾ ಸುಲ್ತಾನರು ಕಲಂ (ಪೆನ್‌), ಕರಿ (ಚಿತ್ರಕಾರರು, ಕಲಾಕಾರರು) ಎಂಬ ಕಲಂಕರಿ ವಸ್ತ್ರೋದ್ಯಮಕ್ಕೆ ಬಹಳ ಆದ್ಯತೆ ನೀಡಿದರು.

Advertisement

ಕಾಳಹಸ್ತಿ ಕಲಂಕರಿ ಸೀರೆಯು ಶ್ರೀ ಕಾಳಹಸ್ತಿ, ಚಿತ್ತೂರು, ಆಂಧ್ರದೇಶದಲ್ಲಿ ಪ್ರಸಿದ್ಧ. ಈ ಬಗೆಯ ಕಲಂಕರಿ ಸೀರೆಗಳು ವಿಜಯನಗರ ಸಾಮ್ರಾಟರ ಕಾಲದಲ್ಲಿ ಜನಪ್ರಿಯವಾಗಿದ್ದವು. ಎರಡು ಬಗೆಯ ಪೆನ್‌ಗಳನ್ನು ಕಲಂಕರಿಯಲ್ಲಿ ಚಿತ್ತಾರ ತಯಾರಿಸಲು ಬಳಸುತ್ತಾರೆ. ಒಂದು ಬಿದಿರಿನಿಂದ ತಯಾರಾಗಿದ್ದು. ಇದನ್ನು ಬಣ್ಣ ಲೇಪಿಸಲು ಬಳಸುತ್ತಾರೆ. ಇನ್ನೊಂದು ಪೆನ್‌ ಚಿತ್ತಾರದ ರೂಪುರೇಷೆ ತಯಾರಿಸಲು ಬಳಸುತ್ತಾರೆ. ನೈಸರ್ಗಿಕ ಬಣ್ಣಗಳನ್ನು ಹೂವು, ತರಕಾರಿ ಇತ್ಯಾದಿಗಳಿಂದ ತಯಾರಿಸುತ್ತಾರೆ. ಈ ರಂಗು ಅಥವಾ ಡೈ ತಯಾರಿಸುವ ಹಂತಗಳೇ ವಿಶಿಷ್ಟ ಹಾಗೂ ಇದರಲ್ಲಿ 17 ಹಂತಗಳಿವೆ.

ಶ್ರೀಕಾಳಹಸ್ತಿ ಬಗೆಯ ಸೀರೆಯಲ್ಲಿ ಪೌರಾಣಿಕ, ರಾಮಾಯಣ, ಮಹಾಭಾರತದ ಚಿತ್ತಾರ, ಸನ್ನಿವೇಶಗಳ ಚಿತ್ರಣ ಅಧಿಕವಾಗಿ ಕಂಡುಬರುತ್ತದೆ. ಇದು ಹೆಚ್ಚಾಗಿ ಸೀರೆಯ ಸೆರಗಿನಲ್ಲಿ ಹಾಗೂ ಅಂಚಿನ ಭಾಗದಲ್ಲಿ ಚಿತ್ರಿತವಾಗಿರುತ್ತದೆ.

ಇಂದು ಈ ಚಿತ್ರಕಲೆಯ ಉಳಿವು ಹಾಗೂ ಜನಪ್ರಿಯತೆಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಒಂದು ಸಂಸ್ಥೆಯನ್ನು ಆರಂಭಿಸಿದ್ದು(SVITSA) ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್‌ ಆಫ್ ಟ್ರೆಡೀಶನಲ್‌ ಸ್ಕಲ್ಪಚರ್‌ ಹಾಗೂ ಆರ್ಕಿಟೆಕ್ಚರ್‌ ಎಂಬ ಸಂಸ್ಥೆಯೇ ಅದು.

ತನ್ಮೂಲಕ ಈ ಕಲೆಯಲ್ಲಿ ಆಸಕ್ತಿ ಉಳ್ಳವರನ್ನು ಹಾಗೂ ಅಧಿಕ ಹೊಸ ಕಲಾವಿದರನ್ನು ಪ್ರಾವೀಣ್ಯ ಪಡೆಯುವ ಸಲುವಾಗಿ ಇಲ್ಲಿ ಶಿಕ್ಷಣ (ಕೋರ್ಸ್‌) ನೀಡಲಾಗುತ್ತದೆ. ಕಲಂಕರಿ ಸೀರೆಯಲ್ಲಿ ಮುಖ್ಯವಾಗಿ ಹತ್ತಿಯ ಅಥವಾ ರೇಶಿಮೆಯ ಬಟ್ಟೆಯ ಮೇಲೆ ಚಿತ್ತಾರ ಬಿಡಿಸಲಾಗುತ್ತದೆ. ಇಂದು ಕಲಂಕರಿ ವಿನ್ಯಾಸದ ಕುರ್ತಿ, ಚೂಡಿದಾರ್‌ ಇತ್ಯಾದಿ ವಸ್ತ್ರಗಳೂ ಲಭ್ಯ.

ಈ ಕಲಂಕರಿ ಕಲೆಯು ಕ್ರಿಸ್ತಪೂರ್ವ 3000 ವರ್ಷಗಳಷ್ಟು ಹಳೆಯದೆಂದು ಚರಿತ್ರಕಾರರು ಹೇಳುತ್ತಾರೆ. ಮೊಹೆಂಜೊ ದಾರೋ ನಾಗರೀ ಕತೆಯ ಉತ್ಖನನ ಮಾಡಿದ ಸ್ಥಳಗಳಲ್ಲಿ ಕಲಂಕರಿಯ ಕಲೆ ಹಾಗೂ ಕಲಾತ್ಮಕ ಚಿತ್ರಣಗಳು ಕಾಣಿಸಿಕೊಂಡಿವೆ. ಹೀಗೆ, ಕಲಂಕರಿ ಸೀರೆ ಎಂಬುದು ಕೇವಲ ವಸ್ತ್ರವಲ್ಲ, ಚರಿತ್ರೆಯ ಮೆರುಗನ್ನೂ ಪಡೆದಿದೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next